
ಪ್ಲುಟೊ ಎಕ್ಸ್‌ಚೇಂಜ್ ಎಂಬ ವೇದಿಕೆ ಮೂಲಕ ಕ್ರಿಪ್ಟೋಕರೆನ್ಸಿ ವಂಚನೆ ನಡೆಸುತ್ತಿದ್ದ ಜಾಲದಲ್ಲಿದ್ದ ಆರೋಪ ಹೊತ್ತ ವ್ಯಕ್ತಿಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್ ಸೋಮವಾರ ನಿರಾಕರಿಸಿದೆ. ಇದೇ ವೇಳೆ ಕ್ರಿಪ್ಟೋಕರೆನ್ಸಿ ದೇಶದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅದು ಹೇಳಿದೆ [ ಉಮೇಶ್ ವರ್ಮಾ ಮತ್ತು ಸರ್ಕಾರ ನಡುವಣ ಪ್ರಕರಣ].
ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವುದರಿಂದ ಗುರುತಿಸಲ್ಪಟ್ಟ ಹಣ ಅಪರಿಚಿತ ಮಾರ್ಗಗಳಲ್ಲಿ ಕಣ್ಮರೆಯಾಗಬಹುದು ಎಂದು ನ್ಯಾಯಮೂರ್ತಿ ಗಿರೀಶ್ ಕಠ್ಪಾಲಿಯಾ ತಿಳಿಸಿದರು. ಜಾಮೀನು ಮಂಜೂರು ಮಾಡುವ ವಿಚಾರಕ್ಕೆ ಬಂದಾಗ ಇಂತಹ ಆರ್ಥಿಕ ಅಪರಾಧಗಳನ್ನು ವಿಭಿನ್ನ ನೆಲೆಯಲ್ಲಿ ಪರಿಶೀಲಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
"ಆರ್ಥಿಕ ಅಪರಾಧಗಳು ಭಿನ್ನ ವರ್ಗವಾಗಿದ್ದು ಜಾಮೀನಿನ ಪ್ರಕರಣಗಳಲ್ಲಿ ವಿಭಿನ್ನ ವಿಧಾನದೊಂದಿಗೆ ಅವುಗಳನ್ನು ಪರಿಶೀಲಿಸಬೇಕಾಗಿದೆ. ಏಕೆಂದರೆ, ಹೆಚ್ಚಿನ ಸಾಂಪ್ರದಾಯಿಕ ಭೌತಿಕ ಅಪರಾಧಗಳಿಗಿಂತ ಭಿನ್ನವಾಗಿ, ಆರ್ಥಿಕ ಅಪರಾಧಗಳು ವಿಸ್ತಾರವಾದ ಯೋಜನೆ ಮತ್ತು ಪರಿಣತಿಯೊಂದಿಗೆ ಕೂಡಿರುತ್ತವೆ. ಅದರಲ್ಲಿಯೂ ಕ್ರಿಪ್ಟೋ ಕರೆನ್ಸಿ ಎಂಬುದು ಗುರುತಿಸಲ್ಪಟ್ಟ ಹಣವನ್ನು ಅಪರಿಚಿತ ಮಾರ್ಗಗಳಲ್ಲಿ ಕಣ್ಮರೆ ಮಾಡಿ ದೇಶದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ” ಎಂದು ಜುಲೈ 14ರಂದು ನೀಡಿದ ತೀರ್ಪು ಹೇಳಿದೆ.
ಈ ಪ್ರಕರಣದಲ್ಲಿ, ಪ್ರಾಥಮಿಕವಾಗಿ ಆರೋಪಿಗಳು ಭಾರತದಲ್ಲಿ ಕ್ರಿಪ್ಟೋಕರೆನ್ಸಿಯ ಮಾನ್ಯತೆ ರದ್ದಾದ ನಂತರವೂ, ಕ್ರಿಪ್ಟೋಕರೆನ್ಸಿಯಲ್ಲಿನ ಹೂಡಿಕೆಯ ಮೇಲೆ ಮಾಸಿಕ ಶೇ 20-30ರಷ್ಟು ಲಾಭ ಪಡೆಯುತ್ತಾರೆ ಎಂದು ಭ್ರಮೆ ಹುಟ್ಟು ಹಾಕುವ ಮೂಲಕ 61 ಹೂಡಿಕೆದಾರರನ್ನು ವಂಚಿಸಿದ್ದಾರೆ. ಇದು ಅವರ ದುರುದ್ದೇಶವನ್ನು ತೋರಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ತಾನು ದೇಶ ತೊರೆಯುವ ವ್ಯಕ್ತಿಯಲ್ಲ ಮತ್ತು ಹೂಡಿಕೆದಾರರಿಗೆ ಪೂರ್ತಿ ಹಣ ಪಾವತಿಸುವೆ ಎಂಬ ಆರೋಪಿಯ ವಾದವನ್ನು ಕೂಡ ಅದು ತಿರಸ್ಕರಿಸಿತು. ಅಲ್ಲದೆ ಮಧ್ಯಂತರ ಜಾಮೀನಿನ ಮೇಲೆ ಮುಂದುವರಿಯುವ ಸಲುವಾಗಿ ವ್ಯಾಜ್ಯ ಇತ್ಯರ್ಥಕ್ಕೆ ನಿಗದಿಪಡಿಸಲಾದ ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ವಿಳಂಬಗೊಳಿಸಲು ಆರೋಪಿ ಯತ್ನಿಸುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿತು.
ಆರೋಪಿ ನಂಬಿಕೆ ಮೂಡಿಸುವುದಕ್ಕಾಗಿ ಮಧ್ಯಸ್ಥಿಕೆಯನ್ನು ಸಾಧನವನ್ನಾಗಿ ಬಳಸಿಕೊಂಡರು. ಹಾಗಾಗಿಯೇ ಅವರು ಮಧ್ಯಂತರ ಜಾಮೀನು ಪಡೆಯಲು ಸಾಧ್ಯವಾಯಿತು. ನಂತರ ಮಧ್ಯಂತರ ಜಾಮೀನನ್ನು ಶಾಶ್ವತವಾಗಿ ಉಳಿಸಿಕೊಳ್ಳುವುದಕ್ಕಾಗಿ ಮಧ್ಯಸ್ಥಿಕೆ ಪ್ರಕ್ರಿಯೆ ಮುಂದುವರೆಯುತ್ತಲೇ ಇರುವಂತೆ ನೋಡಿಕೊಂಡರು ಎಂದು ನ್ಯಾಯಾಲಯ ಹೇಳಿತು.