ಸುಪ್ರೀಂ ಕೋರ್ಟ್ 51ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಸೋಮವಾರ ಅಧಿಕಾರ ವಹಿಸಿಕೊಂಡ ಸಂಜೀವ್ ಖನ್ನಾ ಪ್ರಕರಣ ಬಾಕಿ ಉಳಿಯುವುದನ್ನು ತಡೆಯುವ ಮತ್ತು ಕಾನೂನು ಪ್ರಕ್ರಿಯೆಗಳನ್ನು ಸರಳಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಕ್ರಿಮಿನಲ್ ಪ್ರಕರಣಗಳ ನಿರ್ವಹಣೆಯಲ್ಲಿ ಸುಧಾರಣೆ, ವಿಚಾರಣೆಯ ಅವಧಿ ಇಳಿಕೆ ಮಾಡುವುದು ತಮ್ಮ ಉದ್ದೇಶ ಎಂದು ಸೋಮವಾರ ಸಂಜೆ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ, ಸಿಜೆಐ ತಿಳಿಸಿದ್ದಾರೆ.
ಕ್ರಮಬದ್ಧ ವಿಧಾನ ಅಳವಡಿಕೆ ಮೂಲಕ ವಿಚಾರಣೆಯ ಅವಧಿ ಕಡಿಮೆ ಮಾಡುವುದು ಮತ್ತು ಕಾನೂನು ಪ್ರಕ್ರಿಯೆ ನಾಗರಿಕರಿಗೆ ಕಠಿಣವಾದುದಲ್ಲ ಎಂಬುದನ್ನು ಹೇಳುವುದಕ್ಕಾಗಿ ನ್ಯಾಯ ವಿತರಣಾ ಕಾರ್ಯವಿಧಾನದಲ್ಲಿ ಸುಧಾರಣೆ ತರುವುದು ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಸಿಜೆಐ ಆಗಿ 183 ಅಂದರೆ ಸುಮಾರು ಆರು ತಿಂಗಳ ಅಧಿಕಾರಾವಧಿ ಹೊಂದಿರುವ ನ್ಯಾ. ಖನ್ನಾ ಮೇ 13, 2025 ರಂದು ನಿವೃತ್ತರಾಗಲಿದ್ದಾರೆ.
ಸಂವಿಧಾನದ ರಕ್ಷಕನಾಗುವ, ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಹಾಗೂ ನ್ಯಾಯಿಕ ಸೇವಾ ಪೂರೈಕೆದಾರನಾಗಿ ಪ್ರಮುಖ ಕಾರ್ಯ ನಿರ್ವಹಿಸುವ ನಂಬಿಕೆಯನ್ನು ಸಂವಿಧಾನವು ನ್ಯಾಯಾಂಗದ ಮೇಲೆ ಇರಿಸಿದೆ.
ಸಿಜೆಐ ಸಂಜೀವ್ ಖನ್ನಾ
ಪ್ರಕಟಣೆಯ ಪ್ರಮುಖಾಂಶಗಳು
ನ್ಯಾಯಾಲಯಗಳ ಲಭ್ಯತೆ ಮತ್ತು ಅವುಗಳನ್ನು ಬಳಕೆದಾರ ಸ್ನೇಹಿಯಾಗಿ ಮಾಡುವುದು ನೂತನ ಸಿಜೆಐ ಅವರ ಗುರಿ.
ಸಂವಿಧಾನದ ರಕ್ಷಕನಾಗುವ, ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಹಾಗೂ ನ್ಯಾಯಿಕ ಸೇವಾ ಪೂರೈಕೆದಾರನಾಗಿ ಪ್ರಮುಖ ಕಾರ್ಯ ನಿರ್ವಹಿಸುವ ನಂಬಿಕೆಯನ್ನು ಸಂವಿಧಾನವು ನ್ಯಾಯಾಂಗದ ಮೇಲೆ ಇರಿಸಿದೆ.
ನ್ಯಾಯಾಂಗಕ್ಕೆ ನೀಡಲಾಗಿರುವ ಜವಾಬ್ದಾರಿ ನಾಗರಿಕರ ಹಕ್ಕುಗಳ ರಕ್ಷಕರಾಗಿ ಮತ್ತು ವಿವಾದ ಪರಿಹಾರಕರಾಗಿ ನ್ಯಾಯಾಂಗಕ್ಕೆ ಇರುವ ಬದ್ಧತೆಯನ್ನು ಎತ್ತಿಹಿಡಿಯುತ್ತದೆ.
ಈ ಮಹಾನ್ ರಾಷ್ಟ್ರದ ಎಲ್ಲಾ ಪ್ರಜೆಗಳಿಗೆ ನ್ಯಾಯ ಸುಲಭವಾಗಿ ದೊರೆಯುವಂತೆ ಮಾಡುವುದು ನ್ಯಾಯಾಂಗದ ಸಾಂವಿಧಾನಿಕ ಕರ್ತವ್ಯವಾಗಿದೆ.
ಪ್ರತಿಕ್ರಿಯೆಯನ್ನು ಸ್ವೀಕರಿಸುವ ಸ್ಪಂದಿಸುವ ಸ್ವಯಂ ಮೌಲ್ಯಮಾಪನ ವಿಧಾನವನ್ನು ಅಳವಡಿಸಿಕೊಳ್ಳುವ ಗುರಿ ಸಿಜೆಐ ಅವರದ್ದಾಗಿದೆ.
ನಾಗರಿಕರಿಗೆ ಅರ್ಥವಾಗುವಂತೆ ತೀರ್ಪುಗಳನ್ನು ನೀಡುವುದು ಮತ್ತು ಮಧ್ಯಸ್ಥಿಕೆಯನ್ನು ಉತ್ತೇಜಿಸುವುದು ನೂತನ ಸಿಜೆಐ ಖನ್ನಾ ಅವರ ಆಶಯವಾಗಿದೆ.