ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಮನೆಯಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ.
ಜನವರಿ 10ರಿಂದ ತುರ್ತು ಪ್ರಕರಣಗಳು, ಹೊಸ ಪ್ರಕರಣಗಳು, ಜಾಮೀನು, ತಡೆಯಾಜ್ಞೆಗೆ ಸಂಬಂಧಿಸಿದ ಪ್ರಕರಣಗಳು, ಬಂಧನ ಮತ್ತು ದಿನಾಂಕ ನಿಗದಿಪಡಿಸಿರುವ ಪ್ರಕರಣಗಳನ್ನಷ್ಟೇ ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಗುರುವಾರ ಸುಪ್ರೀಂ ಕೋರ್ಟ್ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಜನವರಿ 7ರಿಂದ ಎಲ್ಲಾ ಪ್ರಕರಣಗಳನ್ನು ವರ್ಚುವಲ್ ವಿಧಾನದ ಮೂಲಕ ನಡೆಸಲಾಗುವುದು. ಗೃಹ ಕಚೇರಿಯಿಂದಲೇ ಪೀಠಗಳು ವಿಚಾರಣೆ ನಡೆಸಲಿವೆ.
ಮುಂದಿನ ಆದೇಶದವರೆಗೆ ಅತ್ಯಂತ ತುರ್ತು ಪ್ರಕರಣಗಳಾದ ಹೊಸ ಪ್ರಕರಣ, ಜಾಮೀನು, ತಡೆಯಾಜ್ಞೆ, ಬಂಧನ ಮತ್ತು ಈಗಾಗಲೇ ದಿನಾಂಕ ನಿಗದಿಪಡಿಸಿದ ಪ್ರಕರಣಗಳನ್ನು ಮಾತ್ರ ಜನವರಿ 10ರಿಂದ ನ್ಯಾಯಾಲಯವು ವಿಚಾರಣೆಗೆ ಕೈಗೆತ್ತುಕೊಳ್ಳಲಿದೆ.
ಮುಂದಿನ ಆದೇಶದವರೆಗೆ ಏಕಸದಸ್ಯ ಪೀಠದ ಬದಲಿಗೆ ಸಾಮಾನ್ಯ ಪೀಠದ ಮುಂದೆ ವರ್ಗಾವಣೆ ಮನವಿಗಳನ್ನು ವಿಚಾರಣೆಗೆ ನಿಗದಿಪಡಿಸಲಾಗಿದೆ.
ಶರಣಾಗತಿಯಿಂದ ವಿನಾಯಿತಿ ಕೋರುವ ಮನವಿಗಳನ್ನು ಸಹ ಚೇಂಬರ್ ನ್ಯಾಯಮೂರ್ತಿಗಳ ಬದಲಿಗೆ ಸಾಮಾನ್ಯ ಪೀಠಗಳ ಮುಂದೆ ವಿಚಾರಣೆಗೆ ನೀಡಲಾಗುವುದು. ಇದು ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.