“ಸರ್ಕಾರ ದೇಶವಲ್ಲ; ಸರ್ಕಾರವನ್ನು ಟೀಕಿಸುವುದು ದೇಶವನ್ನು ವಿರೋಧಿಸದಂತಾಗದು”: ಸಚಿವ ರಿಜಿಜು ಹೇಳಿಕೆ ಖಂಡಿಸಿದ ವಕೀಲರು

ಕಾನೂನು ಸಚಿವರ ಹೇಳಿಕೆ ಖಂಡಿಸಿ ಸುಪ್ರೀಂ ಕೋರ್ಟ್‌ ಮತ್ತು ವಿವಿಧ ಹೈಕೋರ್ಟ್‌ಗಳಲ್ಲಿ ಪ್ರಾಕ್ಟೀಸ್‌ ಮಾಡುತ್ತಿರುವ 62 ಹಿರಿಯ ವಕೀಲರು ಸೇರಿ 300ಕ್ಕೂ ಅಧಿಕ ವಕೀಲರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
Kiren Rijiju (Arbitrator's Handbook)
Kiren Rijiju (Arbitrator's Handbook)

ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಅವರು ಈಚೆಗೆ ಸುದ್ದಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ನಿವೃತ್ತ ನ್ಯಾಯಮೂರ್ತಿಗಳ ಕುರಿತು ನೀಡಿದ ಹೇಳಿಕೆ ಖಂಡಿಸಿ ಸುಪ್ರೀಂ ಕೋರ್ಟ್‌ ಮತ್ತು ವಿವಿಧ ಹೈಕೋರ್ಟ್‌ಗಳಲ್ಲಿ ಪ್ರಾಕ್ಟೀಸ್‌ ಮಾಡುತ್ತಿರುವ 62 ಹಿರಿಯ ವಕೀಲರೂ ಸೇರಿದಂತೆ 300ಕ್ಕೂ ಅಧಿಕ ವಕೀಲರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

“ಸಚಿವರ ಹೇಳಿಕೆಯನ್ನು ನಿಸ್ಸಂದೇಹವಾಗಿ ನಾವು ಖಂಡಿಸುತ್ತೇವೆ. ಸಚಿವರ ಹೇಳಿಕೆಯು ಬೆದರಿಕೆಯ ಸ್ವರೂಪದ್ದಾಗಿದ್ದು ಅವರು ಹೊಂದಿರುವ ಸ್ಥಾನಕ್ಕೆ ತಕ್ಕುದಾದುದಲ್ಲ. ಸರ್ಕಾರವನ್ನು ಟೀಕಿಸುವುದೆಂದರೆ ಅದು ದೇಶ ವಿರೋಧಿಯಾಗಲಿ, ರಾಷ್ಟ್ರ ಪ್ರೇಮಕ್ಕೆ ವಿರುದ್ಧ ವಾದುದಾಗಲಿ ಅಥವಾ ಭಾರತ ವಿರೋಧಿಯಾದುದಾಗಲೀ ಅಲ್ಲ ಎಂಬುದನ್ನು ಸಚಿವರಿಗೆ ನೆನಪಿಸಲು ಬಯಸುತ್ತೇವೆ. ಹಾಲಿ ಸರ್ಕಾರವು ದೇಶವಲ್ಲ, ದೇಶವು ಸರ್ಕಾರವಲ್ಲ” ಎಂದು ಪತ್ರದಲ್ಲಿ ಹೇಳಲಾಗಿದೆ.

“ಸಂಸದರಾಗಿ ರಿಜಿಜು ಅವರು ಭಾರತದ ಸಂವಿಧಾನಕ್ಕೆ ಬದ್ಧವಾಗಿ ನಂಬಿಕೆ ಮತ್ತು ನಿಷ್ಠೆಯನ್ನು ಎತ್ತಿಹಿಡಿಯಲು ಪ್ರತಿಜ್ಞೆ ಮಾಡಿದ್ದಾರೆ ಎಂದು ನೆನಪಿಸಲು ಬಯಸುತ್ತೇವೆ. ಕಾನೂನು ಸಚಿವರಾಗಿ ನ್ಯಾಯಾಂಗ ವ್ಯವಸ್ಥೆ, ಹಾಲಿ ಮತ್ತು ನಿವೃತ್ತ ನ್ಯಾಯಮೂರ್ತಿಗಳನ್ನು ರಕ್ಷಿಸುವುದು ಅವರ ಕರ್ತವ್ಯವಾಗಿದೆ” ಎಂದು ಪತ್ರದಲ್ಲಿ ವಿವರಿಸಲಾಗಿದೆ.

“ಸರ್ಕಾರವನ್ನು ಸಂಸತ್‌ ಅಥವಾ ವಿಧಾನಸಭೆಯಲ್ಲಿ ಮಾತ್ರವಷ್ಟೇ ಟೀಕಿಸಲು ಸೀಮಿತಗೊಳಿಸಿಲ್ಲ. ಟೀಕಿಸುವುದನ್ನು ನಿರ್ದಿಷ್ಟ ವರ್ಗದ ವ್ಯಕ್ತಿಗೆ ಮಾತ್ರವೇ ಸೀಮಿತಿಗೊಳಿಸಿ ಉಳಿದವರು ಟೀಕೆ ಮಾಡದಂತೆ ನಿರ್ಬಂಧಿಸಲಾಗಿಲ್ಲ. ಭಿನ್ನ ನಿಲುವು ತಳೆಯಲು, ಟೀಕಿಸಲು ಮತ್ತು ಶಾಂತಿಯುತವಾಗಿ ಯಾವುದೇ ಸರ್ಕಾರ ಮತ್ತು ಅದರ ನೀತಿ ಅಥವಾ ಕಾರ್ಯವನ್ನು ವಿರೋಧಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ. ಇದು ಮಾನವ ಹಕ್ಕಿನ ಭಾಗವಾಗಿದ್ದು, ಇದಕ್ಕೆ ಸಾಂವಿಧಾನಿಕ ರಕ್ಷಣೆಯಿದೆ. ಸರ್ಕಾರವನ್ನು ಟೀಕಿಸಿದ್ದಕ್ಕೆ ಯಾವುದೇ ವ್ಯಕ್ತಿಯ ದೇಶಪ್ರೇಮವನ್ನು ಕೆಣಕುವ ಅಧಿಕಾರವನ್ನು ಅತ್ಯುನ್ನತ ಸ್ಥಾನದಲ್ಲಿರುವವರೆಗೆ ನೀಡಲಾಗಿಲ್ಲ” ಎಂದು ಹೇಳಲಾಗಿದೆ.

Also Read
ಕೆಲ ನಿವೃತ್ತ ನ್ಯಾಯಾಧೀಶರು ಭಾರತ ವಿರೋಧಿ ಗ್ಯಾಂಗ್‌ನ ಭಾಗ; ದೇಶದ ವಿರುದ್ಧ ನಡೆದರೆ ಬೆಲೆ ತೆರಬೇಕು: ರಿಜಿಜು ಎಚ್ಚರಿಕೆ

ರಿಜಿಜು ಅವರು ಇತ್ತೀಚೆಗೆ ಸುದ್ದಿವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ರಾಜಕೀಯ ಪಕ್ಷಗಳ ಕಾರ್ಯಕರ್ತರಂತೆ ವರ್ತಿಸುವ ಕೆಲ ನ್ಯಾಯಾಧೀಶರು ಇದ್ದಾರೆ. ಅವರು ಭಾರತ ವಿರೋಧಿ ಗ್ಯಾಂಗ್‌ನ ಭಾಗವಾಗಿದ್ದು ವಿರೋಧ ಪಕ್ಷಗಳಂತೆ ನ್ಯಾಯಾಂಗವನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಜನ ಕಾರ್ಯಾಂಗವನ್ನು ನಿಯಂತ್ರಿಸಬೇಕು ಎಂದು ಹೇಗೆ ಹೇಳಬಲ್ಲರು? ಯಾರೂ ನುಣುಚಿಕೊಳ್ಳಲು ಸಾಧ್ಯವಿಲ್ಲ. ಯಾರು ದೇಶದ ವಿರುದ್ಧ ತಿರುಗಿಬೀಳುತ್ತಾರೋ ಅವರು ಬೆಲೆ ತೆರಬೇಕಾಗುತ್ತದೆ” ಎಂದು ಹೇಳಿದ್ದರು.

Related Stories

No stories found.
Kannada Bar & Bench
kannada.barandbench.com