ವೈವಾಹಿಕ ವಿವಾದ ಬಗೆಹರಿಸಲು ಕ್ರಿಮಿನಲ್ ಪ್ರಕ್ರಿಯೆಯನ್ನು ಕಿರುಕುಳದ ಸಾಧನವಾಗಿ ಬಳಸುವಂತಿಲ್ಲ: ಕಾಶ್ಮೀರ ಹೈಕೋರ್ಟ್

ಮಹಿಳೆಯೊಬ್ಬರು ತನ್ನ ಅತ್ತೆ-ಮಾವಂದಿರ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ನ್ಯಾಯಾಲಯ ಅಂತಹ ವಿಚಾರಣೆ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದಿದೆ.
ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್, ಜಮ್ಮು ವಿಭಾಗ
ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್, ಜಮ್ಮು ವಿಭಾಗ

ವೈವಾಹಿಕ ವಿವಾದಗಳನ್ನು ಪರಿಹರಿಸಲು ಕ್ರಿಮಿನಲ್ ಪ್ರಕ್ರಿಯೆಯನ್ನು ಕಿರುಕುಳದ ಸಾಧನವಾಗಿ ಬಳಸುವಂತಿಲ್ಲ ಎಂದು ಜಮ್ಮ, ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ (ಸುಭಾಷ್ ಚಂದರ್ ವಿರುದ್ಧ ಜಮ್ಮು ಮತ್ತು ಕಾಶ್ಮೀರ ರಾಜ್ಯ)

ವೈವಾಹಿಕ ವಿವಾದದಲ್ಲಿ ನ್ಯಾಯಮೂರ್ತಿ ರಜನೀಶ್ ಓಸ್ವಾಲ್ ಅವರು "ವೈವಾಹಿಕ ವಿವಾದವನ್ನು ಬಗೆಹರಿಸುವುದಕ್ಕಾಗಿ ಕ್ರಿಮಿನಲ್ ಪ್ರಕ್ರಿಯೆಗಳನ್ನು ಕಿರುಕುಳದ ಸಾಧನವಾಗಿ ಬಳಸುವಂತಿಲ್ಲ ಎಂಬುದು ಇತ್ಯರ್ಥಗೊಂಡ ಕಾನೂನು. ಪ್ರತಿವಾದಿ-ಪತ್ನಿಯೇ ಖುದ್ದು ಒಪ್ಪಿಕೊಂಡಿರುವ ಪ್ರಕಾರ, ಪ್ರಸ್ತುತ ಅರ್ಜಿಯಲ್ಲಿ ಭಾಗಿಯಲ್ಲದ ತನ್ನ ಪತಿ, ಅಕ್ಟೋಬರ್ 2015ರಿಂದ ಡಿಸೆಂಬರ್ 2016ರವರೆಗೆ ಆಕೆಯ ಹೆತ್ತವರ ಮನೆಯಲ್ಲಿ ಆಕೆಯೊಂದಿಗೆ ವಾಸವಿದ್ದು ಅರ್ಜಿದಾರರ ವಿರುದ್ಧ ಮಾಡಲಾಗಿರುವ ಆರೋಪಗಳು ಅಸ್ಪಷ್ಟವಾಗಿವೆ, ಅಗತ್ಯ ವಿವರಗಳಿಲ್ಲ. (ಹಾಗಾಗಿ) ಅಂತಹ ಪ್ರಕ್ರಿಯೆಗಳನ್ನು ಮುಂದುವರೆಸುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಲ್ಲದೆ ಮತ್ತೇನೂ ಅಲ್ಲ" ಎಂದಿದ್ದಾರೆ.

ಕಾಶ್ಮೀರದಲ್ಲಿ ಜಾರಿಯಲ್ಲಿರುವ ರಣಬೀರ್ ದಂಡ ಸಂಹಿತೆಯ (ಆರ್‌ಪಿಸಿ) ಸೆಕ್ಷನ್ 498-ಎ ( ಪತಿ ಅಥವಾ ಆತನ ಸಂಬಂಧಿ ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವುದು), 342 ( ತಪ್ಪಾದ ಬಂಧನಕ್ಕೆ ಶಿಕ್ಷೆ), 504 ( ಶಾಂತಿಗೆ ಭಂಗ ತರುವ ಉದ್ದೇಶದಿಂದ ಮಾಡುವ ಉದ್ದೇಶಪೂರ್ವಕ ಅವಮಾನ ) ಮತ್ತು 506 (ಕ್ರಿಮಿನಲ್ ಬೆದರಿಕೆೆ) ಅಡಿಯಲ್ಲಿ ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ವ್ಯಕ್ತಿಯ ಸಂಬಂಧಿಕರು ಸಲ್ಲಿಸಿದ್ದ ಮನವಿ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ಪ್ರತಿವಾದಿ-ಪತ್ನಿ ತಮಗೆ ಕಿರುಕುಳ ನೀಡಲು ಕ್ರಿಮಿನಲ್ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಅವರು ವಾದಿಸಿದ್ದರು.

ವೈವಾಹಿಕ ಜಾಲತಾಣದ ಮೂಲಕ ದಂಪತಿ ಭೇಟಿಯಾಗಿದ್ದರು. ವಿವಾಹ ಸಮಾರಂಭದಲ್ಲಿ ಗಂಡನ ಕಡೆಯ ಕುಟುಂಬ ಪಾಲ್ಗೊಂಡಿರಲಿಲ್ಲ. ಐದು ತಿಂಗಳ ಕಾಲ ವೈವಾಹಿಕ ಗೃಹದಲ್ಲಿ ವಾಸವಿದ್ದ ಪತ್ನಿ ನಂತರ ತನ್ನ ಪತಿ ಮತ್ತಿತರ ಕುಟುಂಬ ಸದಸ್ಯರ ಬಗ್ಗೆ ಕಾಳಜಿ ತೋರಲಿಲ್ಲ. ಜೊತೆಗೆ ಸಮಂಜಸ ಕಾರಣವಿಲ್ಲದೆ ಗಂಡನ ಸಹವಾಸ ತೊರೆದಿದ್ದರು.

ವೈವಾಹಿಕ ಗೃಹಕ್ಕೆ ಮರಳುವಂತೆ ಮಹಿಳೆ ಮತ್ತು ಆಕೆಯ ತಾಯಿಯನ್ನು ಅರ್ಜಿದಾರರು ಕೋರಿದಾಗ, ಅವರಿಬ್ಬರೂ ಖಡಾಖಂಡಿತವಾಗಿ ನಿರಾಕರಿಸಿದರು. ಆದರೆ ಪತಿ ತನ್ನ ತವರಿನಲ್ಲಿ ವಾಸಿಸುವುದಾದರೆ ವಿವಾಹ ಸಂಬಂಧ ಮುಂದುವರೆಸಲು ಪತ್ನಿ ಒಪ್ಪಿದರು. ತರುವಾಯ ಇದಕ್ಕೆ ಗಂಡನೂ ಸಮ್ಮತಿಸಿ ಪತ್ನಿಯ ಪೋಷಕರೊಂದಿಗೆ ವಾಸಿಸಲು ಪ್ರಾರಂಭಿಸಿದ್ದರು.

ಪತ್ನಿ ತನ್ನ ಗಂಡನ ಮೇಲೆ ಹಲ್ಲೆ ನಡೆಸಿ ಕೋಣೆಯಲ್ಲಿ ಕೂಡಿಹಾಕಿದ್ದಾಳೆ ಎಂದು ಅರ್ಜಿದಾರರು ದೂರಿದ್ದರು. ತನ್ನ ಮಗನನ್ನು ಹೆಂಡತಿಯ ಮನೆಯಿಂದ ಬಿಡುಗಡೆ ಮಾಡುವಂತೆ ಆತನ ತಂದೆ ಪೊಲೀಸರ ಮೊರೆ ಹೋಗಿದ್ದರು. ಪೊಲೀಸರು ಪತ್ನಿ ವಿರುದ್ಧ ದೂರು ದಾಖಲಿಸಿಕೊಂಡಿದ್ದರು.

ಇದಕ್ಕೆ ಪ್ರತಿಯಾಗಿ, ಅರ್ಜಿದಾರರ ವಿರುದ್ಧ ಪತ್ನಿ ದೂರು ನೀಡಿದ್ದು ಅವರ ವಿರುದ್ಧ ಎಫ್‌ಐಆ ದಾಖಲಾಯಿತು. ತನ್ನ ಪತಿ ತನ್ನನ್ನು ಕೆಟ್ಟದಾಗಿ ನಡೆಸಿಕೊಂಡರು. ಸಾಕಷ್ಟು ವರದಕ್ಷಿಣೆ ನೀಡದ ಕಾರಣ ತನ್ನ ಅತ್ತೆ ಮಾವಂದಿರು ದೈಹಿಕವಾಗಿ ಹಲ್ಲೆ ಮಾಡಿ ನಿಂದಿಸುತ್ತಿದ್ದರು ಎಂದರು.

ಪತಿಯ ಸಂಬಂಧಿಕರಿಗೆ ಕಿರುಕುಳ ನೀಡಲೆಂದು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಅವರ ಪರ ವಕೀಲರು ವಾದಿಸಿದರು. ಆರೋಪಪಟ್ಟಿ, ಎಫ್‌ಐಆರ್‌ ಹಾಗೂ ಸಾಕ್ಷ್ಯಗಳನ್ನು ಪರಿಶೀಲಿಸಿದರೆ ಅರ್ಜಿದಾರರು ಯಾವುದೇ ಅಪರಾಧ ಎಸಗಿಲ್ಲ ಮತ್ತು ಪತ್ನಿ ಆಗಸ್ಟ್ 2015 ರಿಂದ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಒಪ್ಪಿಕೊಂಡಿದ್ದಾರೆ ಎಬುದಾಗಿ ಎಂದು ವಿವರಿಸಿದರು.

ಆದರೆ, ಅರ್ಜಿದಾರರ ವಿರುದ್ಧ ನಿರ್ದಿಷ್ಟ ಆರೋಪಗಳಿದ್ದು ಅವರ ವಿರುದ್ಧದ ಆರೋಪಪಟ್ಟಿಯನ್ನು ರದ್ದುಗೊಳಿಸಬಾರದು ಎಂದು ಪತ್ನಿ ಪರ ವಕೀಲರು ತೀವ್ರವಾಗಿ ವಾದಿಸಿದರು.

ಪ್ರತಿವಾದಿ-ಪತ್ನಿ ಮಾಡಿರುವ ಆರೋಪಗಳು ವಾಸ್ತವವಾಗಿ ತನ್ನ ಪತಿಯ ವಿರುದ್ಧವಾಗಿದ್ದು ಅರ್ಜಿದಾರರನ್ನು ಅನಗತ್ಯವಾಗಿ ಎಫ್ಐಆರ್‌ನಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ ಎಂಬುದು ಸ್ಪಷ್ಟ ಎಂಬ ಅರ್ಜಿದಾರರ ಪರ ವಕೀಲರ ವಾದವನ್ನು ಪೀಠ ಪುರಸ್ಕರಿಸಿದೆ.

"ಆರ್‌ಪಿಸಿ ಸೆಕ್ಷನ್ 498-ಎ, 342, 504 ಮತ್ತು 506 ಅಡಿಯ ಅಪರಾಧಗಳಿಗಾಗಿ ಅರ್ಜಿದಾರರ ವಿರುದ್ಧ ದಾಖಲಾದ ಎಫ್ಐಆರ್‌ನಿಂದ ಉಂಟಾದ ಆರೋಪಪಟ್ಟಿಯಲ್ಲಿನ ಪ್ರಕ್ರಿಯೆಗಳನ್ನು - ಪತ್ನಿಯ ಪತಿ ಪ್ರಸ್ತುತ ಅರ್ಜಿ ಸಲ್ಲಿಸದೇ ಇರುವುದರಿಂದ- ಅರ್ಜಿದಾರರಿಗೆ ಅನ್ವಯಿಸುವಂತೆ ಮಾತ್ರ ರದ್ದುಗೊಳಿಸುವ ಅಗತ್ಯವಿದೆ " ಎಂದು ಹೈಕೋರ್ಟ್ ಆದೇಶಿಸಿದೆ.

Attachment
PDF
Subhash Chamder Vs JK State.pdf
Preview

Related Stories

No stories found.
Kannada Bar & Bench
kannada.barandbench.com