'ದೇಶದಲ್ಲಿ ಕ್ರೌಡ್‌ಫಂಡಿಂಗ್‌ ಕುರಿತು ಯಾವುದಾದರೂ ಕಾನೂನು ಇದೆಯೇ?' ಗುಜರಾತ್ ಹೈಕೋರ್ಟ್ ಪ್ರಶ್ನೆ

ಕ್ರೌಡ್‌ಫಂಡಿಂಗ್‌ ಪರಿಕಲ್ಪನೆ ಭಾರತಕ್ಕೆ ಹೊಸದಾಗಿದ್ದು ಅದನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸದಿದ್ದರೆ ಅರಾಜಕತೆ ಉಂಟಾಗಬಹುದು ಎಂದು ನ್ಯಾಯಮೂರ್ತಿ ಹಸ್ಮುಖ್ ಸುತಾರ್ ಸೋಮವಾರ ಅಭಿಪ್ರಾಯಪಟ್ಟರು.
Saket Gokhale, Gujarat High Court
Saket Gokhale, Gujarat High Court Saket Gokhale (FB)

ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಸಾಕೇತ್ ಗೋಖಲೆ ಅವರು ಕ್ರೌಡ್‌ಫಂಡಿಂಗ್‌ ಮೂಲಕ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ  2022ರಲ್ಲಿ ದಾಖಲಾದ ಕ್ರಿಮಿನಲ್ ಮೊಕದ್ದಮೆಯನ್ನು ಸೋಮವಾರ ವಿಚಾರಣೆ ನಡೆಸಿರುವ ಗುಜರಾತ್‌ ಹೈಕೋರ್ಟ್‌ ಕ್ರೌಡ್‌ ಫಂಡಿಂಗ್‌ಅನ್ನು ಸರಿಯಾಗಿ ನಿಯಂತ್ರಿಸದಿದ್ದರೆ ಅರಾಜಕತೆಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದೆ [ಸಾಖೇತ್‌ ಸುಹಾಸ್‌ ಗೋಖಲೆ ಮತ್ತು ಗುಜರಾತ್‌ ಸರ್ಕಾರ ನಡುವಣ ಪ್ರಕರಣ]

ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ  ಗೋಖಲೆ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಹಸ್ಮುಖ್ ಸುತಾರ್ ಅವರು "ಕ್ರೌಡ್‌ಫಂಡಿಂಗ್ ಪರಿಕಲ್ಪನೆ ಭಾರತಕ್ಕೆ ಹೊಸದಾಗಿದ್ದು ಇದಕ್ಕೆ ಯಾವುದೇ ನಿಯಂತ್ರಣ ಇಲ್ಲವೇ ಕಾನೂನು ಮಾನ್ಯತೆ ಇದೆಯೇ?" ಎಂದು ಕೇಳಿದರು, ಮುಂದುವರೆದು ಅನೇಕ ದೇಶಗಳು ಅದನ್ನು ನಿರ್ಬಂಧಿಸಿವೆ ಎಂದು ಹೇಳಿದರು.  

(ಕ್ರೌಡ್‌ಫಂಡಿಂಗ್ ಎನ್ನುವುದು ಯೋಜನೆಗಳು ಮತ್ತು ವ್ಯವಹಾರಗಳಿಗೆ ಹಣಕಾಸು ಒದಗಿಸಲು ಆಸಕ್ತ ಜನರಿಂದ ಹಣ ಸಂಗ್ರಹಿಸುವ ಒಂದು ಮಾರ್ಗವಾಗಿದೆ. ಉದಾ: ನಿರ್ಮಾಪಕರ ಅಲಭ್ಯತೆ ಇದ್ದಾಗ ಸಿನಿಮಾ ತಯಾರಕರು ಜನರಿಂದಲೇ ಹಣ ಸಂಗ್ರಹಿಸಿ ಸಿನಿಮಾ ಬಿಡುಗಡೆ ಮಾಡುತ್ತಾರೆ. ಬಂದ ಲಾಭವನ್ನು ಹಣ ನೀಡಿದವರಿಗೆ ಹಂಚುತ್ತಾರೆ.)

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸ್ಟಾರ್ಟ್-ಅಪ್ ಸಂಸ್ಥೆಗಳಲ್ಲಿ ಹೂಡಿಕೆ ಮಾಡಲು ಮತ್ತು ಕ್ರೌಡ್‌ಫಂಡಿಂಗ್‌ಗಾಗಿ ಕೆಲವು ನಿಯಮಗಳನ್ನು ರೂಪಿಸಿದೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು. ಆದರೆ "ಆದರೆ ಸೆಬಿಯ ನಿಯಮಗಳು, ಸರ್ಕಾರೇತರ ಸಂಸ್ಥೆಗಳಿಗೆ (ಎನ್‌ಜಿಒ) ಮಾತ್ರ, ವ್ಯಕ್ತಿಗಳಿಗೆ ಅಲ್ಲ ಎಂದು ನಾನು ಭಾವಿಸುತ್ತೇನೆ. ಈ ಕ್ರೌಡ್‌ಫಂಡಿಂಗ್ ಹೊಸ ವಿಷಯವಾಗಿದೆ ಹಲವು ದೇಶಗಳು ಕ್ರೌಡ್‌ಫಂಡಿಂಗ್‌ಗೆ ಮಾನ್ಯತೆ ನೀಡಿಲ್ಲ. ಭಾರತದಲ್ಲಿ ಅದರ ಬಗ್ಗೆ ಸ್ಪಷ್ಟತೆ ಇಲ್ಲ. ಇಲ್ಲದಿದ್ದರೆ ಅದು ಅವ್ಯವಸ್ಥೆಗೆ ನಾಂದಿ ಹಾಡಬಹುದು” ಎಂದು ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದರು.

ಕ್ರೌಡ್ ಫಂಡಿಂಗ್ ಮತ್ತು ನಗದು ವರ್ಗಾವಣೆಯ ಮೂಲಕ ಸಂಗ್ರಹಿಸಿದ ಸುಮಾರು ₹ 1.07 ಕೋಟಿಯನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ 2022ರಲ್ಲಿ ಅಹಮದಾಬಾದ್ ಪೊಲೀಸರ ಸೈಬರ್ ಸೆಲ್ ದಾಖಲಿಸಿದ್ದ ಎಫ್‌ಐಆರ್ ರದ್ದುಗೊಳಿಸುವಂತೆ ಗೋಖಲೆ ಅವರು ಮನವಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 2023ರ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್‌ ಗೋಖಲೆ ಅವರಿಗೆ ಜಾಮೀನು ನೀಡಿತ್ತು.

ಸೋಮವಾರ, ವಕೀಲ ಸೋಮನಾಥ್ ವತ್ಸಾ ಅವರು ಗೋಖಲೆ ಪರ ಹೈಕೋರ್ಟ್‌ಗೆ ಹಾಜರಾಗಿ ತಮ್ಮ ಕಕ್ಷಿದಾರರಿಂದ ಯಾವುದೇ ಹಣ ಸಂಗ್ರಹಣೆಯಲ್ಲಿ ಯಾವುದೇ ವಂಚನೆ ನಡೆದಿಲ್ಲ ಎಂದು ಪ್ರತಿಪಾದಿಸಿದರು.

ಸುಸ್ಥಿರ ಉದ್ದೇಶಕ್ಕಾಗಿ ಯಾರಾದರೂ ದೇಣಿಗೆ ಸಂಗ್ರಹಿಸುತ್ತಿದ್ದು ಜನ ಅದಕ್ಕೆ ಹಣ ನೀಡಿದ್ದರೆ ಅದನ್ನು ಮೋಸದಿಂದ ಪಡೆದಿದ್ದಾರೆ ಎಂಬ ಪ್ರಶ್ನೆಯೇ ಉದ್ಭವಿಸದು. ದೂರುದಾರರು ಸಹ ತಾವು ದೇಣಿಗೆ ನೀಡಿದ್ದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ಸ್ವಯಂಪ್ರೇರಿತ ದೇಣಿಗೆ ಮೂಲಕವೇ ಎಲ್ಲಾ ಹಣ ಸಂಗ್ರಹವಾಗಿದೆ ಎಂದರು.

ಆದರೆ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಮಿತೇಶ್ ಅಮೀನ್ ಅವರು, "ಕ್ರೌಡ್‌ ಫಂಡಿಂಗ್‌ ಮೂಲಕ ₹ 76 ಲಕ್ಷಗಳನ್ನು ಸಂಗ್ರಹಿಸಲಾಗಿದ್ದು ಇದರ ಕೆಲ ಭಾಗವನ್ನಷ್ಟೇ ಆರ್‌ಟಿಐ ಕಾಯಿದೆಯಡಿ ಪ್ರಶ್ನೆಗಳನ್ನು ಕೇಳುವ ಉದ್ದೇಶಕ್ಕೆ ಬಳಸಲಾಗಿದೆ. ಉಳಿದ ಹಣವನ್ನು ಷೇರು ಹೂಡಿಕೆ ಹಾಗೂ ವಿಮಾನಯಾನದ ಟಿಕೆಟ್‌ ಖರೀದಿಗೆ ಖರ್ಚು ಮಾಡಲಾಗಿದೆ. ಇದಲ್ಲದೆ, ಈ ವ್ಯಕ್ತಿ ಮುಂದೆ ಒಂದು ರಾಜಕೀಯ ಪಕ್ಷಕ್ಕೂ ಸೇರಿದ್ದಾರೆ. ಹಾಗಾದರೆ, ಕ್ರೌಡ್‌ ಫಂಡಿಂಗ್ ಮೂಲಕ ಹಣವನ್ನು ಸಂಗ್ರಹಿಸಿದ್ದಾದರೂ ಏತಕ್ಕೆ? ಆರ್‌ಟಿಐ ಮತ್ತಿತರ ಉದ್ದೇಶವನ್ನು ಹೇಳಿಕೊಂಡು ಈ ವ್ಯಕ್ತಿ ಹಣ ಸಂಗ್ರಹಿಸಿದ್ದಾನೆ, ಆದರೆ ನಂತರ ಅದನ್ನು ತನ್ನ ವೈಯಕ್ತಿಕ ಖರ್ಚಿಗೆ ಬಳಸಿದ್ದಾನೆ. ಈ ವ್ಯಕ್ತಿಯನ್ನು ಸಂತ ಎನ್ನಲು ಸಾಧ್ಯವೇ?" ಎಂದು ಪ್ರಶ್ನಿಸಿದರು. ಅಲ್ಲದೆ ಹಣ ದುರುಪಯೋಗದ ಆರೋಪಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ಈಗಾಗಲೇ ಪ್ರಕರಣ ದಾಖಲಾಗಿದೆ ಎಂದು ಗಮನ ಸೆಳೆದರು.

ಆದರೆ ಎಫ್‌ಐಆರ್‌ ರದ್ದುಗೊಳಿಸಿ ಪ್ರಸ್ತುತ ಅರ್ಜಿಯನ್ನು ಪುರಸ್ಕರಿಸಿದರೆ ಪಿಎಂಎಲ್‌ಎ ಪ್ರಕರಣ ನಿಲ್ಲದು ಎಂದು ವತ್ಸಾ ತಿಳಿಸಿದರು.

ಅಮೀನ್ ಈ ನಿಲುವನ್ನು ಒಪ್ಪಲಿಲ್ಲ. ಪ್ರಕರಣದಲ್ಲಿ ಗೋಖಲೆ ಅವರನ್ನು ಬಿಡುಗಡೆ ಮಾಡಲು ಕೆಳ ನ್ಯಾಯಾಲಯ ನಿರಾಕರಿಸಿರುವುದನ್ನು ಪ್ರಸ್ತುತ ಅರ್ಜಿ ಪ್ರಶ್ನಿಸಿಲ್ಲ ಎಂದರು. ಪ್ರಕರಣದ ಮುಂದಿನ ವಿಚಾರಣೆ ಮೇ 1ರಂದು ನಡೆಯಲಿದೆ.

Related Stories

No stories found.
Kannada Bar & Bench
kannada.barandbench.com