2ರಿಂದ 18 ವರ್ಷ ವಯಸ್ಸಿನ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಎರಡು ಮತ್ತು ಮೂರನೇ ಹಂತದ ಪ್ರಯೋಗ ಮಾಡಲು ಕೋವ್ಯಾಕ್ಸಿನ್ ತಯಾರಕ ಕಂಪೆನಿ ಭಾರತ್ ಬಯೋಟೆಕ್ ಕಂಪೆನಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಬುಧವಾರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಮತ್ತೊಂದೆಡೆ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠ ಪ್ರಕರಣದ ವಿಚಾರಣೆ ಸ್ಥಗಿತಗೊಳಿಸಲು ನಿರಾಕರಿಸಿದೆ.
ಅರ್ಜಿದಾರರಾದ ವಕೀಲ ಸಂಜೀವ್ ಕುಮಾರ್ ಅವರು ಕೇಂದ್ರ ಸರ್ಕಾರ ಮೇ 13ರಂದು ಜಾರಿಗೊಳಿಸಿದ್ದ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಇಂತಹ ಪ್ರಯೋಗಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಅಲ್ಲದೆ ಪ್ರಾಣಕ್ಕೂ ಹಾನಿಕಾರಕವಾಗಿರಬಹುದು. ಆದ್ದರಿಂದ ಇಂತಹ ಆದೇಶ ಮೇಲ್ನೋಟಕ್ಕೆ ಕಾನೂನು ಬಾಹಿರ, ಸ್ವೇಚ್ಛೆಯಿಂದ ಕೂಡಿದ್ದು ಸ್ವಾಭಾವಿಕ ನ್ಯಾಯಕ್ಕೆ ವ್ಯತಿರಿಕ್ತವಾಗಿದೆ. ಇಂತಹ ಪ್ರಕರಣಗಳಲ್ಲಿ ಲಸಿಕೆ ಪ್ರಯೋಗಕ್ಕೆ ಪೋಷಕರು ಸಹಿ ಹಾಕಿದರೂ ಮಕ್ಕಳ ಹಿತದೃಷ್ಟಿಯಿಂದ ಅದು ಕಾನೂನು ಬಾಹಿರವಾಗುತ್ತದೆ. ಇದು ಐಪಿಸಿಯ ಕಲಮುಗಳಲ್ಲಿ ವಿವರಿಸಿರುವಂತೆ ನರಹತ್ಯೆಗೆ ಸಮ. ದೇಶದ ಆರ್ಥಿಕ ಸಾಮಾಜಿಕ ಸನ್ನಿವೇಶಗಳನ್ನು ಗಮನಿಸಿದರೆ ಪ್ರಲೋಭನೆಗಳ ಮೂಲಕ, ಹಣದ ಆಮಿಷವೊಡ್ಡಿ ಪೋಷಕರ ಒಪ್ಪಿಗೆ ಪಡೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಕೋವಿಡ್ ಮಾರ್ಗಸೂಚಿಗೆ ಒಳಪಟ್ಟು ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಗುರುವಾರ ಭೌತಿಕ ಸಮಾರಂಭದ ಮೂಲಕ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಕೇರಳ ಹೈಕೋರ್ಟ್ ತಿಳಿಸಿದೆ. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆ ಇರಬೇಕು. ಶಾಸಕರ ಕುಟುಂಬ ಸದಸ್ಯರು ಸಮಾರಂಭಕ್ಕೆ ಹಾಜರಾಗುವುದನ್ನು ತಡೆಯಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ. ಚಿಕಿತ್ಸಾನೀತಿ ಎಂಬ ಸರ್ಕಾರೇತರ ಸಂಸ್ಥೆಯೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.
ಪಶ್ಚಿಮ ಬಂಗಾಳ, ತಮಿಳುನಾಡಿನಂತಹ ರಾಜ್ಯಗಳಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಾಗ ಕಡಿಮೆ ಸಂಖ್ಯೆಯಲ್ಲಿ ಶಾಸಕರು ಪಾಲ್ಗೊಂಡಿದ್ದರು. ಕೋವಿಡ್ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿರುವ ಕೇರಳ ಸರ್ಕಾರ ಜನ ಜಂಗುಳಿ ತಪ್ಪಿಸಲು ಗರಿಷ್ಠ ನಿರ್ಬಂಧ ವಿಧಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ಶಾಜಿ ಪಿ ಚಾಲಿ ಅವರಿದ್ದ ಪೀಠ ಕಿವಿಮಾತು ಹೇಳಿದೆ.
ರಾಜಸ್ಥಾನದ ಕೋವಿಡ್ ಸಂಬಂಧಿತ ನ್ಯಾಯಾಲಯ ಪ್ರಕರಣಗಳ ವಿಚಾರಣೆಯನ್ನು ನೇರ ಪ್ರಸಾರ ಮಾಡುವಂತೆ ರಾಜ್ಯ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಲಾಕ್‌ಡೌನ್ ನಿರ್ಬಂಧ ಇರುವುದರಿಂದಾಗಿ ಸಾಮಾನ್ಯ ಪ್ರಜೆ ನ್ಯಾಯಾಲಯ ವಿಚಾರಣೆಗೆ ಸಾಕ್ಷಿಯಾಗುವ ಏಕೈಕ ಮಾರ್ಗ ನೇರ ಪ್ರಸಾರವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸ್ವಪ್ನಿಲ್ ತ್ರಿಪಾಠಿ ಮತ್ತು ಸುಪ್ರೀಂಕೋರ್ಟ್ ನಡುವಣ ಪ್ರಕರಣವನ್ನು ಆಧರಿಸಿ ವಕೀಲ ಅರ್ಪಿತ್ ಗುಪ್ತಾ ಅವರು ಈ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಂಗ ಸಂಸ್ಥೆಗಳ ಹಾಗೂ ನ್ಯಾಯಿಕ ಪ್ರಕ್ರಿಯೆಯಲ್ಲಿ ಭಾಗವಹಿಸುವವರ ಹೊಣೆಗಾರಿಕೆ ಹೆಚ್ಚಿಸಲು ನೇರಪ್ರಸಾರ ಸಹಾಯ ಮಾಡಲಿದೆ. ಇದರಿಂದಾಗಿ ಕೋವಿಡ್ ಸಾಂಕ್ರಾಮಿಕದ ವೇಳೆ ಪ್ರಕರಣದಲ್ಲಿ ಭಾಗಿಯಾದವರಿಗೆ ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅವರು ಎರಡನೇ ಹಂತದಿಂದ ಮಾಹಿತಿ ಪಡೆಯುವುದು ತಪ್ಪುತ್ತದೆ ಎಂದು ಗುಪ್ತಾ ತಿಳಿಸಿದ್ದಾರೆ.
ಕೆಳಹಂತದ ನ್ಯಾಯಾಲಯಗಳ ನ್ಯಾಯಾಂಗ ಅಧಿಕಾರಿಗಳನ್ನು ಕೋವಿಡ್ ಮುಂಚೂಣಿ ಕಾರ್ಯಕರ್ತರಾಗಿ ಘೋಷಿಸಬಹುದೇ ಎಂದು ಪರಿಶೀಲಿಸಲು ದೆಹಲಿ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಬುಧವಾರ ಕೇಳಿದೆ. ಇದು ಜಿಲ್ಲಾಮಟ್ಟದ ನ್ಯಾಯಾಲಯಗಳ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದ್ದಾಗಿದ್ದು ಹೈಕೋರ್ಟ್, ಸುಪ್ರೀಂಕೋರ್ಟ್ ನ್ಯಾಯಾಂಗ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ಜಸ್ಮೀತ್ ಸಿಂಗ್ ಅವರಿದ್ದ ವಿಭಾಗೀಯ ಪೀಠ ಅಗತ್ಯತೆಯ ಹೊರತಾಗಿಯೂ ಅನೇಕ ನ್ಯಾಯಾಧೀಶರು ನ್ಯಾಯಾಲಯಗಳು ಅಥವಾ ಜೈಲುಗಳಿಗೆ ಹೋಗಬೇಕಾಗುತ್ತಿರುತ್ತದೆ. ಅವರಿಗೆ ಆದ್ಯತೆ ನೀಡಬಾರದು ಎಂದು ಹೇಳಲಾಗದು ಎಂಬುದಾಗಿ ತಿಳಿಸಿತು. ಈಗಾಗಲೇ ಮೂವರು ನ್ಯಾಯಾಂಗ ಅಧಿಕಾರಿಗಳು ಕೋವಿಡ್‌ಗೆ ಬಲಿಯಾಗಿದ್ದಾರೆ. ನ್ಯಾಯಾಂಗದ ಗಾಲಿಗಳಂತೆ ನ್ಯಾಯಾಂಗ ಅಧಿಕಾರಿಗಳು ಇರುವುದರಿಂದ ಅವರನ್ನು ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸಬಹುದು ಎಂದ ನ್ಯಾಯಾಲಯ ಈ ಬಗ್ಗೆ ಕ್ರಮ ಕೈಗೊಳ್ಳಲು ದೆಹಲಿ ಸರ್ಕಾರಕ್ಕೆ ಅವಕಾಶ ನೀಡಿತು.