ಗೋವುಗಳು ಪೂಜನೀಯ; ಅವುಗಳನ್ನು ಕೊಂದರೆ ದೇವರು ಕ್ಷಮಿಸಲಾರ: ಗುಜರಾತ್ ಹೈಕೋರ್ಟ್

ಜಾನುವಾರು ದೇಹದ ಅವಶೇಷಗಳನ್ನು ತೆರೆದ ಭೂಮಿಯಲ್ಲಿ ಕೊಳೆಯಲು ಬಿಡಲಾಗಿತ್ತು ಎಂಬುದನ್ನು ಗಮನಿಸಿದ ನ್ಯಾ. ಅಶುತೋಷ್ ಶಾಸ್ತ್ರಿ ನೇತೃತ್ವದ ಪೀಠ ಈ ರೀತಿ ಕೊಂದರೆ, ದೇವರು ಕ್ಷಮಿಸುವುದಿಲ್ಲ ಮತ್ತು ಉಳಿಸುವುದಿಲ್ಲ ಎಂದು ಈಚೆಗೆ ಅಭಿಪ್ರಾಯಪಟ್ಟಿತ್ತು.
ಹಸುಗಳು
ಹಸುಗಳು

ಭಾರತದಲ್ಲಿ ಗೋವುಗಳನ್ನು ಪೂಜಿಸಲಾಗುತ್ತದೆ. ಹೀಗಾಗಿಯೇ ಅವುಗಳನ್ನು ಕೊಂದು ಕೊಳೆಯಲು ಬಿಟ್ಟರೆ ದೇವರು ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಈ ಹಿಂದೆ ತಾನು ಹೇಳಿದ್ದಾಗಿ ಗುಜರಾತ್ ಹೈಕೋರ್ಟ್ ಶುಕ್ರವಾರ ಹೇಳಿತು (ಮುಸ್ತಾಕ್ ಹುಸೇನ್ ಮೆಹಂದಿ ಹುಸೇನ್ ಖಾದ್ರಿ ಮತ್ತು ಜಗದೀಪ್ ನಾರಾಯಣ್ ಸಿಂಗ್, ಐಪಿಎಸ್ ನಡುವಣ ಪ್ರಕರಣ).

ಬಿಡಾಡಿ ದನಗಳ ಹಾವಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಕೆಲ ದಿನಗಳ ಹಿಂದೆ ನಡೆದಿದ್ದ ವಿಚಾರಣೆ ವೇಳೆ ಖೇಡಾ ಜಿಲ್ಲೆಯ ನಾಡಿಯಾ ಪ್ರದೇಶದ ತೆರೆದ ಭೂಮಿಯಲ್ಲಿ ಜಾನುವಾರುಗಳ ಶವಗಳು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿವೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಅಶುತೋಷ್ ಶಾಸ್ತ್ರಿ ಮತ್ತು ಹೇಮಂತ್ ಪ್ರಚಕ್  ಅವರಿದ್ದ ವಿಭಾಗೀಯ ಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. 

ಇಂತಹ ಕೃತ್ಯಗಳಿಗಾಗಿ "ದೇವರು ಸಹ ನಮ್ಮನ್ನು ಕ್ಷಮಿಸುವುದಿಲ್ಲ". ಜಾನುವಾರುಗಳನ್ನು "ಸಾರ್ವಜನಿಕ ಸೌಕರ್ಯದ" ಅಥವಾ ಬಿಡಾಡಿ ದನಗಳ ಹಾವಳಿಯನ್ನು ನಿಗ್ರಹಿಸುವ ನೀತಿ ಉಲ್ಲೇಖಿಸಿ ಬಲಿ ನೀಡಲಾಗದು ಎಂದು ಪೀಠ ಮೌಖಿಕವಾಗಿ ಪ್ರತಿಕ್ರಿಯಿಸಿತ್ತು.

ಶುಕ್ರವಾರದ ವಿಚಾರಣೆ ವೇಳೆ ಕೆಲವು ಜಾನುವಾರು ಮಾಲೀಕರ ಪರ ಹಾಜರಾದ ವಕೀಲರು, ಜಾನುವಾರುಗಳು ಬೀದಿಗಳಲ್ಲಿ ತಿರುಗಾಡದಿದ್ದರೂ ಅಧಿಕಾರಿಗಳು ಬಲವಂತವಾಗಿ ಜಾನುವಾರುಗಳನ್ನು ಕೊಂಡೊಯ್ಯುತ್ತಿದ್ದಾರೆ ಎಂದು ಆರೋಪಿಸಿದರು. ವಶಪಡಿಸಿಕೊಂಡ ಜಾನುವಾರುಗಳನ್ನು ಅಧಿಕಾರಿಗಳು ಇರಿಸಿರುವ ದನದ ಕೊಟ್ಟಿಗೆಗಳ ಕಳಪೆ ಸ್ಥಿತಿಗಳನ್ನು ವಿವರಿಸಿದರು.

ಆದರೆ ಈ ವಾದಗಳನ್ನು ಅಧಿಕಾರಿಗಳು ನಿರಾಕರಿಸಿದರು. ಹಸುಗಳನ್ನು ಸ್ವೀಕರಿಸುವ ಮೊದಲು ತಾವು ಪೂಜಿಸುತ್ತೇವೆ. ಕೊಟ್ಟಿಗೆಗಳು ಕಿಕ್ಕಿರಿದಿವೆ ಎಂಬ ಆರೋಪ ಸರಿಯಲ್ಲ ಎಂದು ಸರ್ಕಾರದ ಪರ ವಕೀಲರು ವಾದಿಸಿದರು.

ಆಗ ನ್ಯಾಯಮೂರ್ತಿಗಳು "ಹೌದು, ಹಸುಗಳನ್ನು ಪೂಜಿಸಲಾಗುತ್ತದೆ. ನಾವು ಹಿಂದಿನ ವಿಚಾರಣೆಯಲ್ಲಿ ಅದನ್ನೇ ಹೇಳಿದ್ದೇವೆೆ" ಎಂದರು.

ವಾದಗಳನ್ನು ಆಲಿಸಿದ ಪೀಠ ಜನವರಿ 5 ರವರೆಗೆ ಈಗ ಅಸ್ತಿತ್ವದಲ್ಲಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿತು. ಜನವರಿ 5 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿತು.   

Related Stories

No stories found.
Kannada Bar & Bench
kannada.barandbench.com