[ಕೋವಿಡ್‌ ಸುದ್ದಿ ಸಂಗ್ರಹ] ಕೊರೊನಾ ಸಮಸ್ಯೆಗಳ ಬಗ್ಗೆ ದೇಶದ ನ್ಯಾಯಾಲಯಗಳು ಇಂದು ನಿರ್ವಹಿಸಿದ ಪ್ರಕರಣಗಳ ವಿವರ

ಕೊರೊನಾ ಸೋಂಕು ಸೃಷ್ಟಿಸಿರುವ ಸಮಸ್ಯೆಗಳ ಕುರಿತು ದೇಶದ ವಿವಿಧ ನ್ಯಾಯಾಲಯಗಳಲ್ಲಿ ವಿಭಿನ್ನ ಮನವಿಗಳು ಸಲ್ಲಿಕೆಯಾಗಿದ್ದು, ಕೆಲವು ಕಡೆ ನ್ಯಾಯಾಲಯಗಳೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿವೆ. ಈ ಕುರಿತ ಮಾಹಿತಿ.
[ಕೋವಿಡ್‌ ಸುದ್ದಿ ಸಂಗ್ರಹ] ಕೊರೊನಾ ಸಮಸ್ಯೆಗಳ ಬಗ್ಗೆ ದೇಶದ ನ್ಯಾಯಾಲಯಗಳು ಇಂದು ನಿರ್ವಹಿಸಿದ ಪ್ರಕರಣಗಳ ವಿವರ
Published on

ತಮಿಳುನಾಡಿನಲ್ಲಿ ಆಮ್ಲಜನಕ ಸಂಗ್ರಹ ಖಾಲಿಯಾಗದಂತೆ ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ನಿರ್ದೇಶಿಸಿದ ಮದ್ರಾಸ್‌ ಹೈಕೋರ್ಟ್‌

ತಮಿಳುನಾಡಿನಲ್ಲಿ ಆಮ್ಲಜನಕ ಸಂಗ್ರಹ ಖಾಲಿಯಾಗುವ ಕಳವಳ ವ್ಯಕ್ತವಾಗಿರುವುದರಿಂದ ನಾಳೆ ವೇಳೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗುರುವಾರ ಮದ್ರಾಸ್‌ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ಆಮ್ಲಜನಕದ ಕೊರತೆಯಿಂದಾಗಿ ಜೀವಹಾನಿ ಸಂಭವಿಸಬಾರದು ಎಂಬ ಕಾರಣಕ್ಕೆ ಉನ್ನತ ಅಧಿಕಾರಿಗಳು ಈ ಕುರಿತು ಗಮನ ಹರಿಸುವ ಅಗತ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ನೇತೃತ್ವದ ಪೀಠ ತಿಳಿಸಿತು.

Madras High Court, Oxygen
Madras High Court, Oxygen

ಇದೇ ವೇಳೆ ಕೇಂದ್ರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ವಿಮಾನ ನಿಲ್ದಾಣಗಳಲ್ಲಿ ವಿದೇಶಗಳಿಂದ ಹರಿದು ಬರುತ್ತಿರುವ ವೈದ್ಯಕೀಯ ನೆರವು ನಿಲ್ದಾಣದಲ್ಲಿಯೇ ಉಳಿಯದಂತೆ ನೋಡಿಕೊಳ್ಳುತ್ತಿದ್ದು ನಲವತ್ತೈದು ನಿಮಿಷದಿಂದ ಒಂದು ಗಂಟೆ ಅವಧಿಯಲ್ಲಿ ಅವುಗಳನ್ನು ರವಾನೆ ಮಾಡಲಾಗುತ್ತಿದೆ ಎಂದರು. ಪ್ರಕರಣವನ್ನು ಮೇ 10ಕ್ಕೆ ಮುಂದೂಡಲಾಗಿದೆ.

ಬಟಾ ಬಯಲಾದ ವೈದ್ಯಕೀಯ ಮೂಲ ಸೌಕರ್ಯ ವ್ಯವಸ್ಥೆ: ದೆಹಲಿ ಹೈಕೋರ್ಟ್‌ ಅಸಮಾಧಾನ

ಕೋವಿಡ್‌ನಿಂದ ಬಳಲುತ್ತಿರುವ ದೆಹಲಿಯ ಎಲ್ಲಾ ನಿವಾಸಿಗಳಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸುವಂತೆ ದೆಹಲಿ ಹೈಕೋರ್ಟ್ ಗುರುವಾರ ಕೇಂದ್ರ ಮತ್ತು ದೆಹಲಿ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಇದೇ ವೇಳೆ ನ್ಯಾಯಾಲಯ ವೈದ್ಯಕೀಯ ಮೂಲ ಸೌಕರ್ಯ ವ್ಯವಸ್ಥೆ ಬಟಾ ಬಯಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

Justices Vipin Sanghi and Rekha Palli
Justices Vipin Sanghi and Rekha Palli

ಜನರ ಪ್ರಾಣ ಉಳಿಸುವ ಸಂದರ್ಭದಲ್ಲಿ ಸೂಕ್ತ ಮೂಲಸೌಕರ್ಯ ಒದಗಿಸುವ ಸರ್ಕಾರಗಳ ಜವಾಬ್ದಾರಿ ಕಡಿಮೆಯಾಗಬಾರದು ಎಂದು ಅದು ಹೇಳಿತು. ವೆಂಟಿಲೇಟರ್‌ ವ್ಯವಸ್ಥೆಯುಳ್ಳ ಐಸಿಯು ಹಾಸಿಗೆ ಸೌಲಭ್ಯ ಕೋರಿ 52 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ರೇಖಾ ಪಲ್ಲಿ ಅವರಿದ್ದ ವಿಭಾಗೀಯ ಪೀಠ ದೆಹಲಿಯ ಎಲ್ಲಾ ನಿವಾಸಿಗಳಿಗೆ ವೈದ್ಯಕೀಯ ಸೌಲಭ್ಯ ಒದಗಿಸುವಂತೆ ರಾಜ್ಯ ಮತ್ತು ಕೇಂದ್ರದ ಅಧಿಕಾರಿಗಳಿಗೆ ನಿರ್ದೇಶಿಸಿ ಅರ್ಜಿಯನ್ನು ವಿಲೇವಾರಿ ಮಾಡಿತು.

ಒಂದೆರಡು ತಿಂಗಳಿಗೆ ಶೇ 50ರಷ್ಟು ಆಸ್ಪತ್ರೆ ಹಾಸಿಗೆಗಳನ್ನು ಸುಪರ್ದಿಗೆ ತೆಗೆದುಕೊಳ್ಳಬಹುದೇ? ರಾಜ್ಯ ಸರ್ಕಾರವನ್ನು ಕೇಳಿದ ಕೇರಳ ಹೈಕೋರ್ಟ್‌

ಕೋವಿಡ್‌ ರೋಗಿಗಳಿಗೆ ಸ್ಥಳಾವಕಾಶ ಕಲ್ಪಿಸಲು ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಹಾಸಿಗೆಗಳನ್ನು ಸೀಮಿತ ಅವಧಿಗೆ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು ಸಾಧ್ಯವೇ ಎಂದು ಕೇರಳ ಹೈಕೋರ್ಟ್‌ ರಾಜ್ಯ ಸರ್ಕಾರವನ್ನು ಗುರುವಾರ ಪ್ರಶ್ನಿಸಿದೆ. ಪಂಚತಾರಾ ಆಸ್ಪತ್ರೆಯಾಗಿದ್ದರೂ ಅಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಪ್ರತಿಯೊಬ್ಬರೂ ಚಿಕಿತ್ಸೆ ಪಡೆಯುವಂತಾಗಬೇಕು ಎಂದು ನ್ಯಾಯಮೂರ್ತಿಗಳಾದ ದೇವನ್ ರಾಮಚಂದ್ರನ್ ಮತ್ತು ಕೌಸರ್ ಎಡಪ್ಪಾಗ್ತ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

Kerala High Court and Hospital beds
Kerala High Court and Hospital beds

ಸಾರ್ವಜನಿಕ ಸೌಲಭ್ಯ ಪಡೆಯುವಲ್ಲಿ ತಾರತಮ್ಯ ಮಾಡದಿರುವಿಕೆ, ಸಾಕಷ್ಟು ವೈದ್ಯಕೀಯ ಚಿಕಿತ್ಸೆಯ ಸೌಲಭ್ಯ, ಕೈಗೆಟಕುವ ವೈದ್ಯಕೀಯ ಚಿಕಿತ್ಸೆ ಈ ಮೂರು ವಿಚಾರಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ನ್ಯಾಯಾಲಯ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆ ಮೇ 10ಕ್ಕೆ ನಿಗದಿಯಾಗಿದೆ. ಈ ಮಧ್ಯೆ ಕೇರಳದಲ್ಲಿ ಕೋವಿಡ್‌ ಸೋಂಕು ಉಲ್ಬಣಿಸುತ್ತಿರುವುದರಿಂದ ಶನಿವಾರದಿಂದ ಲಾಕ್‌ಡೌನ್‌ ಘೋಷಿಸಲಾಗಿದೆ.

ಸಿರಂ ಸಿಇಒ ಆದರ್‌ ಪೂನಾವಾಲಾ ಅವರಿಗೆ ಜಡ್‌ ಪ್ಲಸ್‌ ಭದ್ರತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ

ಕೊರೊನಾಕ್ಕೆ ಮದ್ದಾಗಿ ಕೋವಿಶೀಲ್ಡ್‌ ಲಸಿಕೆ ತಯಾರಿಸುತ್ತಿರುವ ಸಿರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ (ಎಸ್‌ಐಐ) ಮುಖ್ಯಸ್ಥ ಆದರ್‌ ಪೂನಾವಾಲಾ ಅವರಿಗೆ ಜಡ್‌ ಪ್ಲಸ್‌ ಶ್ರೇಣಿಯ ಭದ್ರತೆ ಒದಗಿಸುವಂತೆ ಮುಂಬೈ ಮೂಲದ ವಕೀಲ ದತ್ತಾ ಮಾನೆ ಬಾಂಬೆ ಹೈಕೋರ್ಟ್‌ ಕದ ತಟ್ಟಿದ್ದಾರೆ.

Adar Poonawalla
Adar Poonawalla Facebook

ಮುಖ್ಯಮಂತ್ರಿಗಳು, ಉದ್ಯಮ ಕ್ಷೇತ್ರದ ಘಟಾನುಘಟಿಗಳು ಬೆದರಿಕೆ ಒಡ್ಡುತ್ತಿರುವುದರಿಂದ ಆದರ್‌ ಇಂಗ್ಲೆಂಡ್‌ಗೆ ತೆರಳಿರುವುದಾಗಿ ಪ್ರಕಟಿಸಿದ ಪತ್ರಿಕಾ ವರದಿಯನ್ನು ಆಧರಿಸಿ ಮಾನೆ ಅವರು ಅರ್ಜಿ ಸಲ್ಲಿಸಿದ್ದಾರೆ. ಆದರ್‌ ಅವರು ದೇಶದಿಂದ ಹೊರಗಿದ್ದರೆ ಆಗ ಕಪ್ತಾನನಿಲ್ಲದ ಹಡಗು ಬಿರುಗಾಳಿಗೆ ಸಿಲುಕಿದಂತಾಗುತ್ತದೆ ಎಂದು ಅವರು ಅರ್ಜಿಯಲ್ಲಿ ಎಚ್ಚರಿಸಿದ್ದಾರೆ.

Kannada Bar & Bench
kannada.barandbench.com