ತಾಯಿ ಉದ್ಯೋಗಕ್ಕಾಗಿ ವಿದೇಶದಲ್ಲಿ ನೆಲೆಸಲಿದ್ದಾರೆಂದು ಮಗುವಿನ ಸುಪರ್ದು ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಮಗುವಿನ ಯೋಗಕ್ಷೇಮವು ಸುರಕ್ಷಿತವಾಗಿರುತ್ತದೆ ಎಂದಾದಲ್ಲಿ ಅಪೀಲುದಾರೆಯು (ತಾಯಿ) ಉತ್ತಮ ಭವಿಷ್ಯಕ್ಕಾಗಿ ಸ್ಥಳಾಂತರ ಹೊಂದುವುದನ್ನು ಮಗುವಿನ ಸುಪರ್ದನ್ನು ಕೋರುವುದಕ್ಕೆ ವಿರುದ್ಧವಾಗಿ ಪರಿಗಣಿಸಲಾಗದು ಎಂದ ನ್ಯಾಯಾಲಯ.
ತಾಯಿ ಉದ್ಯೋಗಕ್ಕಾಗಿ ವಿದೇಶದಲ್ಲಿ ನೆಲೆಸಲಿದ್ದಾರೆಂದು ಮಗುವಿನ ಸುಪರ್ದು ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ತಾಯಿಯು ಉತ್ತಮ ವೃತ್ತಿಜೀವನದ ನಿರೀಕ್ಷೆಗಳಿಗಾಗಿ ವಿದೇಶಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆಂದ ಮಾತ್ರಕ್ಕೆ ಆಕೆಗೆ ಮಗುವಿನ ಸುಪರ್ದನ್ನು ನಿರಾಕರಿಸಲಾಗದು ಎಂಬುದಾಗಿ ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ಮಗುವಿನ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವ ವೇಳೆ ನ್ಯಾಯಮೂರ್ತಿಗಳಾದ ಎ ಮುಹಮ್ಮದ್ ಮುಷ್ತಾಕ್ ಮತ್ತು ಸೋಫಿ ಥಾಮಸ್ ಅವರಿದ್ದ ವಿಭಾಗೀಯ ಪೀಠ ಪ್ರಕರಣದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿತು.

Also Read
ವಂಶಪಾರಂಪರ್ಯವಾಗಿ ಅರ್ಚಕರಾಗಲು ಉತ್ತರಾದಾಯಿತ್ವವು ತಂದೆಯ ಕಡೆಯಿಂದ ಇರಬೇಕೆ ವಿನಾ ತಾಯಿ ಕಡೆಯಿಂದಲ್ಲ: ಹೈಕೋರ್ಟ್‌

ಮಗುವಿನ ಯೋಗಕ್ಷೇಮವು ಸುರಕ್ಷಿತವಾಗಿರುತ್ತದೆ ಎಂದಾದಲ್ಲಿ ಅಪೀಲುದಾರೆಯು (ತಾಯಿ) ಉತ್ತಮ ಭವಿಷ್ಯಕ್ಕಾಗಿ ಸ್ಥಳಾಂತರ ಹೊಂದುವುದನ್ನು ಮಗುವಿನ ಸುಪರ್ದನ್ನು ಕೋರುವುದಕ್ಕೆ ವಿರುದ್ಧವಾಗಿ ಪರಿಗಣಿಸಲಾಗದು ಎಂದು ನ್ಯಾಯಾಲಯ ಹೇಳಿತು.

ಮಗುವಿನ ಪೋಷಕರು ವಿಚ್ಛೇದನ ಹೊಂದಿದ್ದರು. ಮಗುವಿಗೆ ಆರು ವರ್ಷ ವಯಸ್ಸಾಗುವವರೆಗೆ ಮಗುವಿನ ಪಾಲನೆಯನ್ನು ತಾಯಿಗೆ ವಹಿಸಲಾಗಿತ್ತು. ಬಹ್ರೇನ್‌ನಲ್ಲಿ ಉದ್ಯೋಗದಲ್ಲಿರುವ ಮಗುವಿನ ತಂದೆಗೆ ಸಂಪರ್ಕ ಹಕ್ಕುಗಳೊಂದಿಗೆ ಭೇಟಿ ಹಕ್ಕುಗಳನ್ನು ನೀಡಲಾಗಿತ್ತು.

ಮಗುವಿನ ತಾಯಿ ನಂತರ ಮಗುವನ್ನು ತನ್ನೊಂದಿಗೆ ನ್ಯೂಜಿಲೆಂಡ್‌ಗೆ ಕರೆದೊಯ್ಯಲು ಯತ್ನಿಸಿದ್ದರು. ಇದಕ್ಕೆ ತಂದೆಯಿಂದ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಕೌಟುಂಬಿಕ ನ್ಯಾಯಾಲಯ ಆಕೆಯ ಮನವಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರಕರಣ ಹೈಕೋರ್ಟ್‌ ಅಂಗಳಕ್ಕೆ ಬಂದಿತ್ತು.

ಮಗುವಿನ ಸುಪರ್ದಿಗೆ ಸಂಬಂಧಿಸಿದಂತೆ (ಪೋಷಕರ ನಡುವೆ) ವ್ಯಾಜ್ಯವಿದೆ ಎಂದಾಕ್ಷಣಕ್ಕೆ ಮಗುವಿನ ಸುಪರ್ದಿಯ ಸಲುವಾಗಿ ಒಂದೇ ಸ್ಥಳದಲ್ಲಿ ಅನಿರ್ದಿಷ್ಟಾವಧಿಯವರೆಗೆ ಇರಬೇಕು ಎಂದಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಮುಂದುವರೆದು, ಮಗುವನ್ನು ನ್ಯೂಜಿಲೆಂಡ್‌ಗೆ ಕರೆದೊಯ್ಯಲು ತಾಯಿಯು ಮಗುವಿನ ಏಕೈಕ ಕಾನೂನುಬದ್ಧ ಪೋಷಕರಾಗಿದ್ದಾರೆ ಎಂದು ತಿಳಿಸಿತು.

ತಾಯಿಯ ಕೋರಿಕೆಯನ್ನು ಮನ್ನಿಸಿದ ನ್ಯಾಯಾಲಯವು ಇದೇ ವೇಳೆ ತಂದೆಗೆ ಮಗುವಿನ ಅಲ್ಪ ಅವಧಿಯ ಸುಪರ್ದಿನ ಹಕ್ಕುಗಳನ್ನು ಹಾಗೂ ಭೇಟಿಯ ಹಕ್ಕುಗಳನ್ನು ನೀಡಿತು. ಅಲ್ಲದೆ, ತಂದೆಯ ಅನುಮತಿಯಿಲ್ಲದೆ ಯಾವುದೇ ಕಾರಣಕ್ಕೂ ಮಗುವಿನ ರಾಷ್ಟ್ರೀಯತೆಯನ್ನು ಬದಲಿಸಲು ಮುಂದಾಗಬಾರದು ಎಂದು ಇದೇ ವೆಳೆ ತಾಯಿಗೆ ನಿರ್ಬಂಧಿಸಿತು.

Related Stories

No stories found.
Kannada Bar & Bench
kannada.barandbench.com