![[ಕೋವಿಡ್ ಸುದ್ದಿ ಸಂಗ್ರಹ] ಕೊರೊನಾ ಸಮಸ್ಯೆಗಳ ಬಗ್ಗೆ ದೇಶದ ನ್ಯಾಯಾಲಯಗಳು ನಿರ್ವಹಿಸಿದ ಪ್ರಕರಣಗಳ ವಿವರ](http://media.assettype.com/barandbench-kannada%2F2021-05%2F3c24f76f-0125-44cc-b8f6-87ce87d75846%2Fbarandbench_2021_04_ded7dae5_4fb4_4140_94de_6d399a5e5b4f_854a2bee_2757_4b23_972e_7595e7b38f5c.jpg?w=480&auto=format%2Ccompress&fit=max)
ಕೋವಿಡ್ ಉಲ್ಬಣಿಸುತ್ತಿರುವ ವೇಳೆ ಉತ್ತರಾಖಂಡ ರಾಜ್ಯದಲ್ಲಿ ಮೂರು ಆಮ್ಲಜನಕ ಉತ್ಪಾದನಾ ಘಟಕಗಳಿದ್ದರೂ ಅದು ಆಮ್ಲಜನಕ ಕೋಟಾವನ್ನು ಬೇರೆ ರಾಜ್ಯಗಳಿಂದ ಏಕೆ ಪಡೆಯಬೇಕು ಎಂದು ರಾಜ್ಯ ಹೈಕೋರ್ಟ್ ಮಂಗಳವಾರ ಪ್ರಶ್ನಿಸಿತು. ಆಮ್ಲಜನಕ ವ್ಯವಸ್ಥೆ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ಆದರೆ ಅದು ಕಾರ್ಯಪ್ರವೃತ್ತವಾಗದಿದ್ದರೆ ಏನು ಮಾಡಲು ಸಾಧ್ಯ? ಕೇಂದ್ರ ಸರ್ಕಾರ ಏಕೆ ಇಂತಹ ಕಠೋರ ನಿರ್ಧಾರ ತಳೆದಿದೆ ಎಂದು ಅದು ಕೇಳಿತು.
"ವ್ಯಂಗ್ಯ ಎಂದರೆ ಮೂರು ಆಮ್ಲಜನಕ ತಯಾರಿಕಾ ಘಟಕಗಳಿದ್ದರೂ ಅಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಇತರೆ ರಾಜ್ಯಗಳಿಗೆ ಮೀಸಲಿಡುವಂತೆ ಸೂಚಿಸಲಾಗುತ್ತಿದೆ. ಈ ಘಟಕಗಳಲ್ಲಿ ಉತ್ಪತ್ತಿಯಾಗುವ ಆಮ್ಲಜನಕ ಕೋಟಾವನ್ನು ಉತ್ತರಾಖಂಡವೇ ಉಳಿಸಿಕೊಂಡು ಹೆಚ್ಚುವರಿಯಾಗಿ ಉಳಿದದ್ದನ್ನು ಇತರೆ ರಾಜ್ಯಗಳಿಗೆ ಹಂಚಲು ಸಾಧ್ಯವಿಲ್ಲ ಏಕೆ?" ಎಂದು ಅದು ಪ್ರಶ್ನಿಸಿತು. ಜೊತೆಗೆ ಕೋವಿಡ್ ನಿರ್ವಹಣೆ ಮೊಕದ್ದಮೆ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳು ಮೇ 20ರಂದು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಸೂಚಿಸಿತು.
ಕೋವಿಡ್ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದ ಉತ್ತರಪ್ರದೇಶದ ಎಲ್ಲರಿಗೂ ಎಕ್ಸ್ ಗ್ರೇಷಿಯಾ ಅಥವಾ ವಿತ್ತೀಯ ಪರಿಹಾರ ಒದಗಿಸುವ ಸಂಬಂಧ ಡಾ. ಸಂದೀಪ್ ಪಾಂಡೆ ಎಂಬುವವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಲು ಅಲಾಹಾಬಾದ್ ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ. ಕೋವಿಡ್ ಸಂತ್ರಸ್ತರಿಗೆ ಪರಿಹಾರ ಪಾವತಿಸುವುದನ್ನು ಪರಿಗಣಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಈಗಾಗಲೇ ಸೂಚಿಸಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ಆದರೆ ಸರ್ಕಾರದ ಪರ ವಾದ ಮಂಡಿಸಿದ ವಕೀಲರು ಸುಪ್ರೀಂಕೋರ್ಟ್ ಈಗಾಗಲೇ ಇಂತಹ ಪ್ರಕರಣ ಕೈಗೆತ್ತಿಕೊಂಡಿದೆ. ಅಲಾಹಾಬಾದ್ ಹೈಕೋರ್ಟ್ ಕೂಡ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ ಎಂದರು. ಆದರೂ ನ್ಯಾಯಮೂರ್ತಿಗಳಾದ ರಿತು ರಾಜ್ ಅವಸ್ಥಿ ಮತ್ತು ಮನೀಶ್ ಮಾಥುರ್ ಅವರಿದ್ದ ವಿಭಾಗೀಯ ಪೀಠ ಜುಲೈ ತಿಂಗಳಿಗೆ ಪ್ರಕರಣವನ್ನು ಪಟ್ಟಿ ಮಾಡಿತು. ಸುಪ್ರೀಂಕೋರ್ಟ್ ಅಥವಾ ಅಲಾಹಾಬಾದ್ ಹೈಕೋರ್ಟ್ ಈ ಸಂಬಂಧ ಯಾವುದಾದರೂ ನಿರ್ಧಾರ ಕೈಗೊಂಡರೆ ಅದನ್ನು ಅಧಿಕೃತವಾಗಿ ಸಲ್ಲಿಸಬೇಕು ಎಂದಿತು.
ಕೋವಿಡ್ ಋಣಾತ್ಮಕ ವರದಿ ಇಲ್ಲದ ವ್ಯಕ್ತಿಗಳನ್ನು ಗೋವಾ ಪ್ರವೇಶಿಸಲು ಅನುವು ಮಾಡಿಕೊಡಬಾರದು ಎಂದು ಉತ್ತರ ಮತ್ತು ದಕ್ಷಿಣ ಗೋವಾದ ಜಿಲ್ಲಾ ದಂಡಾಧಿಕಾರಿಗಳಿಗೆ (ಜಿಲ್ಲಾಧಿಕಾರಿಗಳು) ಬಾಂಬೆ ಹೈಕೋರ್ಟ್ ಗೋವಾ ಪೀಠ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಆದರೆ ವೈದ್ಯಕೀಯ ತುರ್ತಿನ ಬಗ್ಗೆ ಸೂಕ್ತ ದಾಖಲೆ ಒದಗಿಸಿದವರಿಗೆ ಮಾತ್ರ ವಿನಾಯಿತಿ ನೀಡಬಹುದು ಎಂದು ಅದು ಹೇಳಿದೆ. ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದ ವಿವಿಧ ಅರ್ಜಿಗಳನ್ನು ಆಧರಿಸಿ ದಕ್ಷಿಣ ಗೋವಾ ವಕೀಲರ ಸಂಘ (ಎಸ್‌ಜಿಎಎ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಈ ಸೂಚನೆ ನೀಡಲಾಗಿದೆ.
ಕಳೆದ ವಾರ, ಗೋವಾಗೆ ಪ್ರವೇಶ ಬಯಸಿದ ಸಮಯದಿಂದ 72 ಗಂಟೆ ಒಳಗೆ ಕೋವಿಡ್ ನಕಾರಾತ್ಮಕ ವರದಿ ಪಡೆದಿರದ ವ್ಯಕ್ತಿಗಳಿಗೆ ರಾಜ್ಯ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ನ್ಯಾಯಾಲಯ ಹೇಳಿತ್ತು. ಆದರೂ ಎರಡೂ ಜಿಲ್ಲೆಗಳ ದಂಡಾಧಿಕಾರಿಗಳು "ರಾಜ್ಯಕ್ಕೆ ವಾಪಸ್ಸಾಗುತ್ತಿರುವ ಗೋವಾ ನಿವಾಸಿಗಳು, ಗೋವೆಗೆ ಕೆಲಸಕ್ಕೆ ಬರುತ್ತಿರುವ ವ್ಯಕ್ತಿಗಳು ಹಾಗೂ ಲಸಿಕೆ ಪ್ರಮಾಣಪತ್ರ ಇರುವ ವ್ಯಕ್ತಿಗಳಿಗೆʼ ವಿನಾಯ್ತಿ ನೀಡಿದ್ದರು. ಈ ಸಂಬಂಧ ನ್ಯಾಯಮೂರ್ತಿಗಳಾದ ಎಂ ಎಸ್ ಸೋನಕ್ ಮತ್ತು ಎನ್ ಡಬ್ಲ್ಯೂ ಸಾಂಬ್ರೆ ಅವರಿದ್ದ ಪೀಠ ಮೇಲಿನಂತೆ ಎಚ್ಚರಿಕೆ ನೀಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಖಾನ್ ಮಾರುಕಟ್ಟೆಯಿಂದ ಇತ್ತೀಚೆಗೆ ಪೊಲೀಸರು ವಶಪಡಿಸಿಕೊಂಡಿದ್ದ ಆಮ್ಲಜನಕ ಸಾಂದ್ರಕಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದಲ್ಲಿ ನಗರದ ಉದ್ಯಮಿ ನವನೀತ್ ಕಲ್ರಾಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ದೆಹಲಿಯ ಅಡಿಷನಲ್ ಸೆಷನ್ಸ್ ಕೋರ್ಟ್ ಸೂಚಿಸಿದೆ. ಲೋಧಿ ಕಾಲೋನಿ ಪೊಲೀಸ್ ಠಾಣೆಯಿಂದ ತನಿಖೆಯನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗಕ್ಕೆ ವರ್ಗಾಯಿಸಿರುವುದರಿಂದ ಮಂಗಳವಾರ ಕೂಡ ಕಲ್ರಾ ಅವರಿಗೆ ಮಧ್ಯಂತರ ಪರಿಹಾರ ನೀಡಲು ನ್ಯಾಯಾಲಯ ನಿರಾಕರಿಸಿತು.
ನಿನ್ನೆ (ಸೋಮವಾರ) ಸಹ ನ್ಯಾಯಾಲಯ ಮಧ್ಯಂತರ ಪರಿಹಾರ ನಿರಾಕರಿಸಿತ್ತು. ಅಪರಾಧ ವಿಭಾಗ ತನಿಖೆ ನಡೆಸುತ್ತಿರುವುದರಿಂದ ನ್ಯಾಯಾಲಯದ ನ್ಯಾಯವ್ಯಾಪ್ತಿಯನ್ನು ಪ್ರಾಸಿಕ್ಯೂಷನ್ ವಿರೋಧಿಸಿತ್ತು. ನಿರೀಕ್ಷಣಾ ಜಾಮೀನು ಕೋರಿ ಕಲ್ರಾ ಸಾಕೇತ್ ನ್ಯಾಯಾಲಯದ ಮೊರೆ ಹೋಗಿದ್ದರು. ಖಾನ್ ಮಾರುಕಟ್ಟೆಯಲ್ಲಿದ್ದ ಕಲ್ರಾ ಮಾಲೀಕತ್ವದ ರೆಸ್ಟೋರೆಂಟ್‌ನಲ್ಲಿ ಆಮ್ಲಜನಕ ಸಾಂದ್ರಕಗಳನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು ಎಂಬುದು ದೆಹಲಿ ಪೊಲೀಸರ ಆರೋಪ.