ವಿಚ್ಛೇದನ ಮಂಜೂರು ಕೋರಿದ ಪ್ರಕರಣದಲ್ಲಿ ಪಾಟೀ ಸವಾಲು ಎದುರಿಸಲು ಪತಿ ಅಮೆರಿಕಾದಿಂದ ಬರಬೇಕಿರುವ ಹಿನ್ನೆಲೆಯಲ್ಲಿ ಆತನ ಪ್ರಯಾಣಕ್ಕೆ ತಗುಲುವ 1.65 ಲಕ್ಷ ರೂಪಾಯಿ ಭರಿಸುವಂತೆ ಪತ್ನಿಗೆ ನಿರ್ದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ.
ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅರ್ಜಿದಾರೆ ಪತ್ನಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.
ಕೌಟುಂಬಿಕ ನ್ಯಾಯಾಲಯದ ಈ ಆದೇಶಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ಹೈಕೋರ್ಟ್, ದಂಪತಿಗೆ ಅನುಕೂಲವಿರುವಂತೆ ಪಾಟೀ ಸವಾಲು ವ್ಯವಸ್ಥೆ ಮಾಡಬೇಕು. ಮುಂದಿನ ನಾಲ್ಕು ತಿಂಗಳಲ್ಲಿ ವಿಚ್ಛೇದನ ಕೋರಿಕೆ ಅರ್ಜಿ ಇತ್ಯರ್ಥಪಡಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ಪತ್ನಿಗೆ ಮಾಸಿಕ 20 ಸಾವಿರ ರೂಪಾಯಿ ಜೀವನಾಂಶ ಪಾವತಿಸಲು ಪತಿಗೆ ಕೌಟುಂಬಿಕ ನ್ಯಾಯಾಲಯ ಆದೇಶಿಸಿದೆ. ಈ ಮೊತ್ತ ಪಾವತಿಸಲು ನ್ಯಾಯಾಲಯ ಆದೇಶ ನೀಡಿದೆ ಎಂದರೆ, ಅರ್ಜಿದಾರರಿಗೆ ಜೀವನಾಧಾರಕ್ಕೆ ಯಾವುದೇ ಆದಾಯವಿಲ್ಲ ಎಂಬುದು ತಿಳಿಯುತ್ತದೆ. ಇಂತಹ ಸಂದರ್ಭದಲ್ಲಿ ಅಮೆರಿಕಾದಲ್ಲಿ ಉದ್ಯೋಗದಲ್ಲಿರುವ ಪತಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಪಾಟೀ ಸವಾಲಿಗೆ ಬಂದು ಹೋಗಲು ಪ್ರಯಾಣ ವೆಚ್ಚ ಭರಿಸುವಂತೆ ಪತ್ನಿಗೆ ಆದೇಶಿಸಿರುವುದಲ್ಲಿ ಯಾವುದೇ ತರ್ಕವಿಲ್ಲ. ಪತ್ನಿ ಇಷ್ಟು ದೊಡ್ಡ ಮೊತ್ತವನ್ನು ಪತಿಯ ಪ್ರಯಾಣಕ್ಕೆ ಭರಿಸಲು ಹೇಗೆ ಸಮರ್ಥರಿದ್ದಾರೆ ಎಂಬುದನ್ನು ಕೌಟುಂಬಿಕ ನ್ಯಾಯಾಲಯ ಯೋಚಿಸಬೇಕಿದೆ ಎಂದು ಪೀಠವು ಅಭಿಪ್ರಾಯಪಟ್ಟಿತು.
ವಿವಾಹ ವಿಚ್ಛೇದನದಂಥ ಗಂಭೀರ ಪ್ರಕರಣದಲ್ಲಿ ಪತಿಯನ್ನು ಪಾಟೀ ಸವಾಲಿಗೆ ಗುರಿಪಡಿಸುವುದು ಪತ್ನಿಯ ಹಕ್ಕಾಗಿದೆ. ನ್ಯಾಯದಾನ ಮಾಡುವ ನ್ಯಾಯಾಲಯಗಳು ಅರ್ಜಿದಾರರು ಪಾಲಿಸಲಾಗದಂತಹ ಷರತ್ತನ್ನು ಅವರ ಮೇಲೆ ಹೊರಿಸಲಾಗದು. ಯಾವುದೇ ಸಂದರ್ಭದಲ್ಲಿಯೇ ಆಗಲಿ, ಆಕ್ಷೇಪಿಸಲಾದ ಷರತ್ತು ನ್ಯಾಯಯುತವೆನಿಸದೆ ಹೋದಲ್ಲಿ ಅದು ಊರ್ಜಿತವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿತು.
ಮುಂದುವರೆದು, ಪ್ರಕರಣದಲ್ಲಿ ಪತಿಯೇ ವಿವಾಹ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪಾಟೀ ಸವಾಲಿಗೆ ಒಳಪಡಲು ಅಮೆರಿಕಾದಿಂದ ಭಾರತಕ್ಕೆ ಬಂದು ಹೋಗಲು ಪ್ರಯಾಣ ವೆಚ್ಚ ಭರಿಸಲಾಗದ ಬಡತನದಲ್ಲಿ ಅವರಿಗಿಲ್ಲ. ಒಂದು ವೇಳೆ ಪತ್ನಿ ವಿವಾಹ ವಿಚ್ಛೇದನ ಅರ್ಜಿ ಸಲ್ಲಿಸಿದ್ದರೆ, ಆಗ ವಿಭಿನ್ನ ಪರಿಗಣನೆಯ ಅಂಶ ಉದ್ಭವಿಸುತ್ತಿತ್ತು ಎಂದು ಪೀಠ ಅಭಿಪ್ರಾಯಪಟ್ಟಿತು.
ಪತಿ ಬೆಂಗಳೂರಿನಲ್ಲಿ ಇರುವಾಗ ಪಾಟೀ ಸವಾಲಿಗೆ ಗುರಿಪಡಿಸದಿರುವುದರಲ್ಲಿ ಪತ್ನಿಯ ತಪ್ಪು ಕೊಂಚ ಇದೆ ಎಂದು ಹೇಳಬಹುದು. ಆದರೆ, ಅದಕ್ಕೆ ಒಂದು ಸಮರ್ಥನೀಯ ಕಾರಣ ನೀಡಲಾಗಿದೆ. ವಿಡಿಯೋ ಕಾನ್ಫೆರೆನ್ಸ್ ಮೂಲಕ ಪ್ರತಿವಾದಿಯನ್ನು ಪಾಟೀ ಸವಾಲಿಗೆ ಒಳಪಡಿಸಲು ಅರ್ಜಿದಾರೆಯು ಒಪ್ಪುತ್ತಿಲ್ಲ ಎಂದೇನೂ ಇಲ್ಲ. ಪ್ರತಿವಾದಿಗೂ (ಪತಿ) ಕೂಡ ಇದು ಅನುಕೂಲಕರವಾಗಿದೆ ಎಂದು ನ್ಯಾಯಾಲಯ ಹೇಳಿತು.
ಇದಕ್ಕೂ ಮೊದಲು ಪತ್ನಿಯ ಪರ ವಕೀಲರು, ಅರ್ಜಿದಾರೆಗೆ ಪತಿಯು ಮಾಸಿಕ 20 ಸಾವಿರ ರೂಪಾಯಿ ಜೀವನಾಂಶ ಪಾವತಿಸುತ್ತಿದ್ದಾರೆ. ಕೆಲವು ತಿಂಗಳ ಜೀವನಾಂಶವು ಪಾವತಿಸುವುದು ಬಾಕಿಯಿದೆ. ಇಂತಹ ಪರಿಸ್ಥಿತಿಯಲ್ಲಿ ಪತಿಯ ಪ್ರಯಾಣ ವೆಚ್ಚ 1.65 ಲಕ್ಷ ರೂಪಾಯಿಯಷ್ಟು ದೊಡ್ಡ ಮೊತ್ತ ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯವು ನಿರ್ದೇಶಿಸಿರುವುದು ಸೂಕ್ತವಲ್ಲ ಎಂದಿದ್ದರು. ಪತಿ ಪರ ವಕೀಲರು, ಕೌಟುಂಬಿಕ ನ್ಯಾಯಾಲಯದ ಆದೇಶ ಸೂಕ್ತವಾಗಿದೆ ಎಂದು ಸಮರ್ಥಿಸಿದ್ದರು.
ಪ್ರಕರಣದ ಹಿನ್ನೆಲೆ: ಪ್ರಕರಣದಲ್ಲಿನ ಪತಿ ಮತ್ತು ಪತ್ನಿ 2014ರ ಜೂನ್‌ನಲ್ಲಿ ಮದುವೆಯಾಗಿದ್ದರು. ಇಬ್ಬರ ನಡುವಿನ ಹೊಂದಾಣಿಕೆ ಕೊರತೆಯಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ವಿಚ್ಛೇದನ ಕೋರಿ ಪತಿಯು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸದ್ಯ ಪತಿಯು ಅಮೆರಿಕಾದಲ್ಲಿ ವಾಸವಾಗಿದ್ದಾರೆ. ಅವರನ್ನು ಪಾಟೀ ಸವಾಲಿಗೆ ಒಳಪಡಿಸಬೇಕು ಎನ್ನುವುದು ಪತ್ನಿಯು ಕೋರಿಕೆಯಾಗಿತ್ತು. ಆ ಮನವಿಗೆ ಒಪ್ಪಿದ ಬೆಂಗಳೂರಿನ 6ನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯವು ಪತಿಯು ಅಮೆರಿಕಾದಿಂದ ಬಂದು ಹೋಗಲು ಪ್ರಯಾಣ ವೆಚ್ಚ ಭರಿಸುವಂತೆ ಪತ್ನಿಗೆ 2022ರ ನವೆಂಬರ್ 16ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪತ್ನಿಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.