ಕೌಟುಂಬಿಕ ವ್ಯಾಜ್ಯಗಳಲ್ಲಿ ಅಪ್ರಾಪ್ತ ಮಕ್ಕಳ ಕಸ್ಟಡಿ ಪ್ರಕರಣ: ಸ್ವಯಂಪ್ರೇರಿತ ಪಿಐಎಲ್‌ ದಾಖಲಿಸಕೊಂಡ ಹೈಕೋರ್ಟ್‌

ಅಪ್ರಾಪ್ತ ವಯಸಸ್ಸಿನ ಮಕ್ಕಳ ಕಸ್ಟಡಿ ವಿಚಾರದಲ್ಲಿ ಸಾಕಷ್ಟು ಕಾನೂನು, ನಿಯಮಗಳಿದ್ದರೂ, ಮನೋವಿಜ್ಞಾನಿಗಳ ಅಭಿಪ್ರಾಯ ಮತ್ತು ನೆರವಿನ ಕೊರತೆಯಿದೆ. ಇಂತಹ ಪ್ರಕರಣಗಳಲ್ಲಿ ಮಾರ್ಗದರ್ಶನ ಮಾಡಲು ಮಾನಸಿಕ ತಜ್ಞರ ಅಭಿಪ್ರಾಯ ಮುಖ್ಯ ಎಂದ ನ್ಯಾಯಾಲಯ.
Chief Justice P B Varale and Justice Krishna S. Dixit
Chief Justice P B Varale and Justice Krishna S. Dixit
Published on

ಕೌಟುಂಬಿಕ ವ್ಯಾಜ್ಯಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಕಸ್ಟಡಿಗೆ ಪಡೆಯುವ ವಿಚಾರ ಹಾಗೂ ಇನ್ನಿತರೆ ವ್ಯಾಜ್ಯಗಳಲ್ಲಿ ಮಕ್ಕಳು ಎದುರಿಸಬಹುದಾದ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ನಿರ್ದೇಶನಗಳನ್ನು ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್‌ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ದಾಖಲಿಸಿಕೊಂಡಿದೆ.

ಗಂಡು ಮಗುವಿನ ಕಸ್ಟಡಿ ವಿಷಯಕ್ಕೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣವೊಂದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು  ಸ್ವಯಂ ಪ್ರೇರಿತ ಪಿಐಎಲ್‌ ದಾಖಲಿಸಿಕೊಂಡಿದೆ. ಅಂತೆಯೇ, ಪ್ರಕರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ್ದು ಆಕ್ಷೇಪಣೆ ಸಲ್ಲಿಸುವಂತೆ ಆದೇಶಿಸಿದೆ.

ಕೌಟುಂಬಿಕ ವ್ಯಾಜ್ಯಗಳಲ್ಲಿ ಮಗುವಿನ ಪಾಲನೆಗೆ ಸಂಬಂಧಿಸಿದಂತೆ ಎದುರಾಗುವ ಸನ್ನಿವೇಶಗಳಲ್ಲಿ ಮಗು ಹೆಚ್ಚಿನ ತೊಂದರೆಗೆ ಸಿಲುಕುವ ಸಂದರ್ಭಗಳಿವೆ. ವಿಚ್ಛೇದನ ಪ್ರಕರಣಗಳಲ್ಲಿ ಪೋಷಕರು ಮಕ್ಕಳ ಪಾಲನೆ ಮತ್ತು ತಮ್ಮ ವಶಕ್ಕೆ ಪಡೆದುಕೊಳ್ಳುವ ವಿಷಯದಲ್ಲಿ ಸಾಕಷ್ಟು ಕಾನೂನು ಹೋರಾಟ ನಡೆಸುತ್ತಾರೆ. ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯ ಯಾವುದೇ ಆದೇಶ ಹೊರಡಿಸುವ ಮುನ್ನ ಮಗುವಿನ ಮನಸ್ಸನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವ ಅಗತ್ಯವಿರುತ್ತದೆ ಎಂದು ಪೀಠ ಹೇಳಿದೆ.

ತಂದೆ, ತಾಯಿಯ ಅಹಂನಿಂದ ಮುಂದುವರೆಯುವ ಕಾನೂನು ಸಮರ, ಇದರ ನಡುವೆ ಅಜ್ಜ, ಅಜ್ಜಿಯರ ಭಾವನಾತ್ಮಕ ಅಂಶಗಳು ಮಗುವಿನ ಮನಸ್ಸಿನ ಮೇಲೆ ಗಾಢ ಪರಿಣಾಮ ಉಂಟು ಮಾಡುತ್ತವೆ. ಇವುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಮತ್ತು ಇಬ್ಬರೂ ಪಕ್ಷಕಾರರ ಜೊತೆ ಮಗು ಮಧುರ ಸಂಬಂಧವನ್ನು ಹೊಂದಲು ಆಧುನಿಕ ತಂತ್ರಜ್ಞಾನ ಮತ್ತು ಮಾಧ್ಯಮಗಳನ್ನು ಬಳಸಿಕೊಂಡು ಮುಂದುವರಿಯುವ ಅಗತ್ಯವಿದೆ. ಈ ಕುರಿತು ವೃತ್ತಿಪರರ ಸಹಾಯದೊಂದಿಗೆ ಮಾರ್ಗಸೂಚಿಗಳನ್ನು ರಚಿಸುವುದು ಅವಶ್ಯವಿದೆ ಎಂಬ ಅರ್ಜಿಯಲ್ಲಿ ವಿವರಿಸಲಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಾನೂನು, ನಿಯಮಗಳಿದ್ದರೂ, ಮನೋವಿಜ್ಞಾನಿಗಳ ಅಭಿಪ್ರಾಯ ಮತ್ತು ನೆರವಿನ ಕೊರತೆಯಿದೆ. ಹೀಗಾಗಿ, ಇಂತಹ ಪ್ರಕರಣಗಳಲ್ಲಿ ಮಾರ್ಗದರ್ಶನ ಮಾಡಲು ಮಾನಸಿಕ ತಜ್ಞರ ಅಭಿಪ್ರಾಯ ಮುಖ್ಯ ಎಂದು ತಿಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅಮಿಕಸ್ ಕ್ಯೂರಿಯನ್ನಾಗಿ ನೇಮಕ ಮಾಡಲಾಗಿದೆ.

Kannada Bar & Bench
kannada.barandbench.com