ಹಾಲಿ, ಮಾಜಿ ಶಾಸಕರಿಗೆ ರಾಜಕೀಯ ಕಾರ್ಯದರ್ಶಿ, ಸಲಹೆಗಾರರ ಹುದ್ದೆ ಸೃಷ್ಟಿ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಪ್ರತಿವಾದಿಗಳಾಗಿರುವ ಶಾಸಕ ಎಂ ಪಿ ರೇಣುಕಾಚಾರ್ಯ, ಮಾಜಿ ಶಾಸಕ ಡಿ ಎನ್ ಜೀವರಾಜ್, ಬೇಳೂರು ಸುದರ್ಶನ್ ಮತ್ತು ಕೇದಾರನಾಥ ಮುದ್ದ ಅವರಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ಆದೇಶಿಸಿದೆ.
Karnataka HC and MLA M P Renukacharya, Farmer MLA Jeevaraj, Journalist Belur Sudarshan
Karnataka HC and MLA M P Renukacharya, Farmer MLA Jeevaraj, Journalist Belur Sudarshan

ಹಾಲಿ ಮತ್ತು ಮಾಜಿ ಶಾಸಕರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮತ್ತು ಸಲಹೆಗಾರರ ಹುದ್ದೆ ಸೃಷ್ಟಿಸಿ ಸಂಪುಟ ದರ್ಜೆಯ ಸ್ಥಾನಮಾನ ನೀಡಿರುವ ಕ್ರಮದ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ನೋಟಿಸ್ ಜಾರಿಗೊಳಿಸಿದೆ.

ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಪ್ರತಿವಾದಿಗಳಾಗಿರುವ ಶಾಸಕ ಎಂ ಪಿ ರೇಣುಕಾಚಾರ್ಯ, ಮಾಜಿ ಶಾಸಕ ಡಿ ಎನ್ ಜೀವರಾಜ್, ಬೇಳೂರು ಸುದರ್ಶನ್ ಮತ್ತು ಕೇದಾರನಾಥ ಮುದ್ದಾ ಅವರಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಶಾಸಕ ಎಂ ಪಿ ರೇಣುಕಾಚಾರ್ಯ, ಮಾಜಿ ಶಾಸಕ ಡಿ ಎನ್ ಜೀವರಾಜ್ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ. ಇನ್ನೂ ಬೇಳೂರು ಸುದರ್ಶನ್ (ಇ-ಆಡಳಿತ ವಿಭಾಗ) ಮತ್ತು ಕೇದಾರನಾಥ ಮುದ್ದಾ (ವಾಣಿಜ್ಯ ಕೈಗಾರಿಕೆ ಇಲಾಖೆಯ) ಅವರನ್ನು ಮುಖ್ಯಮಂತ್ರಿಗಳ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಅವರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನ ಮಾನ ನೀಡಲಾಗಿದೆ. ಈ ರೀತಿ ರಾಜಕೀಯ ಕಾರ್ಯದರ್ಶಿಗಳು ಹಾಗೂ ಸಲಹೆಗಾರರನ್ನಾಗಿ ನೇಮಕ ಮಾಡಿರುವ ಸರ್ಕಾರದ ಕ್ರಮ ಸಂವಿಧಾನಬಾಹಿರವಾಗಿದೆ ಎಂದು ಆಕ್ಷೇಪಿಸಿದರು.

ರಾಜ್ಯ ಸರ್ಕಾರ ತನ್ನ ನಿಷ್ಠಾವಂತ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಸಚಿವ ಸಂಪುಟ ದರ್ಜೆಗೆ ಸಮಾನವಾದ ಹುದ್ದೆ ಕಲ್ಪಿಸುವುದು ತಂತ್ರಗಾರಿಕೆ ಭಾಗವಾಗಿದೆ. ಅಲ್ಲದೆ, ನೇಮಕಾತಿಗಳಲ್ಲಿ ಸರ್ಕಾರಕ್ಕೆ ನೀಡಿರುವ ಅಧಿಕಾರದ ಉಲ್ಲಂಘನೆಯಾಗಿದೆ. ಜತೆಗೆ, ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಲಿದೆ. ಆದ್ದರಿಂದ, ನೂತನವಾಗಿ ಸೃಷ್ಟಿ ಮಾಡಿರುವ ಈ ನಾಲ್ಕು ಹುದ್ದೆಗಳನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Related Stories

No stories found.
Kannada Bar & Bench
kannada.barandbench.com