ಬಿರುಕು ಬಿಟ್ಟ ಅಟಲ್ ಸೇತು: ಕ್ರಷರ್ ಘಟಕಗಳ ಸ್ಥಗಿತದ ಮಧ್ಯಂತರ ಆದೇಶ ಎತ್ತಿಹಿಡಿದ ಬಾಂಬೆ ಹೈಕೋರ್ಟ್

ಕಲ್ಲು ಪುಡಿ ಮಾಡುವ ಕ್ರಷರ್‌ಗಳಿಗೂ ಸೇತುವೆ ಬಿರುಕು ಬಿಟ್ಟಿರುವುದಕ್ಕೂ ಸಂಬಂಧವಿದೆಯೇ ಎಂದು ತಜ್ಞರು ಪತ್ತೆ ಮಾಡುವವರೆಗೆ ಘಟಕಗಳನ್ನು ಮುಚ್ಚಲು ನೀಡಿದ ಆದೇಶ ಅಗತ್ಯ ಮುನ್ನೆಚ್ಚರಿಕೆ ಕ್ರಮವಾಗಿದೆ ಎಂದು ನ್ಯಾಯಾಲಯ ಹೇಳಿದೆ.
Atal Setu- Mumbai Trans harbour link
Atal Setu- Mumbai Trans harbour linkFacebook
Published on

ಮುಂಬೈನಲ್ಲಿ ಬಂದರಿನಿಂದ ಬಂದರಿಗೆ ಸಂಪರ್ಕ ಕಲ್ಪಿಸುವ ದೇಶದ ಅತಿ ಉದ್ದದ ಸಮುದ್ರ ಸೇತುವೆ ‘ಅಟಲ್ ಸೇತುʼ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಆ ಪ್ರದೇಶದ ಸುತ್ತಮುತ್ತ ಇರುವ ಕಲ್ಲು ಪುಡಿ ಮಾಡುವ ಕ್ರಶರ್‌ ಘಟಕಗಳನ್ನು ಕಡ್ಡಾಯವಾಗಿ ಮುಚ್ಚಬೇಕೆಂದು ಪನ್ವೇಲ್‌ ಉಪವಿಭಾಗಾಧಿಕಾರಿ ನೀಡಿದ್ದ ಆದೇಶವನ್ನು ಈಚೆಗೆ ಬಾಂಬೆ ಹೈಕೋರ್ಟ್‌ ಎತ್ತಿಹಿಡಿದಿದೆ [ಶ್ರೀಧರ್‌ ಕಾಶಿನಾಥ್‌ ಭಗತ್‌ ಮತ್ತು ಪನ್ವೇಲ್‌ ಉಪ ವಿಭಾಗಾಧಿಕಾರಿ ನಡುವಣ ಪ್ರಕರಣ].

ಕಲ್ಲು ಪುಡಿ ಮಾಡುವ ಕ್ರಷರ್‌ಗಳಿಗೂ ಸೇತುವೆ ಬಿರುಕು ಬಿಟ್ಟಿರುವುದಕ್ಕೂ ಸಂಬಂಧವಿದೆಯೇ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಅಥವಾ ಇನ್ನಿತರ ಸಕ್ಷಮ ಸಂಸ್ಥೆ ಸಂಪೂರ್ಣ ಪರಿಶೀಲನೆ ನಡೆಸುವವರೆಗೆ ಘಟಕಗಳನ್ನು ಮುಚ್ಚಲು ತಾನು ನೀಡಿರುವ ತಾತ್ಕಾಲಿಕ ಆದೇಶ ಅಗತ್ಯ ಮುನ್ನೆಚ್ಚರಿಕೆ ಕ್ರಮವಾಗಿದೆ ಎಂಬ ಉಪವಿಭಾಗಾಧಿಕಾರಿಯ ಆದೇಶವನ್ನು ನ್ಯಾ. ಸಂದೀಪ್‌ ಮರ್ನೆ ಅವರಿದ್ದ ಏಕಸದಸ್ಯ ಪೀಠ ಗಮನಿಸಿತು.  

Also Read
ಕೆಆರ್‌ಎಸ್‌ ಸುರಕ್ಷತೆ: ಅಧ್ಯಯನ ವರದಿ ಸಲ್ಲಿಸಲು ಅಣೆಕಟ್ಟು ಸುರಕ್ಷತಾ ಸಮಿತಿಗೆ 4 ತಿಂಗಳ ಕಾಲಾವಕಾಶ ನೀಡಿದ ಹೈಕೋರ್ಟ್‌

ಅರ್ಜಿದಾರರ ಕಲ್ಲು ಕ್ರಶರ್‌ ಘಟಕಗಳಿಂದ ಸಮುದ್ರ ಸೇತುವೆಗೆ ಹಾನಿಯುಂಟಾಗಿ ಪ್ರಯಾಣಿಕರ ಜೀವಕ್ಕೆ ಅಪಾಯವಿದೆಯೇ ಎಂಬುದನ್ನು ತಜ್ಞರು ನಿರ್ಧರಿಸಿ ವರದಿ ಸಲ್ಲಿಸುವವರೆಗೆ ಇದೊಂದು ಅಗತ್ಯ ಮುನ್ನೆಚ್ಚರಿಕಾ ಕ್ರಮ ಎಂಬುದನ್ನು ಉಪವಿಭಾಗಾಧಿಕಾರಿ ಆದೇಶ ಸ್ಪಷ್ಟವಾಗಿ ಸೂಚಿಸುತ್ತದೆ. ಹೀಗಾಗಿ ಈ ಆದೇಶಗಳನ್ನು ಸಿಆರ್‌ಪಿಸಿ ಸೆಕ್ಷನ್ 133ರ ಅಡಿ ಪ್ರಾಥಮಿಕ ಆದೇಶಗಳಾಗಿ ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ನುಡಿಯಿತು.

ಸಾರ್ವಜನಿಕ ಸ್ಥಳಕ್ಕೆ ಉಂಟಾಗುವ ಯಾವುದೇ ಕಾನೂನುಬಾಹಿರ ಅಡಚಣೆ ಅಥವಾ ಉಪದ್ರವವನ್ನು ತೆಗೆದುಹಾಕಲು ಸರ್ಕಾರಿ ಅಧಿಕಾರಿಗಳಿಗೆ ಸಿಆರ್‌ಪಿಸಿ ಸೆಕ್ಷನ್ 133 ಅಧಿಕಾರ ನೀಡುತ್ತದೆ.

ಇದೇ ವೇಳೆ ಮುಂಬೈನ ನಿರ್ಣಾಯಕ ಆಗಮನ ಮತ್ತು ನಿರ್ಗಮನ ಮಾರ್ಗವಾಗಿರುವ ಸಮುದ್ರ ಸೇತುವೆ ದೇಶದ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾಗಿದ್ದು ಅಪಾರ ಹಣ ವ್ಯಯಿಸಿ ಅದನ್ನು ನಿರ್ಮಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಅಂತಹ ಸೇತುವೆ ಗಣಿಗಾರಿಕೆ, ಸ್ಫೋಟ ಅಥವಾ ಕಲ್ಲು ಪುಡಿಮಾಡುವಿಕೆಯಂತಹ ಚಟುವಟಿಕೆಗಳಿಂದ ಅಪಾಯಕ್ಕೆ ತುತ್ತಾಗಬಾರದು ಎಂದು ಪೀಠ ನುಡಿದಿದೆ.

ಸಿಆರ್‌ಪಿಸಿ ಸೆಕ್ಷನ್ 133ರ ಅಡಿಯಲ್ಲಿ ಪನ್ವೇಲ್‌ ಉಪವಿಭಾಗಾಧಿಕಾರಿ ಹೊರಡಿಸಿದ ಕಲ್ಲು ಕ್ರಶರ್‌ ಸ್ಥಗಿತ ಆದೇಶ ಪ್ರಶ್ನಿಸಿ ಕಲ್ಲು ಪುಡಿ ಮಾಡುವ ಘಟಕಗಳ ಮಾಲೀಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಂಶಗಳನ್ನು ತಿಳಿಸಿದೆ.

ಉಪವಿಭಾಗಾಧಿಕಾರಿ ನೀಡಿದ ಆದೇಶ ಮನಸೋಇಚ್ಛೆಯಿಂದ ಕೂಡಿದ್ದು ಘಟಕಗಳಿಂದ ಹಾನಿ ಉಂಟಾಗುತ್ತದೆ ಎನ್ನಲು ದೃಢ ಪುರಾವೆಗಳಿಲ್ಲ. ಈ ಆದೇಶದಿಂದ ಅನೇಕರು ಉದ್ಯೋಗ ಕಳೆದುಕೊಳ್ಳಲಿದ್ದು ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.

Also Read
ಕಪ್ಪತ್ತಗುಡ್ಡ ಸಮೀಪ ಕಲ್ಲು, ಮರಳು ಗಣಿಗಾರಿಕೆಗೆ ನಿಷೇಧ: ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌

ಸರ್ಕಾರದ ಪರವಾಗಿ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಹಿತೇನ್ ವೆಣೆಗಾಂವ್ಕರ್, ಕಲ್ಲು ಪುಡಿ ಮಾಡುವ ಚಟುವಟಿಕೆಗಳು ಸೇತುವೆಯ ಸಮಗ್ರತೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಗಮನಾರ್ಹ ಅಪಾಯವನ್ನುಂಟುಮಾಡುತ್ತವೆ ಎಂದು ದೂರಿದರು.

ವಾದಗಳನ್ನು ಆಲಿಸಿದ ನ್ಯಾಯಾಲಯ ಪರಿಣತ ಸಂಸ್ಥೆಗಳು ವರದಿ ಸಲ್ಲಿಸುವವರೆಗೆ ಮುಚ್ಚುವಿಕೆ ಅಗತ್ಯ ಮುನ್ನೆಚರಿಕಾ ಕ್ರಮವಾಗಿದೆ ಎಂದು ನುಡಿಯಿತು.

ಬಿರುಕು ಬಿಟ್ಟಿರಲಿ, ಇಲ್ಲದಿರಲಿ ಕಲ್ಲು ಪುಡಿ ಮಾಡುವ ಚಟುವಟಿಕೆಗಳಿಂದ ಸೇತುವೆಗೆ ಹಾನಿಯಾಗುತ್ತದೆಯೇ ಎಂದು ತಜ್ಞರು ವರದಿ ನೀಡಿದ ಬಳಿಕವೇ ಈ ಕುರಿತು ನಿರ್ಧಾರ ಕೈಗೊಳ್ಳಬಹುದು ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು.

Kannada Bar & Bench
kannada.barandbench.com