ದೇಶದ ವಿವಿಧ ಹೈಕೋರ್ಟ್‌ಗಳು ಕೊರೊನಾ ಸೋಂಕು ಸೃಷ್ಟಿಸಿರುವ ತಲ್ಲಣದಿಂದ ಜನ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಿವಿಯಾಗುವ ಪ್ರಯತ್ನ ಮಾಡುತ್ತಿವೆ. ವಿಚಾರಣೆಗಳನ್ನು ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಿವಿ ಹಿಂಡುವ ಕೆಲಸವನ್ನು ನಿರಂತರವಾಗಿ ನಡೆಸಿವೆ. ಕೊರೊನಾ ಪರಿಸ್ಥಿತಿಯ ಕುರಿತು ಇಂದು ನಡೆದ ಪ್ರಮುಖ ಪ್ರಕರಣಗಳ ವಿಚಾರಣೆಯ ಕುರಿತ ಸಂಕ್ಷಿಪ್ತ ನೋಟ ಇಲ್ಲಿದೆ.
ಸುಪ್ರೀಂಕೋರ್ಟ್ ಭಾನುವಾರ ರಾತ್ರಿ ನೀಡಿರುವ ಆದೇಶದಲ್ಲಿ ಹೆಚ್ಚುವರಿಯಾಗಿ ಆಮ್ಲಜನಕ ಸಂಗ್ರಹಕ್ಕೆ ವ್ಯವಸ್ಥೆ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದು ನಿಯಮಿತ ಪೂರೈಕೆ ವ್ಯವಸ್ಥೆ ಅಸ್ತವ್ಯಸ್ತಗೊಂಡಾಗ ಇದನ್ನು ಬಳಸಬಹುದು ಎಂದು ಹೇಳಿದೆ. ಮುಂದಿನ ನಾಲು ದಿನಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರುವಂತೆ ನ್ಯಾಯಾಲಯ ಸೂಚಿಸಿದೆ.
ಕೋವಿಡ್ ಎರಡನೇ ಅಲೆ ವೇಳೆ ಅಗತ್ಯ ಔಷಧ, ಲಸಿಕೆಗಳ ಪೂರೈಕೆ ಕುರಿತಂತೆ ದಾಖಲಿಸಿಕೊಳ್ಳಲಾದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ವೇಳೆ ನ್ಯಾ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಈ ಆದೇಶ ಜಾರಿ ಮಾಡಿದೆ. ಗುರುತಿನ ಚೀಟಿ ಇಲ್ಲದಿದ್ದರೂ ಚಿಕಿತ್ಸೆ ಹಾಗೂ ಔಷಧ ನಿರಾಕರಿಸುವಂತಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ನೆರವು ಕೋರುತ್ತಿರುವ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ತೊಂದರೆ ನೀಡುವಂತಿಲ್ಲ ಎಂದಿರುವ ನ್ಯಾಯಾಲಯ ಎರಡು ವಾರಗಳಲ್ಲಿ ಕೋವಿಡ್ ರೋಗಿಗಳ ಆಸ್ಪತ್ರೆ ದಾಖಲಾತಿ ಕುರಿತು ರಾಷ್ಟ್ರೀಯ ನೀತಿ ರೂಪಿಸಬೇಕಿದ್ದು ಅದನ್ನು ರಾಜ್ಯ ಸರ್ಕಾರಗಳು ಪಾಲಿಸಬೇಕು ಎಂದು ಸೂಚಿಸಿದೆ. ಕೊರೊನಾ ವಾರಿಯರ್‌ಗಳಂತೆ ಆರೋಗ್ಯ ವೃತ್ತಿಪರರ ಕೊಡುಗೆಯನ್ನೂ ಗುರುತಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.
ಮಹಾರಾಷ್ಟ್ರಕ್ಕೆ ಹೆಚ್ಚಿನ ರೆಮ್‌ಡಿಸಿವಿರ್ ಪೂರೈಸುವಂತೆ ಕೇಂದ್ರಕ್ಕೆ ಸೂಚಿಸಲಾಗದು. ರೆಮ್‌ಡಿಸಿವಿರ್ ಉತ್ಪಾದನೆ ಕುರಿತಂತೆ ಸ್ಪಷ್ಟ ಮಾಹಿತಿ ಇಲ್ಲದಿರುವುದರಿಂದ ಈ ಹಂತದಲ್ಲಿ ಆದೇಶ ನೀಡಿದರೆ ಅದು ಇತರೆ ರಾಜ್ಯಗಳ ಮೇಲೆ ಪರಿಣಾಮ ಬೀರುತದೆ ಎಂದು ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ತಿಳಿಸಿದೆ. ಭಾನುವಾರ ನಡೆದ ತುರ್ತು ವಿಚಾರಣೆಯೊಂದರ ವೇಳೆ ರೆಮ್‌ಡಿಸಿವಿರ್ ರಾಜ್ಯವಾರು ಹಂಚಿಕೆ ಬದಲಿಸುವಂತೆ ಕೇಂದ್ರಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಆದರೂ ನಿರ್ಧಾರವನ್ನು ಪುನರ್‌ಪರಿಶೀಲಿಸುವಂತೆ ನ್ಯಾಯಾಲಯ ಕೇಂದ್ರ ಸರ್ಕಾರವನ್ನು ಕೇಳಿಕೊಂಡಿತು.
ನಾಗಪುರ ನಗರದಲ್ಲಿ ಕೋವಿಡ್ ನಿರ್ವಹಣೆ ಕುರಿತಂತೆ ದಾಖಿಸಿಕೊಂಡಿದ್ದು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಸಕ್ರಿಯ ಪ್ರಕರಣಗಳು ಕಡಿಮೆಯಾಗಿರುವುದರಿಂದ ಕೇಂದ್ರ ಸರ್ಕಾರ ರೆಮ್‌ಡಿಸಿವಿರ್ ರಾಜ್ಯವಾರು ಹಂಚಿಕೆಯನ್ನು ಪರಿಷ್ಕರಿಸಿದ್ದು ಮಹಾರಾಷ್ಟ್ರಕ್ಕೆ ಹಂಚಿಕೆಯಾಗಬೇಕಿದ್ದ ಔಷಧದಲ್ಲಿ ಕಡಿಮೆ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಆಮ್ಲಜನಕ ಮತ್ತು ಐಸಿಯು ಸೌಲಭ್ಯಗಳಿರುವ ಆಸ್ಪತ್ರೆ ಸ್ಥಾಪಿಸಲು ದೆಹಲಿ ಸರ್ಕಾರ ಭಾರತೀಯ ಸೇನೆಯ ನೆರವು ಕೋರಿದೆ. ಸರ್ಕಾರದ ಪರವಾಗಿ ದೆಹಲಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ನ್ಯಾಯವಾದಿ ರಾಹುಲ್ ಮೆಹ್ರಾ ಈ ಸಂಬಂಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿರುವುದಾಗಿ ವಿವರಿಸಿದ್ದಾರೆ.
ರಕ್ಷಣಾ ಸಚಿವರಿಂದ ಪ್ರತಿಕ್ರಿಯೆ ದೊರೆಯಲು ಒಂದೆರಡು ದಿನಗಳು ಬೇಕಾಗಬಹುದು ಎಂದು ಅವರು ಹೇಳಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಎದುರಾಗಿರುವ ಆಮ್ಲಜನಕ ಬಿಕ್ಕಟ್ಟಿನ ಕುರಿತು ಪ್ರಕರಣವನ್ನು ನ್ಯಾಯಾಲಯ ಆಲಿಸುತ್ತಿತ್ತು. ಸೇನೆ ಮಧ್ಯಪ್ರವೇಶಿಸಲು ಇದು ಸಕಾಲ ಎಂದು ಅರ್ಜಿದಾರರ ಪರ ವಕೀಲ ಅಭಿನವ್ ವಸಿಷ್ಠ ಮನವಿ ಮಾಡಿದಾಗ ಮೆಹ್ರಾ ಈ ವಿಷಯ ತಿಳಿಸಿದರು. ದೆಹಲಿಯಲ್ಲಿರುವ ಸೇನೆಯ ನೆರವು ಪಡೆಯುವಂತೆ ಮತ್ತೊಬ್ಬ ಅರ್ಜಿದಾರರಾದ ವಕೀಲ ಕೃಷ್ಣನ್ ವೇಣುಗೋಪಾಲ್ ಮನವಿ ಮಾಡಿದರು. ಈ ಕುರಿತಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಅವರಿಂದ ಕೋರ್ಟ್ ಪ್ರತಿಕ್ರಿಯೆ ಕೇಳಿತು ಈ ಕುರಿತಂತೆ ಖುದ್ದು ರಕ್ಷಣಾ ಸಚಿವರೇ ಪರಿಶೀಲನೆ ನಡೆಸುತ್ತಿರುವುದಾಗಿ ಎಎಸ್‌ಜಿ ಚೇತನ್ ಶರ್ಮ ಮಾಹಿತಿ ನೀಡಿದರು.
ಕೋವಿಡ್ ರೋಗಲಕ್ಷಣ ಹೊಂದಿರುವ ರೋಗಿಗಳು ಕೈಗೊಂಡ ಹೈ-ರೆಸಲ್ಯೂಷನ್ ಕಂಪ್ಯೂಟರೈಸ್ಡ್ ಟೊಮೊಗ್ರಫಿ (ಎಚ್‌ಆರ್‌ಸಿಟಿ) ಪರೀಕ್ಷೆಗೆ ಬೆಲೆ ನಿಗದಿಪಡಿಸಬೇಕೆಂದು ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರದಿಂದ ಪ್ರತಿಕ್ರಿಯೆ ಕೋರಿದೆ.
ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರಿದ್ದ ವಿಭಾಗೀಯ ಪೀಠ ಅರ್ಜಿದಾರರಾದ ವಕೀಲ ಶಿವ್ಲೀನ್ ಪಾಸ್ರಿಚಾ ಅವರ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಆದ್ಯತೆ ಮೇರೆಗೆ ಆಲಿಸಿ ನೋಟಿಸ್ ನೀಡಿದೆ. ಅನಾರೋಗ್ಯದಿಂದ ಬಳಲುತ್ತಿರುವವರ ಶ್ವಾಸಕೋಶದಲ್ಲಿ ಕೋವಿಡ್ ಸೋಂಕು ಇದೆಯೇ ಮತ್ತು ಅದರ ತೀವ್ರತೆ ಎಷ್ಟಿದೆ ಎಂಬುದನ್ನು ನಿರ್ಧರಿಸಲು ಎಚ್‌ಆರ್‌ಸಿಟಿ ಪರೀಕ್ಷೆ ನಡೆಸಲಾಗುತ್ತದೆ. ಮಧ್ಯಪ್ರದೇಶ, ಪಂಜಾಬ್ ಹಾಗೂ ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ಎಚ್‌ಆರ್‌ಸಿಟಿ ಪರೀಕ್ಷೆಯ ಬೆಲೆಯನ್ನು ನಿಯಂತ್ರಿಸಲಾಗಿದೆ ಎಂದು ವಿವರಿಸಲಾಗಿದೆ.