ಅನೈತಿಕ ಸಾಗಣೆ ತಡೆ ಕಾಯಿದೆಯಡಿ ವೇಶ್ಯಾಗೃಹದ ಗ್ರಾಹಕರನ್ನು ಬಂಧಿಸಬಹುದು: ಕೇರಳ ಹೈಕೋರ್ಟ್

ನ್ಯಾ. ಬೆಚು ಕುರಿಯನ್ ಥಾಮಸ್ ಅವರು “ಲೈಂಗಿಕ ಶೋಷಣೆ ಒಬ್ಬರಿಂದ ನಡೆಯದೇ ಇರುವುದರಿಂದಾಗಿ ಕಾಯಿದೆಯ ಸೆಕ್ಷನ್ 7 (1) ರ ಅಡಿಯಲ್ಲಿ ʼಗ್ರಾಹಕʼ ವೇಶ್ಯಾವಾಟಿಕೆ ನಡೆಸುವ ವ್ಯಕ್ತಿಯ ವ್ಯಾಪ್ತಿಗೆ ಬರುತ್ತಾನೆ ಎಂದು ಹೇಳಿದರು.
ಅನೈತಿಕ ಸಾಗಣೆ ತಡೆ ಕಾಯಿದೆಯಡಿ ವೇಶ್ಯಾಗೃಹದ ಗ್ರಾಹಕರನ್ನು ಬಂಧಿಸಬಹುದು: ಕೇರಳ ಹೈಕೋರ್ಟ್
A1
Published on

ಅನೈತಿಕ ಸಾಗಣೆ ಅಥವಾ ಲೈಂಗಿಕ ಶೋಷಣೆಯನ್ನು ಗ್ರಾಹಕರಿಲ್ಲದೆ ನಡೆಸಲಾಗುವುದಿಲ್ಲವಾದ್ದರಿಂದ ಅನೈತಿಕ ಸಾಗಣೆ (ತಡೆ) ಕಾಯಿದೆ- 1956ರ ಸೆಕ್ಷನ್ 7ರ ಅಡಿಯಲ್ಲಿ ವೇಶ್ಯಾಗೃಹದ 'ಗ್ರಾಹಕರ' ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬಹುದು ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ. [ಮ್ಯಾಥ್ಯೂ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ಲೈಂಗಿಕ ಶೋಷಣೆ ಒಬ್ಬರಿಂದಲೇ ನಡೆಯುವುದಿಲ್ಲ ಎಂಬ ಕಾರಣಕ್ಕಾಗಿ ಸೆಕ್ಷನ್ 7 (1) ರ ಅಡಿಯಲ್ಲಿ 'ಗ್ರಾಹಕ' ವೇಶ್ಯಾವಾಟಿಕೆ ನಡೆಸುವ ವ್ಯಕ್ತಿ ಎನಿಸಿಕೊಳ್ಳುತ್ತಾನೆ ಎಂದು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ತಿಳಿಸಿದರು.

"ʼಅಂತಹ ವೇಶ್ಯಾವಾಟಿಕೆ ನಡೆಸುತ್ತಿರುವ ವ್ಯಕ್ತಿʼ ಎಂಬ ಪದಗಳಿಗೆ ತಿಳಿಸಬೇಕಾದ ಅರ್ಥವು ಈ ಪ್ರಕರಣಕ್ಕೆ ಮಹತ್ವದ್ದಾಗಿದೆ. ವೇಶ್ಯಾವಾಟಿಕೆ ಪದದ ವ್ಯಾಖ್ಯಾನದೊಂದಿಗೆ ಆ ಪದಗಳನ್ನು ಓದಬೇಕಾಗುತ್ತದೆ. ವೇಶ್ಯಾವಾಟಿಕೆ ಎಂಬ ಪದವನ್ನು ವಾಣಿಜ್ಯ ಉದ್ದೇಶಗಳಿಗಾಗಿ ವ್ಯಕ್ತಿಗಳ ಲೈಂಗಿಕ ಶೋಷಣೆ ಅಥವಾ ಆಕ್ರಮಣ ಎಂದು ವ್ಯಾಖ್ಯಾನಿಸಲಾಗಿದೆ. ಒಬ್ಬರಿಂದಲೇ ಲೈಂಗಿಕ ಶೋಷಣೆ ನಡೆಯುವುದಿಲ್ಲ. ಶೋಷಣೆಯ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿಯೂ ‘ಅಂತಹ ವೇಶ್ಯಾವಾಟಿಕೆ ನಡೆಸುತ್ತಿರುವ ವ್ಯಕ್ತಿʼ  ಎಂಬ ಪದದೊಳಗೆ ಬರುವ ವ್ಯಕ್ತಿಯೇ ಆಗಿದ್ದಾನೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ವೇಶ್ಯೆಯನ್ನು ಶೋಷಿಸುವ ಅಥವಾ ಲೈಂಗಿಕವಾಗಿ ಆಕ್ರಮಣ ಮಾಡುವ ವ್ಯಕ್ತಿ ವೇಶ್ಯೆಯೊಂದಿಗೆ ವೇಶ್ಯಾವಾಟಿಕೆ ನಡೆಸುವ ವ್ಯಕ್ತಿ ಆಗಿದ್ದಾನೆ. ಹೀಗಾಗಿ ಕಾಯಿದೆಯ ಸೆಕ್ಷನ್ 7(1)ರಲ್ಲಿ ‘ಗ್ರಾಹಕʼ ಇಲ್ಲದೇ ಅನೈತಿಕ ದಂಧೆ ನಡೆಯುವುದಿಲ್ಲ. ಶಾಸನ ರೂಪಿಸಿರುವವರು ಕೂಡ ವೇಶ್ಯಾವಾಟಿಕೆ ನಡೆಸುತ್ತಿರುವ ವ್ಯಕ್ತಿಯನ್ನು ದಂಡನೀಯ ಕಾನೂನಿನ ವ್ಯಾಪ್ತಿಗೆ ತರಲು ಉದ್ದೇಶಿಸಿದ್ದರು ಎಂದು ನಾನು ಪರಿಗಣಿಸುತ್ತೇನೆ” ಎಂಬುದಾಗಿ ನ್ಯಾಯಾಲಯ ಹೇಳಿದೆ.

ಸೆಕ್ಷನ್ 3 (ವೇಶ್ಯಾವಾಟಿಕೆ ಅಥವಾ ಆವರಣವನ್ನು ವೇಶ್ಯಾಗೃಹವಾಗಿ ಬಳಸಲು ಅನುಮತಿ), 4 (ವೇಶ್ಯಾವಾಟಿಕೆ ಆದಾಯದ ಮೇಲೆ ಜೀವನ ಮಾಡುವುದಕ್ಕೆ ಶಿಕ್ಷೆ) ಮತ್ತು 7 (ಸಾರ್ವಜನಿಕ ಸ್ಥಳ ಅಥವಾ ಅದರ  ಸಮೀಪದಲ್ಲಿ ವೇಶ್ಯಾವಾಟಿಕೆ) ಕಾಯಿದೆಯಡಿ ಆರೋಪ ಹೊತ್ತಿದ್ದ ವ್ಯಕ್ತಿಯೊಬ್ಬ ದಾಖಲಿಸಿದ್ದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಆಯುರ್ವೇದ ಆಸ್ಪತ್ರೆ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು. ಅಲ್ಲಿ ಡಿಸೆಂಬರ್ 15, 2004ರಂದು ಪ್ರಕರಣದಲ್ಲಿ ಅರ್ಜಿ ಸಲ್ಲಿಸಿರುವ ವ್ಯಕ್ತಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು ಎಂಬುದು ಪ್ರಾಸಿಕ್ಯೂಷನ್‌ ವಾದವಾಗಿತ್ತು. ಆದರೆ ಅರ್ಜಿದಾರ ತಾನು “ಬೆನ್ನುನೋವಿನ ಚಿಕಿತ್ಸೆಗಾಗಿ ಆಯುರ್ವೇದ ಆಸ್ಪತ್ರೆಯನ್ನು ತಾನು ಸಂಪರ್ಕಿಸಿದ್ದೆ. ವೈದ್ಯರು ಮೂವತ್ತು ದಿನಗಳ ಅವಧಿಗೆ ತೈಲ ಮಸಾಜ್ ಮಾಡಿಸಿಕೊಳ್ಳಲು ಸೂಚಿಸಿದ್ದರು. ತಾನು ಚಿಕಿತ್ಸೆ ಪಡೆಯುತ್ತಿರುವಾಗ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಬಂದು ಅವರನ್ನು ಮತ್ತು ಅಲ್ಲಿ ಕೆಲಸ ಮಾಡುತ್ತಿದ್ದ ನರ್ಸ್‌ಗಳಾದ ಇತರ ಇಬ್ಬರು ಮಹಿಳೆಯರನ್ನು ಬಂಧಿಸಿದರು ಎಂದು ವಾದಿಸಿದ್ದರು.

ವಾದದ ಸಲುವಾಗಿ ತನ್ನ ವಿರುದ್ಧದ ಆರೋಪ ನಿಜವೆಂದು ಭಾವಿಸಿದರೂ ತಾನು ಬರೀ ಗ್ರಾಹಕನಾಗಿರುವುದರಿಂದ ತನ್ನ ವಿರುದ್ಧ ತನಿಖೆ ನಡೆಸುವಂತಿಲ್ಲ. ಏಕೆಂದರೆ ಕಾನೂನು ಗ್ರಾಹಕರನ್ನು ವಿಚಾರಣೆಗೆ ಒಳಪಡಿಸುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.  

ಆದರೆ ಕಾಯಿದೆಯ ಸೆಕ್ಷನ್ 7 (1) ರಲ್ಲಿ ಕಂಡುಬರುವ 'ಅಂತಹ ವೇಶ್ಯಾವಾಟಿಕೆ ನಡೆಸುವ ವ್ಯಕ್ತಿ' ಎಂಬ ಪದದ ಅಡಿಯಲ್ಲಿ ಗ್ರಾಹಕರು ಬರುತ್ತಾರೆ ಎಂದು ತಿಳಿಸಿದ ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿತು.

“ಈ ಸಂದರ್ಭದಲ್ಲಿ ಕಾಯಿದೆಯ ಉದ್ದೇಶವನ್ನು ನಿರ್ಲಕ್ಷಿಸುವಂತಿಲ್ಲ. ಈ ಕಾಯಿದೆ  ಅನೈತಿಕ (ಮಾನವ ಕಳ್ಳಸಾಗಣೆ) ಸಾಗಣೆ ತಡೆಯುವ ಉದ್ದೇಶ ಹೊಂದಿದೆ. ಕಾನೂನಿನ ಶಿಕ್ಷೆಯ ವ್ಯಾಪ್ತಿಗೆ ಗ್ರಾಹಕರು ಒಳಪಡದಿದ್ದರೆ ಕಾನೂನಿನ ಗುರಿ ಎಂದಿಗೂ ಈಡೇರದು. ಹೀಗಾಗಿ ನನ್ನ ಅಭಿಪ್ರಾಯದಲ್ಲಿ ಕಾಯಿದೆಯ ಸೆಕ್ಷನ್‌ 7 (1) ರಲ್ಲಿ ಕಂಡುಬರುವ ʼಅಂತಹ ವೇಶ್ಯಾವಾಟಿಕೆ ನಡೆಸುತ್ತಿರುವ ವ್ಯಕ್ತಿʼ ಎಂಬ ಪದಗಳು ʼಗ್ರಾಹಕʼನನ್ನೂ ಒಳಗೊಂಡಿರುತ್ತದೆ ಎಂದು ನ್ಯಾಯಾಲಯ ವಿವರಿಸಿತು.

Kannada Bar & Bench
kannada.barandbench.com