[ಕೋವಿಡ್‌ ಸುದ್ದಿ ಸಂಗ್ರಹ] ಕೊರೊನಾ ಸಮಸ್ಯೆಗಳ ಬಗ್ಗೆ ದೇಶದ ನ್ಯಾಯಾಲಯಗಳು ನಿರ್ವಹಿಸಿದ ಪ್ರಕರಣಗಳ ವಿವರ

ಕೊರೊನಾ ಸೋಂಕು ಸೃಷ್ಟಿಸಿರುವ ಸಮಸ್ಯೆಗಳ ಕುರಿತು ದೇಶದ ವಿವಿಧ ನ್ಯಾಯಾಲಯಗಳಲ್ಲಿ ವಿಭಿನ್ನ ಮನವಿಗಳು ಸಲ್ಲಿಕೆಯಾಗಿದ್ದು, ಕೆಲವು ಕಡೆ ನ್ಯಾಯಾಲಯಗಳೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿವೆ. ಈ ಕುರಿತ ಮಾಹಿತಿ.
Modi vaccine posters and Supreme court
Modi vaccine posters and Supreme court

ಕೋವಿಡ್‌ ಲಸಿಕಾ ನೀತಿ ಪ್ರಶ್ನಿಸಿದ್ದವರ ಮೇಲೆ ದೆಹಲಿ ಪೊಲೀಸರ ಎಫ್‌ಐಆರ್‌; ರದ್ದತಿ ಕೋರಿ ಸುಪ್ರೀಂನಲ್ಲಿ ಮನವಿ

ಕೇಂದ್ರ ಸರ್ಕಾರದ ಕೋವಿಡ್‌ ಲಸಿಕಾ ನೀತಿಯನ್ನು ಟೀಕಿಸಿ ಪೋಸ್ಟರ್‌ಗಳನ್ನು ಹಾಕಿದ್ದವರ ವಿರುದ್ಧ ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ ದೆಹಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗಳನ್ನು ರದ್ದು ಮಾಡುವಂತೆ ಕೋರಿ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರದ ಲಸಿಕಾ ನೀತಿಯನ್ನು ಪ್ರಶ್ನಿಸಿ ಪೋಸ್ಟರ್‌ಗಳನ್ನು ಹಾಕಿದವರ ವಿರುದ್ಧ ಎಫ್‌ಐಆರ್‌ ದಾಖಲಿಸದಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ವಕೀಲ ಪ್ರದೀಪ್‌ ಕುಮಾರ್‌ ಯಾದವ್‌ ಸಲ್ಲಿಸಿರುವ ಮನವಿಯಲ್ಲಿ ಕೋರಲಾಗಿದೆ. “ನಮ್ಮ ಮಕ್ಕಳಿಗೆ ಸಲ್ಲಬೇಕಾದ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳುಹಿಸಿಕೊಟ್ಟಿರಿ ಮೋದಿಜೀ?” ಎಂಬ ಪೋಸ್ಟರ್‌ಗಳನ್ನು ದೆಹಲಿಯಾದ್ಯಂತ ಕಂಡು ಬಂದಿದ್ದವು. ಇದರ ಬೆನ್ನಿಗೇ ದೆಹಲಿಯ ನಾಲ್ಕು ವಿಭಾಗದಲ್ಲಿ ಪೊಲೀಸರು ಹಲವರನ್ನು ಬಂಧಿಸಿದ್ದರು.

ಕೋವಿಡ್‌ ಪ್ರಕರಣಗಳ ನಿಖರ ವರದಿಗೆ ಪ್ರಧಾನಿಯೂ ಹೇಳಿದ್ದಾರೆ; ವಾಸ್ತವ ವರದಿಗೆ ಮದ್ರಾಸ್‌ ಹೈಕೋರ್ಟ್‌ ಸಲಹೆ

ತಮಿಳುನಾಡಿನಲ್ಲಿ ಕೋವಿಡ್‌ ಪ್ರಕರಣಗಳನ್ನು ಕಡಿಮೆ ವರದಿ ಮಾಡಲಾಗುತ್ತಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಿರುವ ಮದ್ರಾಸ್‌ ಹೈಕೋರ್ಟ್‌, ನಿಖರವಾದ ವರದಿ ಮಾಡುವುದು ಏಕೆ ನಿರ್ಣಾಯಕ ಎಂಬುದನ್ನು ಒತ್ತಿ ಹೇಳಿದೆ. ಕೋವಿಡ್‌ ಪ್ರಕರಣಗಳ ವಾಸ್ತವ ವರದಿ ಮಾಡುವುದರಿಂದ ಆಮ್ಲಜನಕ, ಜೀವ ಉಳಿಸುವ ಔಷಧ ಮತ್ತು ಲಸಿಕೆಗಳನ್ನು ಪೂರೈಸಲು ಅನುಕೂಲವಾಗುತ್ತದೆ ಎಂದಿದೆ.

Madras High Court
Madras High Court

“ಕೋವಿಡ್‌ ಪ್ರಕರಣಗಳ ಸಂಖ್ಯೆಯನ್ನು ನಿಖರವಾಗಿ ವರದಿ ಮಾಡುವಂತೆ ಪ್ರಧಾನ ಮಂತ್ರಿಯೂ ಮನವಿ ಮಾಡಿದ್ದಾರೆ. ಇದರಿಂದ ಅಗತ್ಯ ಆಮ್ಲಜನಕ, ಔಷಧ ಪೂರೈಕೆಯ ಜೊತೆಗೆ ಭವಿಷ್ಯದ ಅಧ್ಯಯನಕ್ಕೆ ಅನುಕೂಲವಾಗುತ್ತದೆ” ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಮೌಖಿಕವಾಗಿ ಹೇಳಿದ್ದಾರೆ. ನೂತನ ಡಿಎಂಕೆ ಸರ್ಕಾರ ಕೋವಿಡ್‌ ನಿಖರ ವರದಿ ಮಾಡಬೇಕು ಎಂದೂ ಹೇಳಿದೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿವಾಹ ನೋಂದಣಿಗೆ ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯ ದಂಪತಿಗೆ ಕೇರಳ ಹೈಕೋರ್ಟ್‌ ಅನುಮತಿ

ಕೋವಿಡ್‌ ಸಾಂಕ್ರಾಮಿಕತೆಯಿಂದ ಇಸ್ರೇಲ್‌ನಲ್ಲಿ ಸಿಲುಕಿರುವ ಮಲೆಯಾಳಿ ದಂಪತಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿವಾಹ ನೋಂದಣಿ ಮಾಡಿಕೊಳ್ಳಲು ಅನುಮತಿಸಿ ಈಚೆಗೆ ಕೇರಳ ಹೈಕೋರ್ಟ್‌ ನಿರ್ದೇಶಿಸಿದೆ.

Kerala High Court
Kerala High Court

ಇಸ್ರೇಲ್‌ನಲ್ಲಿ ಸಿಲುಕಿರುವ ಮದುಮಗನ ಪರವಾಗಿ ಅವರ ತಂದೆ ಸೆಬಾಸ್ಟಿಯನ್‌ ಥಾಮಸ್‌ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್‌ ನಗರೇಶ್‌ ಅವರಿದ್ದ ಏಕಸದಸ್ಯ ಪೀಠವು ವಿವಾಹ ನೋಂದಣಿ ಮಾಡಿಸುವಂತೆ ಚಂಗನಾಸೆರಿಯ ಪುರಸಭೆ ಅಧಿಕಾರಿಗೆ ನಿರ್ದೇಶನ ನೀಡಿದೆ. “ವಾಸ್ತವ ಅಂಶಗಳು ಮತ್ತು ಪರಿಸ್ಥಿತಿಯನ್ನು ಪರಿಗಣಿಸಿ ಹಾಗೂ ಸಾಂಕ್ರಾಮಿಕತೆ ಹಾಗೂ ಅದರಿಂದ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಅರ್ಜಿದಾರರ ಪುತ್ರ ಮತ್ತು ಸೊಸೆ ವಿಡಿಯೋ ಕಾನ್ಫರೆನ್ಸ್‌ ವ್ಯವಸ್ಥೆ ಮೂಲಕ ವಿವಾಹ ನೋಂದಣಿ ಮಾಡಿಸುವಂತೆ ಮೂರನೇ ಪ್ರತಿವಾದಿಗೆ ಸೂಚಿಸುವ ಮೂಲಕ ಅರ್ಜಿ ವಿಲೇವಾರಿ ಮಾಡಲಾಗಿದೆ” ಎಂದು ಪೀಠ ಆದೇಶದಲ್ಲಿ ಹೇಳಿದೆ.

Related Stories

No stories found.
Kannada Bar & Bench
kannada.barandbench.com