
ಅಪರಾಧ ಪ್ರಕ್ರಿಯಾ (ಗುರುತು) ಕಾಯಿದೆ 2022ರ ಸೆಕ್ಷನ್ 5ರ ಅಡಿ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯಾಗಿರುವ ಬಂಧಿತನಾಗದಿರುವ ವ್ಯಕ್ತಿಗೆ ಸಹಿ ಮತ್ತು ಕೈಬರಹ ಮಾದರಿ ನೀಡಲು ಮ್ಯಾಜಿಸ್ಟ್ರೇಟ್ ಆದೇಶಿಸಬಹುದು ಎಂದು ಈಚೆಗೆ ಕೇರಳ ಹೈಕೋರ್ಟ್ ಸ್ಪಷ್ಟಪಡಿಸಿದೆ [ಫೈಜಲ್ ಕೆ ವಿ ವರ್ಸಸ್ ಕೇರಳ ರಾಜ್ಯ ಮತ್ತು ಇತರರು].
ನಕಲಿ ದಾಖಲೆ ಸೃಷ್ಟಿಸಿ ಶಿಕ್ಷಕನ ಹುದ್ದೆ ಗಿಟ್ಟಿಸಿದ್ದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನನ ಮೇಲೆ ಹೊರಗಿರುವ ಆರೋಪಿಗೆ ಕೈಬರಹ ಮಾದರಿ ನೀಡಲು ಆದೇಶಿಸಿದ್ದ ಮ್ಯಾಜಿಸ್ಟ್ರೇಟ್ ಆದೇಶವನ್ನು ನ್ಯಾಯಮೂರ್ತಿ ರಾಜ ವಿಜಯರಾಘವನ್ ವಿ ಅವರ ನೇತೃತ್ವದ ಏಕಸದಸ್ಯ ಪೀಠವು ಎತ್ತಿ ಹಿಡಿದಿದೆ. ಔಪಚಾರಿಕವಾಗಿ ತನ್ನನ್ನು ಬಂಧಿಸಿಲ್ಲವಾದ್ದರಿಂಧ ಮ್ಯಾಜಿಸ್ಟ್ರೇಟ್ ಕೈಬರಹದ ಮಾದರಿ ನೀಡುವಂತೆ ಆದೇಶಿಸಲಾಗದು ಎಂದು ಆರೋಪಿ ಪರ ವಕೀಲರು ವಾದಿಸಿದ್ದರು.
“ಯಾವುದೇ ವ್ಯಕ್ತಿಗೆ ಸೆಕ್ಷನ್ 5ರ ಅಡಿ ಆದೇಶ ಮಾಡಲು ಮ್ಯಾಜಿಸ್ಟ್ರೇಟ್‌ಗೆ ಅಧಿಕಾರವಿದೆ. ಆ ಸಂದರ್ಭದಲ್ಲಿ ಜಾರಿಯಲ್ಲಿರುವ ಕಾನೂನಿನ ಅಡಿ ಬಂಧಿತನಾಗಿರುವ ಆರೋಪಿಗೆ ಮಾತ್ರ ಕಾಯಿದೆಯ ನಿಬಂಧನೆ ಅಡಿ ನಿರ್ದೇಶನ ನೀಡಬಹುದು ಎಂದೇನು ಇಲ್ಲ” ಎಂದು ಹೈಕೋರ್ಟ್ ಹೇಳಿದೆ.
ನಕಲಿ ದಾಖಲೆ ಸೃಷ್ಟಿಸಿ ಶಿಕ್ಷಕನ ಕೆಲಸ ಗಿಟ್ಟಿಸಿರುವ ಆರೋಪದ ಮೇಲೆ ವಂಚನೆ, ನಕಲಿ ದಾಖಲೆ ಸೃಷ್ಟಿರುವುದಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ಭಾಗವಾಗಿ ಸರ್ವೀಸ್ ದಾಖಲೆಯಲ್ಲಿನ ಉಲ್ಲೇಖ ಹಾಗೂ ಅರ್ಜಿದಾರ/ಆರೋಪಿಯ ಕೈಬರಹ ಹೋಲಿಕೆ ಮಾಡಲು ತನಿಖಾಧಿಕಾರಿಗಳು ಮುಂದಾಗಿದ್ದರು. ಸರ್ವೀಸ್ ದಾಖಲೆಯಲ್ಲಿ ಉಲ್ಲೇಖವು ಅರ್ಜಿದಾರರಿಗೆ ಸಂಬಂಧಿಸಿದಂತಿಲ್ಲ ಎಂದು ತನಿಖಾಧಿಕಾರಿ ಹೇಳಿದ್ದರು. ಅರ್ಜಿದಾರರ ಅಸಲಿ ಕೈಬರಹ ಮತ್ತು ಶಂಕಿತ ಕೈಬರಹ ಹೋಲಿಕೆ ಮಾಡಲು ಅನುಮತಿಸುವಂತೆ ಕೋರಿ ತನಿಖಾಧಿಕಾರಿ ಸಂಬಂಧಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಅಧೀನ ನ್ಯಾಯಾಲಯ ಅನುಮತಿಸಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.