[ಕೋವಿಡ್‌ ಸುದ್ದಿ ಸಂಗ್ರಹ] ಕೊರೊನಾ ಸಮಸ್ಯೆಗಳ ಬಗ್ಗೆ ದೇಶದ ನ್ಯಾಯಾಲಯಗಳು ನಿರ್ವಹಿಸಿದ ಪ್ರಕರಣಗಳ ವಿವರ

ಕೊರೊನಾ ಸೋಂಕು ಸೃಷ್ಟಿಸಿರುವ ಸಮಸ್ಯೆಗಳ ಕುರಿತು ದೇಶದ ವಿವಿಧ ನ್ಯಾಯಾಲಯಗಳಲ್ಲಿ ವಿಭಿನ್ನ ಮನವಿಗಳು ಸಲ್ಲಿಕೆಯಾಗಿದ್ದು, ಕೆಲವು ಕಡೆ ನ್ಯಾಯಾಲಯಗಳೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿವೆ. ಈ ಕುರಿತ ಮಾಹಿತಿ.
[ಕೋವಿಡ್‌ ಸುದ್ದಿ ಸಂಗ್ರಹ] ಕೊರೊನಾ ಸಮಸ್ಯೆಗಳ ಬಗ್ಗೆ ದೇಶದ ನ್ಯಾಯಾಲಯಗಳು ನಿರ್ವಹಿಸಿದ ಪ್ರಕರಣಗಳ ವಿವರ

ಕೋವಿಡ್‌: ಮಿತಿಮೀರಿದ ಶವಸಂಸ್ಕಾರದಿಂದಾಗಿ ವಾಯುಮಾಲಿನ್ಯ ಎಂದು ಬಾಂಬೆ ಹೈಕೋರ್ಟ್‌ಗೆ ದೂರು ನೀಡಿದ ಪುಣೆಯ ವಸತಿ ಸಂಘಗಳು

ಕೋವಿಡ್‌ ಸಾವಿನಿಂದಾಗಿ ಸಮೀಪದ ಸ್ಮಶಾನಗಳಲ್ಲಿ ಶವಸಂಸ್ಕಾರ ಸಂಖ್ಯೆ ಹೆಚ್ಚಿದ್ದು ಇದರಿಂದಾಗಿ ವಾಯುಮಾಲಿನ್ಯ ಉಂಟಾಗುತ್ತಿದೆ ಎಂದು ಪುಣೆಯ ಆರು ವಸತಿ ಸಂಘಗಳು ಬಾಂಬೆ ಹೈಕೋರ್ಟ್‌ಗೆ ದೂರು ಸಲ್ಲಿಸಿವೆ. ವಾಯುಮಾಲಿನ್ಯ ಭೀತಿ ತಪ್ಪಿಸಲು ಸ್ಮಶಾನಗಳನ್ನು ವಿರಳ ಜನಸಂಖ್ಯೆ ಇರುವ ಕಡೆಗೆ ಸ್ಥಳಾಂತರಿಸಲು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.

Crematoriums (Representational)
Crematoriums (Representational)Reuters

ʼಸ್ಮಶಾನಗಳಲ್ಲಿ ದಿನವೊಂದಕ್ಕೆ 20 ದೇಹಗಳನ್ನು ಸುಡಲು ಅವಕಾಶವಿದೆ. ಆದರೆ ನೂರಕ್ಕೂ ಹೆಚ್ಚು ಶವಗಳ ದಹನವಾಗುತ್ತಿದೆ. ಶರೀರವನ್ನು ಪ್ಲಾಸ್ಟಿಕ್‌ನಿಂದ ಸುತ್ತಿರುವುದು ಕೂಡ ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿದ್ದು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವವರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಶವ ಸಂಸ್ಕಾರಕ್ಕಾಗಿ ಆಧುನಿಕ ವಿಧಾನ ಅಳವಡಿಸಿಕೊಳ್ಳಲಾಗಿದೆ ಎಂದು ನಗರಪಾಲಿಕೆ ಹೇಳುತ್ತಿರುವುದು ಸುಳ್ಳು. ಚಿತಾಗಾರಗಳ ನಿರ್ವಹಣೆಗೆ ನಿರ್ದಿಷ್ಟ ಮಾರ್ಗಸೂಚಿಗಳಿಲ್ಲʼ ಇತ್ಯಾದಿ ಆರೋಪಗಳು ಅರ್ಜಿಯಲ್ಲಿವೆ.

ಕೋವಿಡ್‌ ಸೋಂಕಿತ ಉದ್ಯೋಗಿಯ ಅಮಾನತು ಆದೇಶ ರದ್ದುಪಡಿಸಿದ ಅಲಾಹಾಬಾದ್‌ ಹೈಕೋರ್ಟ್‌

ಪ್ರಾಥಮಿಕ ವಿಚಾರಣೆ ಬಾಕಿ ಇರುವಾಗ ಅಮಾನತು ಆದೇಶ ನೀಡುವಂತಿಲ್ಲ ಎಂದು ಅಲಾಹಾಬಾದ್‌ ಹೈಕೋರ್ಟ್‌ ಸ್ಪಷ್ಟಪಡಿಸಿದ್ದು ಕೋವಿಡ್‌ ಸೋಂಕಿತ ಉದ್ಯೋಗಿಯ ಅಮಾನತು ಆದೇಶವನ್ನು ರದ್ದುಪಡಿಸಿದೆ. ಈ ಹಿಂದೆ ಇತ್ಯರ್ಥಪಡಿಸಲಾಗಿರುವ ಒಂದೆರಡು ಪ್ರಕರಣಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ರಜನೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಅಮಾನತು ಆದೇಶವನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದಿತು. ಇದೇ ವೇಳೆ ಪ್ರಾಥಮಿಕ ತನಿಖೆಯ ವರದಿ ಬಂದ ನಂತರ ಹೊಸ ಆದೇಶ ಜಾರಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಸ್ವತಂತ್ರರು ಎಂದು ನ್ಯಾಯಾಲಯ ತಿಳಿಸಿದೆ.

Allahabad High Court and Covid 19
Allahabad High Court and Covid 19

ಅರ್ಜಿದಾರ ಗೌರವ್‌ ಬನ್ಸಾಲ್‌ ಅವರು ಏಪ್ರಿಲ್ 3ರಂದು ಮೂರು ದಿನಗಳ ಕಾಲ ಸಾಂದರ್ಭಿಕ ರಜೆ ಪಡೆದಿದ್ದರು. ಅವರಿಗೆ ಕೋವಿಡ್‌ ಇರುವುದು ಏಪ್ರಿಲ್ 7ರಂದು ದೃಢಪಟ್ಟಿತ್ತು. ಹಾಗಾಗಿ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಕೋವಿಡ್‌ ವರದಿಯೊಂದಿಗೆ ತಾವು ಕೆಲಸಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಹೋದರನ ಸಹಾಯ ಪಡೆದು ಸ್ಪೀಡ್‌ ಪೋಸ್ಟ್‌ ಮೂಲಕ ರವಾನಿಸಿದ್ದರು. ಮೇ 2ರಂದು ಕೋವಿಡ್‌ ಋಣಾತ್ಮಕ ವರದಿ ಬಂದ ಮರುದಿವಸವೇ ಅವರು ಕರ್ತವ್ಯಕ್ಕೆ ಹಾಜರಾದರು. ಆದರೆ ಮೇ 5ರಂದು ಅವರ ವಿರುದ್ಧ ಪ್ರಾಥಮಿಕ ತನಿಖೆಗೆ ಆದೇಶಿಸಿ ಅಮಾನತು ಮಾಡಲಾಗಿತ್ತು.

Related Stories

No stories found.
Kannada Bar & Bench
kannada.barandbench.com