ಪ್ರಸ್ತುತ ಭಾರತೀಯ ನ್ಯಾಯಾಂಗದಲ್ಲಿ ಬಹುತೇಕ ಮೇಲ್ಜಾತಿಯ, ಭಿನ್ನಲಿಂಗ ಅನುರಕ್ತಿಯ ನ್ಯಾಯಾಧೀಶರು ಇದ್ದು ಅವರು ವೈವಿಧ್ಯಮಯ ಸಮಾಜವನ್ನು ಪ್ರತಿನಿಧಿಸುವುದಿಲ್ಲ ಎಂದು ಹಿರಿಯ ನ್ಯಾಯವಾದಿ ಸೌರಭ್ ಕಿರ್ಪಾಲ್ ಇತ್ತೀಚೆಗೆ ಹೇಳಿದ್ದಾರೆ.
ಸಲಿಂಗ ಮನೋಧರ್ಮದ ಸೌರಭ್ ಅವರಿಗೆ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿಗೊಳಿಸುವ ಸಂಬಂಧ ಎದ್ದ ವಿವಾದ ಕುರಿತು ಇತ್ತೀಚೆಗೆ ನಡೆದ ಕೋಲ್ಕತ್ತಾ ಸಾಹಿತ್ಯೋತ್ಸವದಲ್ಲಿ ಕೇಳಲಾದ ಪ್ರಶ್ನೆಗೆ ಕಿರ್ಪಾಲ್ ಪ್ರತಿಕ್ರಿಯಿಸಿದರು. ಕಿರ್ಪಾಲ್ ಅವರ ʼಫಿಫ್ಟೀನ್ ಜಜ್‌ಮೆಂಟ್: ಕೇಸಸ್ ದಟ್ ಶೇಪ್ಡ್ ಇಂಡಿಯಾಸ್ ಫೈನಾನ್ಷಿಯಲ್ ಲ್ಯಾಂಡ್‌ಸ್ಕೇಪ್ʼ ಪುಸ್ತಕದ ಚರ್ಚೆಯ ಸಂದರ್ಭದಲ್ಲಿ ಅವರಿಗೆ ಈ ಪ್ರಶ್ನೆ ಕೇಳಲಾಯಿತು.
ಸೌರಭ್ ಅವರು ತಮ್ಮದು ಸಲಿಂಗ ಲೈಂಗಿಕ ಆಸಕ್ತಿ ಎಂದು ಹೇಳಿಕೊಂಡದ್ದು ಪೂರ್ವಗ್ರಹಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಅವರ ಪದೋನ್ನತಿಗೆ ಅಸಮ್ಮತಿ ವ್ಯಕ್ತಪಡಿಸಿತ್ತು. ಅದು ನೀಡಿದ ಕಾರಣವನ್ನು ಸರ್ವೋಚ್ಚ ನ್ಯಾಯಾಲಯದ ಜಾಲತಾಣದಲ್ಲಿ ಕೊಲಿಜಿಯಂ ಪ್ರಕಟಿಸಿದಾಗ ವಿವಾದವೆದ್ದಿತ್ತು.
ಕಿರ್ಪಾಲ್ ಮಾತಿನ ಪ್ರಮುಖಾಂಶಗಳು
ನ್ಯಾಯಾಧೀಶರು ತಮ್ಮ ಕಾಳಜಿ, ಸಾಮಾಜಿಕ ಪರಿಸರ, ಪರಿಕಲ್ಪನೆ ಹಾಗೂ ಆಲೋಚನೆಗಳಿಂದ ಸಂಪೂರ್ಣ ದೂರ ಇರಬೇಕು ಎಂದು ಭಾವಿಸುವುದು ತಪ್ಪು.
ಭಾರತೀಯ ನ್ಯಾಯಾಂಗದಲ್ಲಿ ಬಹುತೇಕ ಮೇಲ್ಜಾತಿಯ, ಭಿನ್ನಲಿಂಗ ಅನುರಕ್ತಿಯ ನ್ಯಾಯಾಧೀಶರು ಇದ್ದಾರೆ. ಅವರದ್ದೂ ಒಂದು ಬಗೆಯ ಪೂರ್ವಗ್ರಹವೇ. ನನ್ನ ಮುಂದಿರುವ ಜನತೆ ಅವರಲ್ಲ. ನಾನು ವಾಸಿಸುವ ದೇಶ ಅದಲ್ಲ. ನ್ಯಾಯಪೀಠವು ನಾವಿರುವ ಸಮಾಜದ ಒಂದು ಭಾಗವನ್ನು ಪ್ರತಿನಿಧಿಸಬಾರದೆ? ಅದನ್ನೇ ನಾವು ಪೂರ್ವಗ್ರಹ ಎನ್ನುವುದು…
ಸಂವಿಧಾನದಲ್ಲಿನ ಅಸ್ಪಷ್ಟ ಪದವನ್ನು ನ್ಯಾಯಾಧೀಶರೆನಿಸಿಕೊಂಡವರು ಅನಿವಾರ್ಯವಾಗಿ ವ್ಯಾಖ್ಯಾನಿಸಲು ಹೊರಟಾಗ ಆ ನಿರ್ದಿಷ್ಟ ಪದ ಶ್ರೀಮಂತ ಮೇಲ್ಜಾತಿ ವ್ಯಕ್ತಿಗೆ ಪ್ರತ್ಯೇಕವಾಗಿ ಹಾಗೆಯೇ ದಲಿತರಿಗೆ ಮಹಿಳೆಯರಿಗೆ ವಿರುದ್ಧವಾಗಿ ಇರುತ್ತದೆ.
ಒಂದು ಮನೋಧರ್ಮ ತನ್ನಷ್ಟಕ್ಕೆ ಪಕ್ಷಪಾತಕ್ಕೆ ಕಾರಣವಾಗುತ್ತದೆ ಎಂದು ಭಾವಿಸುವುದು ನ್ಯಾಯಾಧೀಶರಿಗೆ ಮಾಡುವ ಅಪಚಾರ.
ಒಂದು ನಿರ್ದಿಷ್ಟ ಪ್ರಕರಣಕ್ಕೆ ನೀವು ಅಷ್ಟು ಭಾವನಾತ್ಮಕವಾಗಿ ಅಂಟಿಕೊಂಡರೆ ಅದಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಿಲ್ಲ ಎಂದು ನೀವು ಕಂಡುಕೊಂಡರೆ, ಆ ಪ್ರಕರಣದ ವಿಚಾರಣೆಯನ್ನು ನಿಲ್ಲಿಸುವುದೇ ಸರಿಯಾದ ಉತ್ತರ.
ಕೊಲಿಜಿಯಂ ನಮ್ಮಲ್ಲಿರುವ ಅತ್ಯುತ್ತಮ ವ್ಯವಸ್ಥೆಯಲ್ಲ. ಆದರೆ ಇದನ್ನು ಬದಲಿಸಲು ಹೆಚ್ಚಿನ ಪಾರದರ್ಶಕತೆಯಿಂದ ಕೂಡಿದ ಮತ್ತು ವ್ಯಾಪಕವಾದ ಸಮಾಲೋಚನೆಯ ಅಗತ್ಯವಿದೆ. ಆದರೆ ನ್ಯಾಯಮೂರ್ತಿಗಳ ನೇಮಕದಲ್ಲಿ ನ್ಯಾಯಮೂರ್ತಿಗಳಿಗೇ ಪ್ರಾಮುಖ್ಯತೆ ಇರಬೇಕು.
ಕಾನೂನು ವ್ಯವಸ್ಥೆಯಲ್ಲಿ ವಿಶಿಷ್ಟ ಲೈಂಗಿಕ ಆಸಕ್ತಿ ಉಳ್ಳವರನ್ನು (ಕ್ವಿಯರ್) ಪ್ರೋತ್ಸಾಹಿಸಬೇಕಾದರೆ ಜನರೇ ಪೂರಕ ವಾತಾವರಣ ಸೃಷ್ಟಿಸಬೇಕು. ಪ್ರತಿಬಾರಿ ಹೋಮೋಫೋಬಿಕ್ (ಸಲಿಂಗ ಭೀತಿ) ಹೇಳಿಕೆಗಳು ಬಂದಾಗ ಅದಕ್ಕೆ ಮಹತ್ವ ನೀಡದೆ ಅದರ ಬಗ್ಗೆ ಮಾತನಾಡಿ. ಲೈಂಗಿಕ ಅಲ್ಪಸಂಖ್ಯಾತರೊಂದಿಗೆ ಮಿತ್ರರಾಗಿರಬೇಕು.
ವಿಶಿಷ್ಟ ಲೈಂಗಿಕ ಆಸಕ್ತಿ ವಕೀಲರ ಸಂಘ ಸ್ಥಾಪಿಸುವ ನಿಟ್ಟಿನಲ್ಲಿ ನ್ಯಾಯವಾದಿಗಳ ಸ್ವಲ್ಪ ಹಣ ಮೀಸಲಿಡಬೇಕು.