[ಕೋವಿಡ್‌ ಸುದ್ದಿ ಸಂಗ್ರಹ] ಕೊರೊನಾ ಸಮಸ್ಯೆಗಳ ಬಗ್ಗೆ ದೇಶದ ನ್ಯಾಯಾಲಯಗಳು ಇಂದು ನಿರ್ವಹಿಸಿದ ಪ್ರಕರಣಗಳ ಮಾಹಿತಿ

ಕೊರೊನಾ ಸೋಂಕು ಸೃಷ್ಟಿಸಿರುವ ಸಮಸ್ಯೆಗಳ ಕುರಿತು ದೇಶದ ವಿವಿಧ ನ್ಯಾಯಾಲಯಗಳಲ್ಲಿ ವಿಭಿನ್ನ ಮನವಿಗಳು ಸಲ್ಲಿಕೆಯಾಗಿದ್ದು, ಕೆಲವು ಕಡೆ ನ್ಯಾಯಾಲಯಗಳೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿವೆ. ಈ ಕುರಿತ ಮಾಹಿತಿ.
Oxygen cylinder
Oxygen cylinderLineweather.com

ದೇಶದ ವಿವಿಧ ಹೈಕೋರ್ಟ್‌ಗಳು ಕೊರೊನಾ ಸೋಂಕು ಸೃಷ್ಟಿಸಿರುವ ತಲ್ಲಣದಿಂದ ಜನ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಿವಿಯಾಗುವ ಪ್ರಯತ್ನ ಮಾಡುತ್ತಿವೆ. ವಿಚಾರಣೆಗಳನ್ನು ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಿವಿ ಹಿಂಡುವ ಕೆಲಸವನ್ನು ನಿರಂತರವಾಗಿ ನಡೆಸಿವೆ. ಕೊರೊನಾ ಪರಿಸ್ಥಿತಿಯ ಕುರಿತು ಇಂದು ನಡೆದ ಪ್ರಮುಖ ಪ್ರಕರಣಗಳ ವಿಚಾರಣೆಯ ಕುರಿತ ಸಂಕ್ಷಿಪ್ತ ನೋಟ ಇಲ್ಲಿದೆ.

ಕೋವಿಡ್‌ ಆರ್ಭಟ: ಹಿರಿಯ ವಕೀಲ ರಾಜಶೇಖರ್‌ ರಾವ್‌ ಅವರನ್ನು ಅಮಿಕಸ್‌ ಕ್ಯೂರಿಯಾಗಿ ನೇಮಿಸಿದ ದೆಹಲಿ ಹೈಕೋರ್ಟ್‌

ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್‌ ಪರಿಸ್ಥಿತಿಗೆ ಸಂಬಂಧಿಸಿದಂತೆ ಹಿರಿಯ ವಕೀಲ ರಾಜಶೇಖರ್‌ ರಾವ್‌ ಅವರನ್ನು ದೆಹಲಿ ಹೈಕೋರ್ಟ್‌ ಬುಧವಾರ ಅಮಿಕಸ್‌ ಕ್ಯೂರಿಯನ್ನಾಗಿ ನೇಮಿಸಿದೆ. ಆಮ್ಲಜನಕ ಕೊರತೆ ಮತ್ತು ಇತರೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮನವಿಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ವಿಚಾರಣೆ ನಡೆಸಿದೆ.

Senior Advocate Rajshekhar Rao
Senior Advocate Rajshekhar Rao NLSIU Moot Court Society Facebook Page

ಕೇಂದ್ರ ಸರ್ಕಾರವು ನಿಗದಿಪಡಿಸಿದ ಸಂಪೂರ್ಣ ಪ್ರಮಾಣದ ಆಮ್ಲಜನಕವನ್ನು ದೆಹಲಿಗೆ ಇನ್ನೂ ತಲುಪಿಲ್ಲ ಎನ್ನುವುದನ್ನು ಗಮನಿಸಿದ ನ್ಯಾಯಾಲಯ, ಮುಖ್ಯವಾಗಿ ಪೂರ್ವ ಭಾರತದಿಂದ ಬರಬೇಕಾದ ಪೂರೈಕೆ ಬಂದಿಲ್ಲದಿರುವ ಬಗ್ಗೆ ಗಮನಿಸಿತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಂಚಿಕೆ ಆದೇಶವನ್ನು ಅಧ್ಯಯನ ಮಾಡಲು ಮತ್ತು ಪರಿಣಾಮಕಾರಿ ಹಂಚಿಕೆಯ ಕುರಿತು ಸೂಕ್ತವಾದ ಸಲಹೆಗಳನ್ನು ನೀಡುವಂತೆ ರಾವ್ ಅವರಿಗೆ ಸೂಚಿಸಿತು. ನ್ಯಾಯಮೂರ್ತಿಗಳಾದ ವಿಪಿನ್‌ ಸಾಂಘಿ ಮತ್ತು ರೇಖಾ ಪಲ್ಲಿ ಅವರಿದ್ದ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿತು.

ಆಮ್ಲಜನಕ ಸಿಲಿಂಡರ್‌, ಕೋವಿಡ್‌ ಔಷಧಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡದಂತೆ ಮನವಿ ಮಾಡಿದ ದೆಹಲಿ ಹೈಕೋರ್ಟ್‌

ಆಮ್ಲಜನಕ ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಂಗ್ರಹ ಮಾಡದಂತೆ ಮತ್ತು ಕೋವಿಡ್‌ ಔಷಧಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡದಂತೆ ಜನರಿಗೆ ದೆಹಲಿ ಹೈಕೋರ್ಟ್‌ ಮನವಿ ಮಾಡಿದೆ. “ಕಾಳಸಂತೆಯಲ್ಲಿ ಆಮ್ಲಜನಕ ಸಿಲಿಂಡರ್‌ ಖರೀದಿಸಬೇಡಿ ಮತ್ತು ಕೋವಿಡ್‌ ಔಷಧಗಳನ್ನು ಮಾರಾಟ ಮಾಡಬೇಡಿ. ಅಗತ್ಯವಿರುವವರಿಗೆ ಅದು ತಲುಪುವಂತೆ ನೋಡಿಕೊಳ್ಳಿ” ಎಂದು ನ್ಯಾಯಮೂರ್ತಿಗಳಾದ ವಿಪಿನ್‌ ಸಾಂಘಿ ಮತ್ತು ರೇಖಾ ಪಾಟೀಲ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಆಮ್ಲಜನಕ ಸಿಲಿಂಡರ್‌ಗಳನ್ನು ಸಂಗ್ರಹಿಸಿಡುವುದು ಮತ್ತು ಔಷಧಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದರಿಂದ ಕೃತಕ ಅಭಾವ ಸೃಷ್ಟಿಸದಂತೆ ಎಂದು ನ್ಯಾಯಾಲಯ ಹೇಳಿದೆ. “ದೇಶವು ಹಿಂದೆಂದೂ ಕಂಡರಿಯದ ಬಿಕ್ಕಟ್ಟು ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಒಗ್ಗಟ್ಟಿನಿಂದ ನಿಂತು ನಮ್ಮ ಒಳ್ಳೆಯ ಗುಣಗಳನ್ನು ತೋರಬೇಕು” ಎಂದು ನ್ಯಾಯಾಲಯ ಹೇಳಿದೆ.

ಎಲ್ಲಾ ನ್ಯಾಯಾಂಗ ಮತ್ತು ಅರೆ-ನ್ಯಾಯಾಂಗ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಕಾಲಮಿತಿ ಮುಂದಿನ ಆದೇಶದವರೆಗೆ ವಿಸ್ತರಣೆ: ಸುಪ್ರೀಂ ಕೋರ್ಟ್

ದೇಶದ ಎಲ್ಲಾ ನ್ಯಾಯಿಕ ಅಥವಾ ಅರೆ-ನ್ಯಾಯಿಕ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಯಾವುದೇ ಸಾಮಾನ್ಯ ಅಥವಾ ವಿಶೇಷ ಕಾನೂನುಗಳ ಅಡಿಯಲ್ಲಿರುವ ಕಾಲಮಿತಿಯನ್ನು ತನ್ನ ಮುಂದಿನ ಆದೇಶದವರೆಗೆ ವಿಸ್ತರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.

ಕೋವಿಡ್‌ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್ ಸಂಸ್ಥೆ (ಎಸ್‌ಸಿಎಒಆರ್‌ಎ) ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಸಿಜೆಐ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಎ ಎಸ್‌ ಬೋಪಣ್ಣ ಅವರಿದ್ದ ವಿಭಾಗೀಯ ಪೀಠವು ಆದೇಶ ಹೊರಡಿಸಿದೆ. “ಇಡೀ ದೇಶದಲ್ಲಿ ಕೋವಿಡ್‌ ಪ್ರಕರಣಗಳು ವ್ಯಾಪಕವಾಗಿದ್ದು, ಕೋವಿಡ್‌ ಎರಡನೇ ಅಲೆಯು ಅಸಾಮಾನ್ಯವಾದ ಸಮಸ್ಯೆ ಸೃಷ್ಟಿಸಿರುವುದರಿಂದ ಅಸಾಮಾನ್ಯ ಕ್ರಮ ಕೈಗೊಳ್ಳುವ ಮೂಲಕ ಕಕ್ಷಿದಾರರು ಮತ್ತು ಸಾರ್ವಜನಿಕರಿಗೆ ಆಗುವ ಸಮಸ್ಯೆ ತಪ್ಪಿಸಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.

ವೈದ್ಯಕೀಯ ಸಹಾಯಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಮನವಿ ಸಲ್ಲಿಸುವವರ ವಿರುದ್ಧ ಕ್ರಮಕ್ಕೆ ಯುಪಿ ಸರ್ಕಾರದ ನಿರ್ಧಾರ: ಅಲಹಾಬಾದ್ ಹೈಕೋರ್ಟ್‌ನಲ್ಲಿ ಪಿಐಎಲ್‌

ಕೋವಿಡ್‌ ರೋಗಿಗಳು, ಅವರ ಕುಟುಂಬಗಳಿಗೆ ಆಮ್ಲಜನಕಕ್ಕಾಗಿ ಅಥವಾ ಔಷಧಗಳಿಗಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಮನವಿ ಸಲ್ಲಿಸುವ ಸ್ವಯಂಸೇವಕರ ವಿರುದ್ಧ ನಾಗರಿಕ ಅಥವಾ ಕ್ರಿಮಿನಲ್ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುವಂತೆ ಉತ್ತರ ಪ್ರದೇಶದ ಸರ್ಕಾರಿ ಅಧಿಕಾರಿಗಳಿಗೆ ತುರ್ತು ನಿರ್ದೇಶನ ನೀಡಬೇಕು ಎಂದು ಬುಧವಾರ ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಲಾಗಿದೆ.

Uttar Pradesh Chief Minister Yogi Adityanath
Uttar Pradesh Chief Minister Yogi AdityanathTOI

ಆಮ್ಲಜನಕ ಮತ್ತು ಔಷಧಿಗಳ ಕೊರತೆಯನ್ನು ಉಲ್ಲೇಖಿಸಿ ಸಹಾಯಕ್ಕಾಗಿ ಮನವಿ ಮಾಡುವ ರೋಗಿಗಳು ಮತ್ತು ಅವರ ಕುಟುಂಬಗಳು ರಾಜ್ಯ ಸರ್ಕಾರವನ್ನು ಗುರಿಯಾಗಿಸಿ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂಬ "ಸುಳ್ಳು ನೆಪದ" ಅಡಿಯಲ್ಲಿ ಅವರ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಕೇತ್ ಗೋಖಲೆ ಮನವಿಯಲ್ಲಿ ತಿಳಿಸಿದ್ದಾರೆ. ಕೋವಿಡ್‌ ರೋಗಿಗಳು ಸಾಯುತ್ತಿರುವಾಗ ಸರ್ಕಾರ ಇಂಥ ಕ್ರಮಕ್ಕೆ ಮುಂದಾಗುವುದು ಜೀವನ ಮತ್ತು ಸ್ವಾತಂತ್ರ್ಯದ ಹಕ್ಕಿಗೆ ವಿರುದ್ಧವಾಗಿ ಎಂದು ಮನವಿಯಲ್ಲಿ ಹೇಳಲಾಗಿದೆ.

Kannada Bar & Bench
kannada.barandbench.com