ಕೋವಿಡ್ ಎರಡನೇ ಅಲೆ : ಸೋಂಕು ತಡೆಯಲು ವಿವಿಧ ಕ್ರಮಗಳಿಗೆ ಮುಂದಾದ ದೇಶದ ನ್ಯಾಯಾಲಯಗಳು

ಕೊರೊನಾ ಹತ್ತಿಕ್ಕುವ ಸಲುವಾಗಿ ಕೆಲ ನ್ಯಾಯಾಲಯಗಳು ಕಠಿಣ ನಿಲುವು ತಳೆದಿದ್ದರೆ ಮತ್ತೆ ಕೆಲವು ಕೋರ್ಟ್‌ಗಳು ಹೈಬ್ರಿಡ್ ವಿಚಾರಣೆ ಮಾದರಿಯ ಪ್ರಯೋಗಕ್ಕೆ ಇಳಿದಿವೆ. ಇನ್ನೂ ಕೆಲವು ನ್ಯಾಯಾಂಗ ಸಿಬ್ಬಂದಿಯತ್ತ ಕಾಳಜಿ ವಹಿಸಿವೆ.
ಕೋವಿಡ್ ಎರಡನೇ ಅಲೆ : ಸೋಂಕು ತಡೆಯಲು ವಿವಿಧ ಕ್ರಮಗಳಿಗೆ ಮುಂದಾದ ದೇಶದ ನ್ಯಾಯಾಲಯಗಳು

ಕೋವಿಡ್‌ ಕರಿನೆರಳು ಮತ್ತೆ ಚಾಚಿಕೊಳ್ಳತೊಡಗಿದೆ. ದೇಶದಲ್ಲಿ ದಿನವೊಂದಕ್ಕೆ ಪ್ರಕರಣಗಳ ಸಂಖ್ಯೆ ಲಕ್ಷ ದಾಟಿದ ವರದಿಯಾಗುತ್ತಿದ್ದು, ಕೋವಿಡ್‌ ಸೋಂಕು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ತಡೆಯಲು ವಿವಿಧ ರಾಜ್ಯಗಳ ಹೈಕೋರ್ಟ್‌ಗಳು ಕೂಡ ಅಣಿಯಾಗುತ್ತಿವೆ. ರೋಗದ ತೀವ್ರತೆಯನ್ನು ಆಧರಿಸಿ ವಿವಿಧ ಬಗೆಯ ನಿರ್ಧಾರಗಳನ್ನು ಅವು ಕೈಗೊಂಡಿವೆ. ಏಪ್ರಿಲ್‌ ಐದರಿಂದ ಆರರವರೆಗೆ ಕೇವಲ ಇಪ್ಪತ್ನಾಲ್ಕು ಗಂಟೆಗಳ ಅವಧಿಯಲ್ಲಿ ಅನೇಕ ನ್ಯಾಯಾಲಯಗಳು ಕೋವಿಡ್‌ ಕುರಿತು ಕೈಗೊಳ್ಳಬೇಕಾದ ಮುಂಜಾಗ್ರತೆ ಬಗ್ಗೆ ಹೆಚ್ಚು ಗಮನ ಹರಿಸಿವೆ. ಇನ್ನೂ ಕೆಲ ನ್ಯಾಯಾಲಯಗಳು ಅದಕ್ಕೂ ಮೊದಲೇ ಕೆಲ ಆದೇಶಗಳನ್ನು ಹೊರಡಿಸಿದ್ದವು. ಅವುಗಳ ವಿವರ ಹೀಗಿದೆ:

ಗುಜರಾತ್‌ ಹೈಕೋರ್ಟ್‌

ಹೆಚ್ಚುತ್ತಿರುವ ಪ್ರಕರಣಗಳ ಕುರಿತು ಏನಾದರೂ ಮಾಡಲೇಬೇಕಾದ ಅಗತ್ಯವಿದೆ. ಸಾವಿನ ಸಂಖ್ಯೆ ಹೆಚ್ಚಿದೆ ನಾವು ಇನ್ನೇನು ಮಾಡಲಾದೀತು. ರಾಜಕೀಯ ಕಾರ್ಯಕ್ರಮಗಳು ನಡೆಯಬಾರದು. ಸಾಮಾಜಿಕ ಕಾರ್ಯಕ್ರಮಗಳು ನಡೆಯಬಾರದೆ? ಎಂದು ಪ್ರಶ್ನಿಸುತ್ತಲೇ ಗುಜರಾತ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿಕ್ರಮ್‌ ನಾಥ್‌ “ಲಾಕ್‌ಡೌನ್‌, ಕರ್ಫ್ಯೂ ಅಥವಾ ಜನದಟ್ಟಣೆ ತಡೆಯಂತಹ ಕ್ರಮ ಕೈಗೊಂಡು ಪರಿಸ್ಥಿತಿಯನ್ನು ನಿಯಂತ್ರಿಸಿ” ಎಂದು ಸರ್ಕಾರಕ್ಕೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಅವರು ಹಾಗೆ ಹೇಳಲು ಮುಖ್ಯ ಕಾರಣ ಗುಜರಾತ್‌ನಲ್ಲಿ ಕೋವಿಡ್‌ ಅಲೆ ಹೆಚ್ಚಿರುವುದು. ʼಮದುವೆಗಳಲ್ಲಿ ಇನ್ನೂರು ಜನರ ಬದಲಾಗಿ ಐವತ್ತು ಮಂದಿ ಸೇರಲಷ್ಟೇ ಅವಕಾಶ ಕೊಡಿ ಎಂದು ಅವರು ಹೇಳಿದ್ದಾರೆ. ಅಲ್ಲದೆ ಪ್ರತಿದಿನ ಎಂಟರಿಂದ ಹತ್ತು ಹೈಕೋರ್ಟ್‌ ಸಿಬ್ಬಂದಿ ಕೋವಿಡ್‌ಗೆ ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್‌ 10ರಿಂದ 14ರವರೆಗೆ ಸ್ಯಾನಿಟೈಸ್‌ ಉದ್ದೇಶಕ್ಕಾಗಿ ನ್ಯಾಯಾಲಯವನ್ನು ಮುಚ್ಚಲು ನಿರ್ಧರಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌

ಭೌತಿಕವಾಗಿ ವಿಚಾರಣೆ ನಡೆಸಲು ಮುಂದಾಗಿದ್ದ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ಎರಡನೇ ಅಲೆಯ ಕಾರಣದಿಂದಾಗಿ ಆ ನಿರ್ಧಾರವನ್ನು ಹಿಂಪಡೆದಿದೆ. ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಏಪ್ರಿಲ್‌ 18ರವರೆಗೆ ವರ್ಚುವಲ್‌ ವಿಚಾರಣೆಗೆ ನ್ಯಾಯಾಲಯ ಮುಂದಾಗಿದೆ. ಎರಡೂ ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ನ್ಯಾಯಾಲಯಗಳು ಏಪ್ರಿಲ್‌ 18ರವರೆಗೆ ವೀಡಿಯೊ ಕಾನ್ಫರೆನ್ಸ್‌ ಮೂಲಕವೇ ವಿಚಾರಣೆ ನಡೆಸಬೇಕು ಎಂದು ಆಡಳಿತಾತ್ಮಕ ಆದೇಶವನ್ನು ಸೋಮವಾರ ಹೊರಡಿಸಲಾಗಿದೆ.

ಫೆಬ್ರವರಿ 3ರಂದು ನ್ಯಾಯಾಲಯ ಭೌತಿಕ ವಿಚಾರಣೆಗೆ ಅವಕಾಶ ಒದಗಿಸಿತ್ತು. ರಾಜ್ಯದ ಹೈಕೋರ್ಟ್‌ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳು ಹಾಗೂ ನ್ಯಾಯಮಂಡಳಿಗಳು ಕೂಡ ವರ್ಚುವಲ್‌ ವಿಧಾನದಲ್ಲಿಯೇ ವಿಚಾರಣೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಪಂಕಜ್‌ ಮಿತ್ತಲ್‌ ಅವರು ಸೂಚಿಸಿದ್ದಾರೆ. ಎರಡೂ ಕಡೆಯ ಕಕ್ಷೀದಾರರ ಪರ ವಕೀಲರು ಒಪ್ಪಿದರೆ ಭೌತಿಕ ವಿಚಾರಣೆ ಕೈಗೊಳ್ಳಬಹುದು ಎಂದು ಕೂಡ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಬಾಂಬೆ ಹೈಕೋರ್ಟ್‌

ಬಾಂಬೆ ಹೈಕೋರ್ಟ್‌ ಕೊಂಚ ಭಿನ್ನ ನಿರ್ಧಾರ ಕೈಗೊಂಡಿದೆ. ಸಿವಿಲ್‌ ಪ್ರಕರಣಗಳನ್ನು ವರ್ಚುವಲ್‌ ವಿಧಾನದಲ್ಲಿ ಹಾಗೂ ಕ್ರಿಮಿನಲ್‌ ಪ್ರಕರಣಗಳನ್ನು ಭೌತಿಕವಾಗಿ ವಿಚಾರಣೆ ನಡೆಸಲು ಅದು ಸೂಚಿಸಿದೆ. ಈ ವ್ಯವಸ್ಥೆ ಏಪ್ರಿಲ್ 7 ರ ಬುಧವಾರದಿಂದ ಜಾರಿಗೆ ಬರಲಿದ್ದು, ಏಪ್ರಿಲ್ 30 ರವರೆಗೆ ಮುಂದುವರೆಯಲಿದೆ. ವಿವಿಧ ಪಾಲುದಾರರೊಂದಿಗೆ ಸೋಮವಾರ ಸಭೆ ನಡೆಸಿದ ಬಳಿಕ ನ್ಯಾಯಾಲಯ ಈ ನಿರ್ಧಾರ ಪ್ರಕಟಿಸಿದೆ.

ತುರ್ತು ಪ್ರಕರಣಗಳ ಮಾತ್ರ ವಿಚಾರಣೆಗೆ ಪಟ್ಟಿ ಮಾಡಲು ನಿರ್ಧರಿಸಲಾಗಿದ್ದು ಹಾಜರಾಗುವಂತೆ ನಿರ್ದೇಶಿಸದ ಹೊರತು ನ್ಯಾಯಾಲಯದ ಆವರಣದಲ್ಲಿ ದಾವೆದಾರರಿಗೆ ಪ್ರವೇಶವಿಲ್ಲ ಎಂದು ಸಭೆ ಸೇರಿದ್ದ ಸಮಿತಿ ತಿಳಿಸಿದೆ. ಭೌತಿಕ ಮತ್ತು ವರ್ಚುವಲ್‌ ವಿಚಾರಣೆಗೆ ಅವಕಾಶ ಕೊಡುವ ಈ ನಿರ್ಧಾರ ಹಿಂದೆ ಅನುಸರಿಸಲಾಗುತ್ತಿದ್ದ ಹೈಬ್ರಿಡ್‌ ವಿಧಾನಕ್ಕೆ ಹತ್ತಿರವಾಗಿದೆ.

ಕರ್ನಾಟಕ ಹೈಕೋರ್ಟ್‌

ಕೋವಿಡ್‌ನಿಂದ ರಕ್ಷಣೆ ಪಡೆಯುವ ದೃಷ್ಟಿಯಿಂದ 45 ವರ್ಷ ತುಂಬಿದ ನ್ಯಾಯಾಲಯದ ಸಿಬ್ಬಂದಿ ಲಸಿಕೆ ಪಡೆದುಕೊಳ್ಳಲು ಮನವೊಲಿಸುವಂತೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಿಗೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

“ಕೋವಿಡ್‌ ನಿಯಂತ್ರಿಸಲು ಇರುವ ಅತ್ಯುತ್ತಮ ವಿಧಾನವೆಂದರೆ ಅರ್ಹರಾದ ನ್ಯಾಯಿಕ ಅಧಿಕಾರಿಗಳು, ನ್ಯಾಯಾಲಯದ ಸಿಬ್ಬಂದಿ ಮತ್ತು ಪರಿಷತ್‌ನ ಸದಸ್ಯರು ಲಸಿಕೆ ಪಡೆದುಕೊಳ್ಳುವಂತೆ ಮಾಡುವುದು. 45 ವರ್ಷ ತುಂಬಿದ ನ್ಯಾಯಾಲಯದ ಸಿಬ್ಬಂದಿ ಆದಷ್ಟು ಬೇಗ ಲಸಿಕೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಅವರನ್ನು ಮನವೊಲಿಸುವಂತೆ ಎಲ್ಲಾ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರು/ಘಟಕದ ಮುಖ್ಯಸ್ಥರು ಮಾಡಬೇಕು” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಲಾಹಾಬಾದ್‌ ಹೈಕೋರ್ಟ್‌

ಏಪ್ರಿಲ್‌ 9ರವರೆಗೆ ಭೌತಿಕ ವಿಚಾರಣೆ ನಡೆಸದೇ ಇರಲು ಅಲಾಹಾಬಾದ್‌ ಹೈಕೋರ್ಟ್‌ ಕೆಲ ದಿನಗಳ ಹಿಂದೆ ನಿರ್ಧರಿಸಿತು. ತುರ್ತು ಪ್ರಕರಣಗಳನ್ನಷ್ಟೇ ವಿಚಾರಣೆ ನಡೆಸಲು ಮುಂದಾಗಿದೆ. ಉತ್ತರಪ್ರದೇಶದಲ್ಲಿ ದಿಢೀರನೆ ಕೋವಿಡ್‌ ಪ್ರಕರರಣಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಅಲಾಹಾಬಾದ್‌ ಹೈಕೋರ್ಟ್‌ ಈ ನಿರ್ಧಾರ ಕೈಗೊಂಡಿದೆ.

ಆದೇಶದಂತೆ ಲಖನೌ ಮತ್ತು ಅಲಾಹಾಬಾದ್‌ ಪೀಠಗಳೆರಡಲ್ಲಿಯೂ ನೇರ ವಿಚಾರಣೆ ಇರುವುದಿಲ್ಲ. ವಿಶೇಷ ಪೀಠಗಳು ಮಾತ್ರ ತುರ್ತು ಪ್ರಕರಣಗಳ ವಿಚಾರಣೆ ನಡೆಸಲಿವೆ ಎಂದು ಮುಖ್ಯ ನ್ಯಾಯಮೂರ್ತಿ ಗೋವಿಂದ್‌ ಮಾಥುರ್‌ ಅವರು ತಿಳಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com