ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ' ಮತ್ತು 'ಜಾತ್ಯತೀತ' ಎಂಬ ಪದಗಳನ್ನು ತೆಗೆದುಹಾಕುವಂತೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗೆ ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕ ಮತ್ತು ರಾಜ್ಯಸಭಾ ಸದಸ್ಯ ಬಿನೋಯ್ ವಿಶ್ವಮ್ ಆಕ್ಷೇಪಿಸಿದ್ದಾರೆ.
ಸ್ವಾಮಿ ಅವರ ಮನವಿಯು ಸಂಪೂರ್ಣವಾಗಿ ಕಾನೂನಿನ ದುರ್ಬಳಕೆಯಾಗಿದ್ದು, ವಿಚಾರಣಾರ್ಹತೆ ಹೊಂದಿಲ್ಲದಿರುವುದರಿಂದ ದುಬಾರಿ ದಂಡ ವಿಧಿಸಿ ಅದನ್ನು ವಜಾ ಮಾಡಬೇಕು ಎಂದು ವಿಶ್ವಮ್ ಸಲ್ಲಿಸಿರುವ ಮಧ್ಯಪ್ರವೇಶ ಮನವಿಯಲ್ಲಿ ಕೋರಲಾಗಿದೆ.
ಸಂವಿಧಾನಕ್ಕೆ 42ನೇ ತಿದ್ದುಪಡಿಯ ಮೂಲಕ “ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ” ಎಂದು ಇದ್ದುದನ್ನು “ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯ” ಎಂದು ಮಾಡಿರುವುದನ್ನು ಪ್ರಶ್ನಿಸಿ ಸುಬ್ರಮಣಿಯನ್ ಸ್ವಾಮಿ ಮನವಿ ಸಲ್ಲಿಸಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಸಂವಿಧಾನದ 42ನೇ ತಿದ್ದುಪಡಿಯನ್ನು ಪ್ರಶ್ನಿಸಲಾಗಿದ್ದು, ರಾಜಕೀಯ ಪಕ್ಷವು ಧರ್ಮದ ಆಧಾರದಲ್ಲಿ ಮತ ಕೇಳಲು ಅವಕಾಶ ಮಾಡಿಕೊಡುವ ಉದ್ದೇಶವನ್ನು ಅರ್ಜಿ ಹೊಂದಿದೆ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಪ್ರಜಾಪ್ರತಿನಿಧಿ ಕಾಯಿದೆ 1951ರ ಸೆಕ್ಷನ್ 29(ಎ) ಅಡಿ ಬರುವ ಉಪ ವಿಧಿ 5 ಅನ್ನು ರದ್ದುಪಡಿಸುವಂತೆ ಸ್ವಾಮಿ ಮನವಿ ಮಾಡಿದ್ದಾರೆ. “ಧರ್ಮದ ಹೆಸರಿನಲ್ಲಿ ಮತ ಕೇಳುವುದನ್ನು ಸೆಕ್ಷನ್ 29(ಎ)ನಲ್ಲಿ ನಿರ್ಬಂಧಿಸಲಾಗಿದೆ” ಎಂದು ವಿಶ್ವಮ್ ವಾದಿಸಿದ್ದಾರೆ.
“ಸಂವಿಧಾನ ನಿರ್ಮಾತೃಗಳು ಭಾರತದ ರಾಜಕಾರಣವನ್ನು ಜಾತ್ಯತೀತವಾಗಿ ಇರಿಸಲು ಸ್ಪಷ್ಟ, ಸಮರ್ಥನೀಯ ಉದ್ದೇಶವನ್ನು ಹೊಂದಿದ್ದರು. ಪೀಠಿಕೆಗೆ 'ಜಾತ್ಯತೀತ' ಎಂಬ ಪದದ ಅಳವಡಿಕೆಯ ಮೇಲೆ ಸಂವಿಧಾನ ಅವಲಂಬಿತವಾಗಿಲ್ಲ” ಎಂದು ಮನವಿಯಲ್ಲಿ ವಿವರಿಸಲಾಗಿದೆ.