[ಕೋವಿಡ್‌ ಸುದ್ದಿ ಸಂಗ್ರಹ] ಕೊರೊನಾ ಸಮಸ್ಯೆಗಳ ಬಗ್ಗೆ ದೇಶದ ನ್ಯಾಯಾಲಯಗಳು ಇಂದು ನಿರ್ವಹಿಸಿದ ಪ್ರಕರಣಗಳ ಮಾಹಿತಿ

ಕೊರೊನಾ ಸೋಂಕು ಸೃಷ್ಟಿಸಿರುವ ಸಮಸ್ಯೆಗಳ ಕುರಿತು ದೇಶದ ವಿವಿಧ ನ್ಯಾಯಾಲಯಗಳಲ್ಲಿ ವಿಭಿನ್ನ ಮನವಿಗಳು ಸಲ್ಲಿಕೆಯಾಗಿದ್ದು, ಕೆಲವು ಕಡೆ ನ್ಯಾಯಾಲಯಗಳೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿವೆ. ಈ ಕುರಿತ ಮಾಹಿತಿ.
covid vaccine, slum areas
covid vaccine, slum areas

ದೇಶದ ವಿವಿಧ ಹೈಕೋರ್ಟ್‌ಗಳು ಕೊರೊನಾ ಸೋಂಕು ಸೃಷ್ಟಿಸಿರುವ ತಲ್ಲಣದಿಂದ ಜನ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಿವಿಯಾಗುವ ಪ್ರಯತ್ನ ಮಾಡುತ್ತಿವೆ. ವಿಚಾರಣೆಗಳನ್ನು ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಿವಿ ಹಿಂಡುವ ಕೆಲಸವನ್ನು ನಿರಂತರವಾಗಿ ನಡೆಸಿವೆ. ದೇಶದ ವಿವಿಧ ಹೈಕೋರ್ಟ್‌ಗಳು ಕೊರೊನಾ ಪರಿಸ್ಥಿತಿಯ ಕುರಿತು ಇಂದು ಏನೇನು ಹೇಳಿವೆ ಎಂಬುದರ ಸಂಕ್ಷಿಪ್ತ ನೋಟ ಇಲ್ಲಿದೆ.

ಕೇಂದ್ರ 802 ಮೆ.ಟನ್ ಆಮ್ಲಜನಕ ಪೂರೈಸಬೇಕು, ರಾಜ್ಯ ಸರ್ಕಾರ ಹಾಸಿಗೆಗಳ ಹೆಚ್ಚಳಕ್ಕೆ ಮುಂದಾಗಬೇಕು: ಕರ್ನಾಟಕ ಹೈಕೋರ್ಟ್‌

ಬೆಂಗಳೂರಿನಲ್ಲಿ ಮತ್ತು 5,000 ಕ್ಕೂ ಹೆಚ್ಚು ಸಕ್ರಿಯ ಕೋವಿಡ್‌ ಪ್ರಕರಣಗಳಿರುವ ಜಿಲ್ಲೆಗಳಲ್ಲಿ ಆಸ್ಪತ್ರೆ ಹಾಸಿಗೆಗೆಗಳನ್ನು ಗಣನೀಯವಾಗಿ ಹೆಚ್ಚಿಸುವಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ನಿರ್ದೇಶನ ನೀಡಿದೆ. ಇದೇ ವೇಳೆ ಕೇಂದ್ರ ಸರ್ಕಾರ 802 ಮೆ. ಟನ್ ಆಮ್ಲಜನಕ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಅದು ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಹಿಂದಿನ ದಿನಕ್ಕೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ಹಾಸಿಗೆಗಳ ಲಭ್ಯತೆಯಲ್ಲಿ ಅಲ್ಪ ಏರಿಕೆ ಮಾತ್ರ ಕಂಡುಬಂದಿದೆ ಎಂದು ಗಮನಿಸಿದ ಬಳಿಕ ಈ ಆದೇಶ ನೀಡಿದೆ. ರಾಜ್ಯದಲ್ಲಿ ಕೋವಿಡ್‌ ರೋಗಿಗಳು ಎದುರಿಸುತ್ತಿರುವ ವಿವಿಧ ತೊಂದರೆಗಳನ್ನು ಎತ್ತಿ ತೋರಿಸುವ ಎರಡು ಪತ್ರಗಳನ್ನು ಆಧರಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್‌ 29ಕ್ಕೆ ನಿಗದಿಯಾಗಿದೆ.

ಕೇಂದ್ರದ ನೂತನ ಕೋವಿಡ್‌ ಲಸಿಕೆ ನೀತಿ ಪ್ರಶ್ನಿಸಿ ಅರ್ಜಿಗಳ ಸಲ್ಲಿಕೆ; ಕೇಂದ್ರದ ಪ್ರತಿಕ್ರಿಯೆ ಕೇಳಿದ ಕೇರಳ ಹೈಕೋರ್ಟ್‌

ಪ್ರಸಕ್ತ ಕೋವಿಡ್‌ ಲಸಿಕೆ ನೀತಿಯು ಸಂವಿಧಾನದ 14, 19 ಹಾಗೂ 21ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದು ಕೇರಳ ವಿಧಾನಸಭೆಯ ವಿರೋಧಪಕ್ಷದ ಉಪನಾಯಕ ಡಾ. ಎಂ ಕೆ ಮುನೀರ್‌ ಹಾಗೂ ಇತರರು ಸಲ್ಲಿಸಿದ ವಿವಿಧ ಅರ್ಜಿಗಳ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್‌ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ. ಎಲ್ಲ ಭಾರತೀಯರಿಗೂ ಕೋವಿಡ್‌ ಲಸಿಕೆ ನೀಡುವುದು ಹಾಗೂ ಅದಕ್ಕೆ ಬೇಕಾದ ಲಸಿಕೆಗಳ ಕ್ರೋಢೀಕರಣ ಮಾಡುವುದು ರಾಷ್ಟ್ರೀಯ ಲಸಿಕಾ ನೀತಿಯಡಿ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅರ್ಜಿಗಳಲ್ಲಿ ವಾದಿಸಲಾಗಿದೆ. ಕೋವಿಡ್‌ ಲಸಿಕೆಗಳನ್ನು ಕೇಂದ್ರವು ಸಬ್ಸಿಡಿ ದರದಲ್ಲಿ ತೆಗೆದುಕೊಂಡರೆ, ರಾಜ್ಯಗಳು ಹೆಚ್ಚಿನ ದರಕ್ಕೆ ತೆಗೆದುಕೊಳ್ಳಬೇಕಾಗಿರುವ ಬಗ್ಗೆಯೂ ಆಕ್ಷೇಪಣೆ ಎತ್ತಲಾಗಿದೆ. ಜನತೆಯ ಆರೋಗ್ಯ ರಕ್ಷಣೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡರ ಜವಾಬ್ದಾರಿ. ಹಾಗಿರುವಾಗ ರಾಜ್ಯ ಸರ್ಕಾರವು ಏಕೆ ಹೆಚ್ಚಿನ ದರ ತೆರಬೇಕು ಎಂದು ಎಂದು ಅರ್ಜಿಗಳಲ್ಲಿ ಪ್ರಶ್ನಿಸಲಾಗಿದೆ.

ಕೋವಿಡ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಕೂಡ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವುದರಿಂದ ಸದ್ಯಕ್ಕೆ ಯಾವುದೇ ಆದೇಶ ನೀಡುವುದಿಲ್ಲ ಎಂದು ಕೇರಳ ಹೈಕೋರ್ಟ್ ಸ್ಪಷ್ಟಪಡಿಸಿದೆ. ಪ್ರಕರಣದ ವಿಚಾರಣೆಯನ್ನು ಮೇ ಮೊದಲ ವಾರದಲ್ಲಿ ನಡೆಸಲು ನಿರ್ಧರಿಸಲಾಗಿದ್ದು ಕೇಂದ್ರ ಸರ್ಕಾರ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕೇರಳ ಸರ್ಕಾರ ಹಾಗೂ ಕ್ರಮವಾಗಿ ಕೋವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌ ಲಸಿಕೆ ತಯಾರಿಸುತ್ತಿರುವ ಸಿರಂ ಮತ್ತು ಭಾರತ್‌ ಬಯೋಟೆಕ್‌ ಕಂಪೆನಿಗಳಿಗೆ ನೋಟಿಸ್‌ ನೀಡಲಾಗಿದೆ. ಪ್ರಕರಣವನ್ನು ಇದುವರೆಗೆ ದಾಖಲಿಸಿಕೊಳ್ಳಲಾಗಿಲ್ಲ.

ಆಮ್ಲಜನಕ ಪೂರೈಸುವ ಸಮರೋಪಾದಿಯ ಕಾರ್ಯದಲ್ಲಿ ಪ್ರಧಾನಿ ಭಾಗಿ: ಸುಪ್ರೀಂಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರ

ಕೋವಿಡ್‌ ಬಿಕ್ಕಟ್ಟನ್ನು ಎದುರಿಸಲು ಕೈಗೊಂಡ ಕ್ರಮಗಳ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ದಾಖಲಿಸಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಮ್ಲಜನಕ ಪೂರೈಸುವ ಸಮರೋಪಾದಿಯ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಈ ವಿಷಯ ಉಲ್ಲೇಖಿಸಿರುವ ಅದು ಆಮ್ಲಜನಕ ಪೂರೈಕೆಗೆ ಕ್ರಮ ಕೈಗೊಳ್ಳಲು ಸಮರೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದ್ದು ಸಮಸ್ಯೆ ಎದುರಿಸಲು ನವೀನ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.

ಈ ವಿಷಯವನ್ನು ಮಂಗಳವಾರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯದ ಗಮನಕ್ಕೆ ತಂದರು. ಪ್ರಧಾನಿ ಜೊತೆಗೆ ಗೃಹ ಸಚಿವರು ಕೂಡ ಆಮ್ಲಜನಕ ಪೂರೈಕೆಗೆ ಶ್ರಮಿಸುತ್ತಿದ್ದಾರೆ ಎಂದು ವಿವರಿಸಿದ ಅವರು ಎಲ್ಲಾ ರಾಜಕೀಯ ಪಕ್ಷಗಳು ಪಕ್ಷ ಭೇದ ಮರೆತು ಸಹಕರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಕೋವಿಡ್‌ ಎದುರಿಸಲು ರಾಷ್ಟ್ರೀಯ ಯೋಜನೆ ರೂಪಿಸುವ ಬಗ್ಗೆ ಪ್ರಸ್ತಾಪಿಸಿದ ಅವರು ದಿನನಿತ್ಯದ ಸೂಕ್ಷ್ಮ ಸಂಗತಿಗಳನ್ನು ರಾಷ್ಟ್ರೀಯ ಯೋಜನೆಯಲ್ಲಿ ಅಡಕವಾಗಿರುವುದಿಲ್ಲ ಹಾಗೂ ಹಾಗೆ ಮಾಡಲಾಗದು ಎಂದು ಕೂಡ ಅವರು ವಿವರಿಸಿದರು.

ಆಮ್ಲಜನಕ ಕೊರತೆಯಿಂದ ಮೃತಪಟ್ಟ ರೋಗಿಗಳಿಗೆ ಪರಿಹಾರ ಒದಗಿಸುವುದು ಸರ್ಕಾರದ ಜವಾಬ್ದಾರಿ: ದೆಹಲಿ ಹೈಕೋರ್ಟ್‌

ಕೋವಿಡ್‌ ಬಿಕ್ಕಟ್ಟಿನ ನಡುವೆ ಆಮ್ಲಜನಕದ ಕೊರತೆಯಿಂದಾಗಿ ದೆಹಲಿಯ ಆಸ್ಪತ್ರೆಗಳಲ್ಲಿ ಎಷ್ಟು ಸಾವು ಸಂಭವಿಸಿವೆ ಎಂದು ಅಫಿಡವಿಟ್‌ ಸಲ್ಲಿಸುವಂತೆ ಎಎಪಿ ಸರ್ಕಾರಕ್ಕೆ ದೆಹಲಿ ಹೈಕೋರ್ಟ್‌ ಸೂಚಿಸಿದೆ. ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ರೇಖಾ ಪಲ್ಲಿ ಅವರಿದ್ದ ವಿಭಾಗೀಯ ಪೀಠ ಸಾವಿನ ಸಮಯ ಸೇರಿದಂತೆ ಸಂಪೂರ್ಣ ವಿವರಗಳನ್ನು ಕೇಳಿದೆ.

ಆಮ್ಲಜನಕ ಕೊರತೆಯಿಂದ ಮೃತಪಟ್ಟ ರೋಗಿಗಳಿಗೆ ಪರಿಹಾರ ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದಿರುವ ನ್ಯಾಯಾಲಯ ನಾಲ್ಕು ದಿನಗಳ ಒಳಗೆ ಈ ಕುರಿತು ಅಫಿಡವಿಟ್‌ ಸಲ್ಲಿಸುವಂತೆ ಆದೇಶಿಸಿದೆ. ದೇಶದ ರಾಜಧಾನಿಯಲ್ಲಿ ಸಾಂಕ್ರಾಮಿಕ ರೋಗದ ಬಿಕ್ಕಟಿನ ಕುರಿತಂತೆ ಸಲ್ಲಿಸಲಾಗಿದ್ದ ಕೆಲವು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ಜಾರಿಗೊಳಿಸಿದೆ.

ನೇರವಾಗಿ ಜನರಿಗೆ ಕೋವಿಡ್‌ ಔಷಧ ವಿತರಿಸುತ್ತಿರುವ  ಖಾಸಗಿ ಕಂಪೆನಿಗಳ ವಿರುದ್ಧ ಪ್ರತಿಬಂಧಕಾಜ್ಞೆ: ಬಾಂಬೆ ಹೈಕೋರ್ಟ್‌

ಯಾವುದೇ ಖಾಸಗಿ ಕಂಪನಿಯು ಕೋವಿಡ್‌ ಔಷಧಿಗಳನ್ನು ವ್ಯಕ್ತಿಗಳಿಗೆ ನೇರವಾಗಿ ವಿತರಿಸುವುದು ಕಂಡುಬಂದರೆ, ಅವರ ವಿರುದ್ಧ ಪ್ರತಿಬಂಧಕಾಜ್ಞೆ ನೀಡಲಾಗುವುದು ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಎಚ್ಚರಿಕೆ ನೀಡಿದೆ. ಮಹಾರಾಷ್ಟ್ರದಲ್ಲಿ ರಾಜಕಾರಣಿಯೊಬ್ಬರು ರೆಮ್‌ಡೆಸಿವಿರ್‌ನ 10,000 ಶೀಶೆಗಳನ್ನು ನೇರವಾಗಿ ನಾಗರಿಕರಿಗೆ ವಿತರಿಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ.

ರಾಜ್ಯದಲ್ಲಿ ಅಸಮರ್ಪಕ ಕೋವಿಡ್‌ ವೈದ್ಯಕೀಯ ಚಿಕಿತ್ಸೆ ಕುರಿತು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್‌ ಕುಲಕರ್ಣಿ ಅವರಿದ್ದ ಪೀಠ ಈ ವಿಷಯ ತಿಳಿಸಿತು. ರೆಮ್‌ಡಿಸಿವಿರ್‌ ಲಸಿಕೆಯನ್ನು ಎಷ್ಟು ರಾಜ್ಯಗಳಿಗೆ ಮತ್ತು ವಿಶೇಷವಾಗಿ ಮಹಾರಾಷ್ಟ್ರಕ್ಕೆ ಒದಗಿಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಪರ ವಾದ ಮಂಡಿಸುತ್ತಿರುವ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ಅವರಿಗೆ ಸೂಚಿಸಿತು.

Related Stories

No stories found.
Kannada Bar & Bench
kannada.barandbench.com