ಕಸ್ಟಡಿ ಸಾವು: ಠಾಣೆಗಳಲ್ಲಿ ಸಿಸಿಟಿವಿ ಕೊರತೆ ಕುರಿತು ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡ ಸುಪ್ರೀಂ ಕೋರ್ಟ್‌

ಕಳೆದ 7 ರಿಂದ 8 ತಿಂಗಳುಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ 11 ಸಾವುಗಳು ಸಂಭವಿಸಿವೆ ಎಂದು ದೈನಿಕ್ ಭಾಸ್ಕರ್ ಪತ್ರಿಕೆ ಪ್ರಕಟಿಸಿದ್ದ ವರದಿ ಆಧಾರದ ಮೇಲೆ ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡಿತು.
Police station, CCTV camera
Police station, CCTV camera
Published on

ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ವಿಚಾರವಾಗಿ ಸುಪ್ರೀಂ ಕೋರ್ಟ್ ಗುರುವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದೆ.

ಕಳೆದ 7 ರಿಂದ 8 ತಿಂಗಳುಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ 11 ಸಾವುಗಳು ಸಂಭವಿಸಿವೆ ಎಂದು ದೈನಿಕ್ ಭಾಸ್ಕರ್ ಪತ್ರಿಕೆ ಪ್ರಕಟಿಸಿದ್ದ ವರದಿ ಆಧಾರದ ಮೇಲೆ  ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ವಿಚಾರಣೆ ನಡೆಸಲು ನಿರ್ಧರಿಸಿತು.

Also Read
ಪೊಲೀಸ್‌ ಠಾಣೆಯಲ್ಲಿ ಸಿಸಿಟಿವಿ ಕೆಲಸ ಮಾಡುತ್ತಿಲ್ಲ ಎಂಬ ವಾದವನ್ನು ಒಪ್ಪಲಾಗದು: ಬಾಂಬೆ ಹೈಕೋರ್ಟ್‌

"ದೈನಿಕ್ ಭಾಸ್ಕರ್ ವರದಿಯ ಆಧಾರದ ಮೇಲೆ, 2025 ರಲ್ಲಿ ಕಳೆದ 7-8 ತಿಂಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ 11 ಸಾವುಗಳು ಸಂಭವಿಸಿವೆ ಎಂದು ವರದಿಯಾಗಿರುವುದರಿಂದ, 'ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿಗಳ ಕೊರತೆ' ಎಂಬ ಶೀರ್ಷಿಕೆಯಡಿಯಲ್ಲಿ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ  ದಾಖಲಿಸಲು ನಿರ್ದೇಶಿಸಲಾಗುತ್ತಿದೆ" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ನ್ಯಾಯಮೂರ್ತಿಗಳಾದ ರೋಹಿಂಟನ್ ಫಾಲಿ ನಾರಿಮನ್ ,  ಕೆ.ಎಂ. ಜೋಸೆಫ್  ಮತ್ತು ಅನಿರುದ್ಧ ಬೋಸ್ ಅವರಿದ್ದ ಪೀಠ 2020ರಲ್ಲಿ ನೀಡಿದ ಮಹತ್ವದ ತೀರ್ಪಿನಲ್ಲಿ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಸುವುದನ್ನು ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿತ್ತು.

ತೀರ್ಪಿನಲ್ಲಿ, ನ್ಯಾಯಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿಯೂ ರಾತ್ರಿ ವೇಳೆಯೂ ಚಿತ್ರೀಕರಿಸಬಲ್ಲ (ನೈಟ್‌ ವಿಷನ್‌) ಕ್ಯಾಮೆರಾಗಳೊಂದಿಗೆ ಸಿಸಿಟಿವಿಗಳನ್ನು ಅಳವಡಿಸಲು ಆದೇಶಿಸಿತ್ತು.

ಸಿಬಿಐ, ಎನ್‌ಐಎ, ಜಾರಿ ನಿರ್ದೇಶನಾಲಯ (ಇ ಡಿ), ಮಾದಕ ದ್ರವ್ಯ ನಿಯಂತ್ರಣ ದಳ (ಎನ್‌ಸಿಬಿ), ಕಂದಾಯ ಗುಪ್ತಚರ ಇಲಾಖೆ (ಡಿಆರ್‌ಐ), ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ಹಾಗೂ ಜನರನ್ನು ವಿಚಾರಣೆಗೊಳಪಡಿಸುವ ಯಾವುದೇ ಕೇಂದ್ರೀಯ ಸಂಸ್ಥೆ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

Also Read
ಪೊಲೀಸ್‌ ಠಾಣೆ, ತನಿಖಾ ಸಂಸ್ಥೆಗಳಲ್ಲಿ ಸಿಸಿಟಿವಿ ಅಳವಡಿಕೆ; ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಆಡಿಯೊ–ವಿಡಿಯೋ ಸಹಿತ ರಾತ್ರಿ ವೇಳೆಯೂ ಚಿತ್ರೀಕರಿಸಬಲ್ಲ ನೈಟ್‌ವಿಷನ್ ಕ್ಯಾಮೆರಾಗಳನ್ನು ಅಳವಡಿಸಬೇಕು. ಪ್ರವೇಶ/ನಿರ್ಗಮನ ದ್ವಾರಗಳು, ಲಾಕ್-ಅಪ್‌ಗಳು, ಕಾರಿಡಾರ್‌ಗಳು, ಲಾಬಿ ಹಾಗೂ ವಿಚಾರಣೆ ಕೊಠಡಿ ಸುತ್ತಮುತ್ತ ಎಲ್ಲ ಕಡೆ ಸಿಸಿಟಿವಿ ಕವರೇಜ್ ಇರಬೇಕು. ವಿದ್ಯುತ್/ಅಂತರ್ಜಾಲ ಸೌಕರ್ಯವಿಲ್ಲದ ಕಡೆಗಳಲ್ಲಿ ಸೌರಶಕ್ತಿ ಅಥವಾ ಪವನ ವಿದ್ಯುತ್‌ ಬಳಸಿ ಸಿಸಿಟಿವಿ ಕಾರ್ಯಗತಗೊಳಿಸುವುದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಕರ್ತವ್ಯ. ಕಸ್ಟಡಿ ಸಾವು ಅಥವಾ ಗಾಯಗೊಂಡ ಪ್ರಕರಣಗಳಲ್ಲಿ ಸಂಬಂಧಪಟ್ಟವರಿಗೆ ಮಾನವ ಹಕ್ಕು ನ್ಯಾಯಾಲಯಗಳ ಮೂಲಕ ಸಿಸಿಟಿವಿ ದೃಶ್ಯ ದೊರೆಯುವಂತಾಗಬೇಕು ಎಂದಿತ್ತು.

ಆದರೂ, ಈ ನಿರ್ದೇಶನಗಳ ಹೊರತಾಗಿಯೂ, ದೃಶ್ಯಾವಳಿಗಳನ್ನು ಒದಗಿಸಲು ಕೇಳಿದಾಗ ಪೊಲೀಸರು ಆಗಾಗ್ಗೆ ದೃಶ್ಯಾವಳಿಗಳು ಲಭ್ಯವಿಲ್ಲ ಅಥವಾ ಸಿಸಿಟಿವಿ ಕ್ಯಾಮೆರಾ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳುತ್ತಿದ್ದರು.

Kannada Bar & Bench
kannada.barandbench.com