[ಕೋವಿಡ್‌ ಸುದ್ದಿ ಸಂಗ್ರಹ] ಕೊರೊನಾ ಸಮಸ್ಯೆಗಳ ಬಗ್ಗೆ ದೇಶದ ನ್ಯಾಯಾಲಯಗಳು ನಿರ್ವಹಿಸಿದ ಪ್ರಕರಣಗಳ ವಿವರ

ಕೊರೊನಾ ಸೋಂಕು ಸೃಷ್ಟಿಸಿರುವ ಸಮಸ್ಯೆಗಳ ಕುರಿತು ದೇಶದ ವಿವಿಧ ನ್ಯಾಯಾಲಯಗಳಲ್ಲಿ ವಿಭಿನ್ನ ಮನವಿಗಳು ಸಲ್ಲಿಕೆಯಾಗಿದ್ದು, ಕೆಲವು ಕಡೆ ನ್ಯಾಯಾಲಯಗಳೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿವೆ. ಈ ಕುರಿತ ಮಾಹಿತಿ.
DMK and Madras High Court
DMK and Madras High Court
Published on

ಕೋವಿಡ್‌ ಪರಿಹಾರ ವಿತರಿಸುವಾಗ ಆಡಳಿತ ಪಕ್ಷದ ಚಿಹ್ನೆ ಬಳಸಕೂಡದು: ಮದ್ರಾಸ್‌ ಹೈಕೋರ್ಟ್‌

ಕೋವಿಡ್‌ ಪರಿಹಾರ ವಿತರಣಾ ಕೇಂದ್ರದ ನಿರ್ವಹಣೆ ಮತ್ತು ಕೋವಿಡ್‌ ಪರಿಹಾರ ಪ್ಯಾಕೇಜ್‌ಗಳನ್ನು ವಿತರಿಸುವಾಗ ಆಡಳಿತ ಪಕ್ಷದ ಚಿಹ್ನೆ ಬಳಸಕೂಡದು ಎಂದು ಮದ್ರಾಸ್‌ ಹೈಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ. ಚುನಾಯಿತ ಸರ್ಕಾರವನ್ನು ಮುಖ್ಯಮಂತ್ರಿ ಮುನ್ನಡೆಸುವುದರಿಂದ ಅವರ ಚಿತ್ರವನ್ನು ಬಳಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಅವರ ನೇತೃತ್ವದ ಪೀಠ ಹೇಳಿದೆ.

ಅಂದಿನ ಸರ್ಕಾರ ಮತ್ತು ಆ ಸರ್ಕಾರ ರಚಿಸುವ ರಾಜಕೀಯ ಧುರೀಣರ ನಡುವೆ ಯಾವಾಗಲೂ ವ್ಯತ್ಯಾಸವಿರಬೇಕಾಗುತ್ತದೆ ಎಂದು ನ್ಯಾಯಾಲಯವು ಒತ್ತಿ ಹೇಳಿದೆ. “ಮುಖ್ಯಮಂತ್ರಿ ಚಿತ್ರ ಬಳಕೆಗೆ ತಗಾದೆ ಎತ್ತಲಾಗದು. ಏಕೆಂದರೆ ಮುಖ್ಯಮಂತ್ರಿ ಚುನಾಯಿತ ಸರ್ಕಾರವನ್ನು ಮುನ್ನಡೆಸುತ್ತಾರೆ. ಆದರೆ, ಪರಿಹಾರ ವಿತರಣಾ ಕೇಂದ್ರಗಳಲ್ಲಿ ಆಡಳಿತ ಪಕ್ಷದ ಚಿಹ್ನೆ ಬಳಸಕೂಡದು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಡಿಸೆಂಬರ್‌ ಅಂತ್ಯಕ್ಕೆ 216 ಕೋಟಿ ಲಸಿಕೆಯ ಡೋಸ್‌ಗಳು ಲಭ್ಯವಾಗಲಿವೆ: ಮದ್ರಾಸ್‌ ಹೈಕೋರ್ಟ್‌ಗೆ ಕೇಂದ್ರದ ವಿವರಣೆ

ಡಿಸೆಂಬರ್‌ ಅಂತ್ಯದ ವೇಳೆಗೆ 216 ಕೋಟಿ ಕೋವಿಡ್‌ ಲಸಿಕೆಯ ಡೋಸ್‌ಗಳು ಲಭ್ಯವಾಗುವಂತೆ ಮಾಡಲಾಗುವುದು ಎಂದು ಸೋಮವಾರ ಮದ್ರಾಸ್‌ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ. ಇದು ಇಡೀ ರಾಷ್ಟ್ರಕ್ಕೆ ಸಾಕಾಗಲಿದೆಯೇ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಅವರು ಪ್ರಶ್ನಿಸಿದಾಗ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆರ್‌ ಶಂಕರನಾರಾಯಣನ್‌ ಅವರು ಹೌದು ಎಂದರು. ಕೇಂದ್ರದ ಹೇಳಿಕೆಯನ್ನು ಪೀಠವು ದಾಖಲಿಸಿಕೊಂಡಿತು.

Madras High Court
Madras High Court

ಉತ್ಪಾದಕರಿಂದ ಪ್ರತ್ಯೇಕವಾಗಿ ಲಸಿಕೆ ಖರೀದಿಸಬೇಕಿರುವುದರಿಂದ ಹಲವು ರಾಜ್ಯಗಳು ಸಮಸ್ಯೆ ಎದುರಿಸುತ್ತಿವೆ ಎಂದು ಮುಖ್ಯ ನ್ಯಾಯಮೂರ್ತಿ ಮೌಖಿಕವಾಗಿ ಹೇಳಿದರು. “ಲಸಿಕೆ ಪಡೆದುಕೊಳ್ಳುವ ಕಾರಣಕ್ಕಾಗಿ ಪರಸ್ಪರ ಕಿತ್ತಾಡುವ ಸ್ಥಿತಿ ನಿರ್ಮಾಣವಾಗುವುದು ರಾಜ್ಯಗಳ ದೃಷ್ಟಿಯಿಂದ ಒಳಿತಲ್ಲ… ಹೀಗಾಗಿ ಬಹುಶಃ ಕೇಂದ್ರ ಸರ್ಕಾರವೇ ಅದನ್ನು (ಲಸಿಕೆ ಖರೀದಿಸಿ, ಪೂರೈಸುವುದು) ಮಾಡಬೇಕು” ಎಂದು ಪೀಠ ಅಭಿಪ್ರಾಯಪಟ್ಟಿತು.

ಕೋವಿಡ್‌ ಮರಣ ಪ್ರಮಾಣ ಪತ್ರ ವಿತರಿಸಲು ಏಕೀಕೃತ ನೀತಿ ಜಾರಿಯಲ್ಲಿದೆಯೇ? ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಪರಿಹಾರ ಪಡೆದುಕೊಳ್ಳಲು ಕೋವಿಡ್‌ನಿಂದ ಮೃತಪಟ್ಟವರ ಮರಣ ಪ್ರಮಾಣ ಪತ್ರವನ್ನು ಅವರ ಕುಟುಂಬಸ್ಥರಿಗೆ ವಿತರಿಸಲು ಕೇಂದ್ರ ಸರ್ಕಾರ ಏಕೀಕೃತ ನೀತಿಯನ್ನು ಜಾರಿಗೊಳಿಸಿದೆಯೇ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಪ್ರಶ್ನಿಸಿದೆ.

Justice Ashok Bhushan, Justice MR Shah
Justice Ashok Bhushan, Justice MR Shah

ವಿಪತ್ತು ನಿರ್ವಹಣಾ ಕಾಯಿದೆಯ ಸೆಕ್ಷನ್‌ 12ರ ಅಡಿ ಕೋವಿಡ್‌ನಿಂದ ಸಾವನ್ನಪ್ಪಿದವರ ಕುಟುಂಬಸ್ಥರಿಗೆ 4 ಲಕ್ಷ ರೂಪಾಯಿ ಪರಿಹಾರ ವಿತರಿಸುವ ಕುರಿತು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಕೋರಿದ್ದ ಮನವಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌ ಮತ್ತು ಎಂ ಆರ್‌ ಶಾ ಅವರಿದ್ದ ವಿಭಾಗೀಯ ಪೀಠವು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ್ದು, ಪ್ರತಿಕ್ರಿಯೆ ಬಯಸಿದೆ. ಕೇಂದ್ರ ಸರ್ಕಾರಕ್ಕೆ ಮನವಿ ನೀಡಲಾಗಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯಾ ಭಾಟಿ ಪೀಠಕ್ಕೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯವು 10 ದಿನಗಳ ಕಾಲಾವಕಾಶ ನೀಡಿದೆ.

Kannada Bar & Bench
kannada.barandbench.com