ಡ್ರಗ್ಸ್ ಪ್ರಕರಣ: ನಟ ಶಾರುಖ್‌ ಪುತ್ರ ಆರ್ಯನ್‌ ಖಾನ್ ಹಾಗೂ‌ ಮತ್ತಿತರರು ಅಕ್ಟೋಬರ್‌ 4ರವರೆಗೆ ಎನ್‌ಸಿಬಿ ವಶಕ್ಕೆ

ವಿಲಾಸಿ ಹಡಗು ಕಾರ್ಡೇಲಿಯಾ ಕ್ರೂಸ್‌ ಎಂಪ್ರೆಸ್‌ನಲ್ಲಿ ಆಯೋಜಿಸಲಾಗಿದ್ದ ರೇವ್‌ ಪಾರ್ಟಿಗೆ ಸಂಬಂಧಿಸಿದಂತೆ ಆರ್ಯನ್‌ ಖಾನ್‌ ಹಾಗೂ ಇತರ ಏಳು ಮಂದಿಯನ್ನು ಎನ್‌ಸಿಬಿ ಶನಿವಾರ ವಶಕ್ಕೆ ಪಡೆದಿತ್ತು.
ಡ್ರಗ್ಸ್ ಪ್ರಕರಣ: ನಟ ಶಾರುಖ್‌ ಪುತ್ರ ಆರ್ಯನ್‌ ಖಾನ್ ಹಾಗೂ‌ ಮತ್ತಿತರರು ಅಕ್ಟೋಬರ್‌ 4ರವರೆಗೆ ಎನ್‌ಸಿಬಿ ವಶಕ್ಕೆ

ವಿಲಾಸಿ ಹಡಗು ಕಾರ್ಡೇಲಿಯಾ ಕ್ರೂಸ್‌ ಎಂಪ್ರೆಸ್‌ ಶಿಪ್‌ನಲ್ಲಿ ಆಯೋಜಿಸಿಲಾಗಿತ್ತು ಎನ್ನಲಾದ ರೇವ್‌ ಪಾರ್ಟಿಗೆ ಸಂಬಂಧಿಸಿದಂತೆ ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರ ಪುತ್ರ ಆರ್ಯನ್‌ ಖಾನ್‌ ಹಾಗೂ ಇತರ ಮೂವರನ್ನು ಮುಂಬೈ ನ್ಯಾಯಾಲಯವೊಂದು ಅಕ್ಟೋಬರ್‌ 4ರವರೆಗೆ ಮಾದಕವಸ್ತು ನಿಯಂತ್ರಣ ದಳದ ವಶಕ್ಕೆ ನೀಡಿದೆ.

ಪ್ರಕರಣದ ವಿಚಾರಣೆ ವೇಳೆ, ಎನ್‌ಸಿಬಿ ವಕೀಲ ಅದ್ವೈತ್‌ ಸೇಥ್ನಾ ಅವರು ಎರಡು ದಿನಗಳ ಕಾಲ ಆರೋಪಿಗಳನ್ನು ವಶಕ್ಕೆ ನೀಡಲು ನ್ಯಾಯಾಲಯಕ್ಕೆ ಮನವಿ ಮಾಡಿದರು. “ಎನ್‌ಸಿಬಿಯು ಮಾದಕವಸ್ತು ಪೂರೈಕೆದಾರನೊಬ್ಬನನ್ನು ವಶಕ್ಕೆ ಪಡೆದಿದ್ದು ವಿವಿಧ ಸಂಪರ್ಕಿತರ ಬಗ್ಗೆ ಪತ್ತೆ ಹಚ್ಚಬೇಕಿದೆ. ವಾಟ್ಸಪ್‌ ಸಂದೇಶಗಳ ಮೂಲಕ ಈ ಸಂಪರ್ಕ ಕೊಂಡಿಗಳು ಕಂಡು ಬಂದಿವೆ,” ಎಂದು ವಿವರಿಸಿದರು.

ಆರೋಪಿಗಳು ಎದುರಿಸುತ್ತಿರುವ ಅಪರಾಧವು ಜಾಮೀನಿಗೆ ಒಳಪಟ್ಟಿರುವಂಥದ್ದೇ ಆದರೂ ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಅವರು ಹೇಳಿದರು. “ಮೇಲುನೋಟಕ್ಕೇ ವಾಟ್ಸಪ್‌ ಸಂದೇಶಗಳಲ್ಲಿ ದೋಷಾರೋಪಣೆ ಮಾಡಬಹುದಾದ ವಿವರ ಲಭ್ಯವಾಗಿದ. ಹಾಗಾಗಿ ವಶಕ್ಕೆ ನೀಡಲು ಕೋರಿರುವ ರಿಮ್ಯಾಂಡ್‌ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಬೇಕು” ಎಂದು ವಾದಿಸಿದರು.

ಇತ್ತ ಖಾನ್‌ ಪರವಾಗಿ ಹಾಜಾರದ ವಕೀಲ ಸತೀಶ್‌ ಮಾನೆಶಿಂಧೆ ಅವರು ವಾದ ಮಂಡಿಸಿ, “ನನ್ನ ಕಕ್ಷಿದಾರರನ್ನು ಆಯೋಜಕರು ಆಹ್ವಾನಿಸಿದ್ದರು. ಅವರ ಬಳಿ ಯಾವುದೇ ಬೋರ್ಡಿಂಗ್‌ ಪಾಸ್‌ ಇಲ್ಲ. ಅವರ ಬಳಿ ಯಾವುದೇ ಪದಾರ್ಥ (ಮಾದಕವಸ್ತು) ದೊರೆತಿಲ್ಲ. ಅವರ ಮೊಬೈಲ್‌ ಫೋನ್‌ ಸಹ ಪರಿಶೀಲಿಸಲಾಗಿದೆ. ಪರೀಕ್ಷೆಗಳಲ್ಲಿಯೂ ಸಹ ಯಾವುದೇ ಅಂಶ ಪತ್ತೆಯಾಗಿಲ್ಲ” ಎಂದರು.

ಮುಂದುವರೆದು ಅವರು, ಸಂಬಂಧಪಟ್ಟ ಅಧಿಕಾರಿಗಳು ಅವರನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದು ಯಾವುದೇ ರೀತಿಯ ಒತ್ತಾಯವನ್ನು ಮಾಡುತ್ತಿಲ್ಲ. ಹಾಗಾಗಿ ತಾವು ಒಂದು ದಿನದ ಅವಧಿಯ ಮಟ್ಟಿಗೆ ವಶಕ್ಕೆ ಸಮ್ಮತಿಸುವುದಾಗಿ ತಿಳಿಸಿದರು. “ನಾನು ಒಂದು ವೇಳೆ ಇಂದು ಜಾಮೀನು ಅರ್ಜಿ ಸಲ್ಲಿಸಿದರೂ ಅವರು ಅದಕ್ಕೆ ಪ್ರತ್ಯುತ್ತರ ನೀಡಲು ಸಮಯ ಕೋರುತ್ತಾರೆ. ಇದರಿಂದ ನನ್ನ ಉದ್ದೇಶ ಈಡೇರಿದಂತಾಗುವುದಿಲ್ಲ. ಹಾಗಾಗಿ, ಘನ ನ್ಯಾಯಾಧೀಶರು ಒಂದು ದಿನದ ಮಟ್ಟಿಗೆ ವಶಕ್ಕೆ ನೀಡಲು ಸಮ್ಮತಿಸಬಹುದು,” ಎಂದು ವಾದಿಸಿದರು.

ಅಂತಿಮವಾಗಿ ನ್ಯಾಯಾಲಯವು ಖಾನ್‌ ಸಹಿತ ಮೂವರು ಆರೋಪಿಗಳನ್ನು ಅಕ್ಟೋಬರ್‌ 4ರವರೆಗೆ (ನಾಳೆ, ಸೋಮವಾರ) ವಿಚಾರಣೆಗಾಗಿ ಎನ್‌ಸಿಬಿ ವಶಕ್ಕೆ ನೀಡಿತು. ಖಾನ್‌ ಹಾಗೂ ಇತರೆ ಏಳು ಮಂದಿಯನ್ನು ಎನ್‌ಸಿಬಿಯು ಶನಿವಾರದಂದು ವಶಕ್ಕೆ ಪಡೆದಿತ್ತು. ಕಾರ್ಡೇಲಿಯಾ ಕ್ರೂಸ್‌ ಎಂಪ್ರೆಸ್‌ ಹಡಗಿನಲ್ಲಿ ಡ್ರಗ್ಸ್‌ ದೊರೆತ ಹಿನ್ನೆಲೆಯಲ್ಲಿ ರೇವ್‌ ಪಾರ್ಟಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು.

Related Stories

No stories found.
Kannada Bar & Bench
kannada.barandbench.com