ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿರುವುದು ಮತ್ತು ಹಿಂಪಡೆಯಲು ಉದ್ದೇಶಿಸಿರುವ ಪ್ರಕರಣಗಳ ಪಟ್ಟಿಯನ್ನು ಅಮಿಕಸ್ ಕ್ಯೂರಿಗೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಅಮಿಕಸ್ ಕ್ಯೂರಿ ಅದನ್ನು ಪರಿಶೀಲಿಸಿ, ಅಗತ್ಯ ಬಿದ್ದರೆ ಪ್ರತಿಕ್ರಿಯೆ ದಾಖಲಿಸಬಹುದು ಎಂದು ಹೇಳಿದೆ.
ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಮೇಲ್ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದ ಮೇರೆಗೆ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
“ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿರುವುದು ಮತ್ತು ಹಿಂಪಡೆಯಲು ಉದ್ದೇಶಿಸಿರುವ ಪ್ರಕರಣಗಳ ಪಟ್ಟಿಯನ್ನು ಒಳಗೊಂಡ ಅಫಿಡವಿಟ್ ಅನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದ್ದು, ದಿನದಂತ್ಯಕ್ಕೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ. ಈ ಪಟ್ಟಿಯನ್ನು ಅಮಿಕಸ್ ಕ್ಯೂರಿಗೂ ರಾಜ್ಯ ಸರ್ಕಾರ ನೀಡಬೇಕು. ಇದನ್ನು ಅಮಿಕಸ್ ಕ್ಯೂರಿ ಅವರು ಪರಿಶೀಲಿಸಿ, ಅಗತ್ಯ ಬಿದ್ದರೆ ಪ್ರತಿಕ್ರಿಯೆ ದಾಖಲಿಸಬಹುದಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ವಿಚಾರಣೆ ಆರಂಭವಾಗುತ್ತಿದ್ದಂತೆ ಅಮಿಕಸ್ ಕ್ಯೂರಿ ಹಿರಿಯ ವಕೀಲರಾದ ಆದಿತ್ಯ ಸೋಂಧಿ ಅವರು “ಶಾಸಕರು ಮತ್ತು ಸಂಸದರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವ ವಿಚಾರದಲ್ಲಿ ರಾಜ್ಯ ಸರ್ಕಾರ ತಪ್ಪೆಸಗಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಅಫಿಡವಿಟ್ ಸಲ್ಲಿಸಬೇಕು. ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಹಿಂಪಡೆಯುವ ರಾಜ್ಯ ಸರ್ಕಾರದ ಆದೇಶ ಮತ್ತು ಮ್ಯಾಜಿಸ್ಟ್ರೇಟ್ ಆದೇಶಗಳನ್ನು ಹೈಕೋರ್ಟ್ ಪರಿಶೀಲಿಸಬಹುದಾಗಿದೆ” ಎಂದು ನ್ಯಾಯಾಲಯದ ಗಮನ ಸೆಳೆದರು.
ವಾದ-ಪ್ರತಿವಾದಿ ಆಲಿಸಿದ ಪೀಠವು ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಿತು.
ಕಳೆದ ವಿಚಾರಣೆಯಲ್ಲಿ ಆದಿತ್ಯ ಸೋಂಧಿ ಅವರು ”ಹೈಕೋರ್ಟ್ ಅನುಮತಿ ಪಡೆಯದೇ ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಸರ್ಕಾರ ಹಿಂಪಡೆಯುವಂತಿಲ್ಲ. ಈ ಕುರಿತು ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಮೇಲ್ವಿಚಾರಣೆ ನಡೆಸಬಹುದು. ಹಿಂಪಡೆದ ಪ್ರಕರಣಗಳನ್ನು ಪರೀಕ್ಷಿಸಬಹುದು. ಅದಕ್ಕಾಗಿ ಹಿಂಪಡೆದ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹೈಕೋರ್ಟ್ ರಾಜ್ಯ ಸರ್ಕಾರದಿಂದ ಪಡೆದುಕೊಳ್ಳಬಹುದು ಎಂದು ಸುಪ್ರೀಂ ಕೊರ್ಟ್ 2021ರ ಆಗಸ್ಟ್ 10ರಂದು ಆದೇಶ ಮಾಡಿದೆ. ಅದರಂತೆ ಶಾಕಸರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದ ಆದೇಶಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಬಹುದು” ಎಂದಿದ್ದರು.
ಆಗ ಸರ್ಕಾರಿ ವಕೀಲರು ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿರುವುದಕ್ಕೆ ಸಂಬಂಧಿಸಿದ ವಿವರ ಹಾಗೂ ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಪೀಠವನ್ನು ಕೋರಿದ್ದರು.
“ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದ ಸೆಪ್ಟೆಂಬರ್ 16ರಿಂದ ಈಚೆಗಿನ ಪ್ರಕರಣಗಳಲ್ಲಿ ರಾಜ್ಯ ಸರ್ಕಾರದ ನಿಲುವಿನ ಕಾನೂನು ಸಿಂಧುತ್ವವನ್ನು ಪರಿಗಣಿಸಲಾಗುವುದು. ಪ್ರಕರಣಗಳನ್ನು ಹಿಂಪಡೆಯುವಾಗ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪಾಲಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಶಾಸಕರು ಮತ್ತು ಸಂಸದರ ವಿರುದ್ಧದ ಪ್ರಕರಣಗಳ ಕುರಿತಾದ ಮಾಹಿತಿಯನ್ನು ಅಧಿಕೃತವಾಗಿ ಸಲ್ಲಿಸಬೇಕು" ಎಂದು ನ್ಯಾಯಾಲಯ ಹೇಳಿತ್ತು.