ಸರ್ಕಾರಿ ಹುದ್ದೆಗಳಿಗಾಗಿ ನೇಮಕಾತಿ ಮಾಡುವಾಗ ವಯೋಮಿತಿ ನಿರ್ಧರಿಸುವುದು ಸರ್ಕಾರಕ್ಕೆ ಸಂಬಂಧಿಸಿದ ವಿಚಾರವಾಗಿದ್ದು ಅಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಬಾರದು ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ. ನ್ಯಾಯಾಂಗ ಪರಾಮರ್ಶೆಯ ಹೆಸರಿನಲ್ಲಿ ನ್ಯಾಯಾಲಯಗಳು ಅಂತಹ ಕೆಲಸ ಮಾಡಬಾರದು ಎಂದು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಆ ಮೂಲಕ ರಾಜ್ಯ ಸರ್ಕಾರದ ವಯೋಮಿತಿ ಹೆಚ್ಚಳ ನಿಯಮ ಜಾರಿ ಪ್ರಶ್ನಿಸಿ ಡಾ. ವಿಕಾಸ್‌ಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
"ಹಿರಂದರ್ ಕುಮಾರ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿರುವಂತೆ ವೈಯಕ್ತಿಕ ಸಂಕಷ್ಟಗಳ ಪ್ರಕರಣ ಆಧರಿಸಿ ಸಾಮಾನ್ಯ ಅನ್ವಯದ ತತ್ವ ಅನ್ವಯಿಸುವಾಗ ಅನಿವಾರ್ಯವಾಗಿ ಉದ್ಭವಿಸುವ ನಿಯಮದ ಸಿಂಧುತ್ವ ರೂಪಿಸಲು ಆಗದು” ಎಂದು ನ್ಯಾಯಾಲಯ ಹೇಳಿದೆ.
ವೈದ್ಯಾಧಿಕಾರಿಗಳ ಹುದ್ದೆಗೆ ನೇಮಕಾತಿ ವಯೋಮಿತಿಯನ್ನು ಕನಿಷ್ಠ 21 ವರ್ಷದಿಂದ 26 ವರ್ಷಕ್ಕೆ ಹೆಚ್ಚಿಸಿ ಇತ್ತೀಚೆಗೆ ನಿಯಮ ಜಾರಿಗೊಳಿಸಲಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಸೇವಾ ನಿಯಮಗಳಿಗೆ ತಿದ್ದುಪಡಿ ತಂದು ಹೊಸ ನಿಯಮ ರೂಪಿಸಲಾಗಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಡಾ. ವಿಕಾಸ್‌ಗೌಡ ಮತ್ತಿತರರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಕರ್ನಾಟಕ ಆಡಳಿತ ನ್ಯಾಯಮಂಡಳಿ ಈ ಹಿಂದೆ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿತ್ತು.
21ರಿಂದ 26 ವರ್ಷಕ್ಕೆ ವಯೋಮಿತಿ ಹೆಚ್ಚಿಸುವುದರ ಹಿಂದೆ ಯಾವುದೇ ತಾರ್ಕಿಕತೆ ಇಲ್ಲ. ಜೊತೆಗೆ ಇದು ಕೃತಕ ನಿರ್ಬಂಧವಾಗಿದ್ದು, ತಾರತಮ್ಯದಿಂದ ಕೂಡಿದೆ. ಸಂವಿಧಾನದ 14 ಮತ್ತು 16 ನೇ ವಿಧಿಗಳನ್ನು ಉಲ್ಲಂಘಿಸುವುದರಿಂದ ನಿಯಮಗಳನ್ನು ತೆಗೆದುಹಾಕಬೇಕು. ದಿಢೀರನೆ ವಯೋಮಿತಿ ಹೆಚ್ಚಳ ಹೆಚ್ಚಿಸಿದ್ದೇಕೆ ಎಂಬ ಬಗ್ಗೆ ಯಾವುದೇ ಅಧ್ಯಯನ ನಡೆದಿಲ್ಲ ಎಂಬುದು ವಿಕಾಸ್‌ಗೌಡ ಪರ ವಕೀಲರ ವಾದವಾಗಿತ್ತು.
ರಾಜ್ಯ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ಅರುಣಾ ಶ್ಯಾಮ್, ಸಾಮಾನ್ಯವಾಗಿ ಭಾರತೀಯ ಶಿಕ್ಷಣ ವ್ಯವಸ್ಥೆಯಡಿ, ಎಂಬಿಬಿಎಸ್ / ಬಿಡಿಎಸ್ ಪದವಿ ಪೂರ್ಣಗೊಳಿಸುವ ಹೊತ್ತಿಗೆ, ವ್ಯಕ್ತಿಯ ವಯಸ್ಸು 25 ವರ್ಷ ದಾಟಿರುತ್ತದೆ. ಇದನ್ನು ಆಧರಿಸಿ ವಯೋಮಿತಿ ಹೆಚ್ಚಿಸಲಾಗಿದೆ. ಇದರಿಂದ ಸಂವಿಧಾನದ ವಿಧಿಗಳ ಉಲ್ಲಂಘನೆಯಾಗುವುದಿಲ್ಲ ಎಂದು ಸಮರ್ಥಿಸಿಕೊಂಡರು.
ವಯೋಮಿತಿ ನಿರ್ಧಾರ, ಸರ್ಕಾರಕ್ಕೆ ಸಂಬಂಧಿಸಿದ ವಿಚಾರ ಎಂಬುದು ನ್ಯಾಯಾಲಯಗಳ ಹಿಂದಿನ ಆದೇಶಗಳಿಂದ ತಿಳಿದುಬಂದಿದ್ದು ಈ ವಿಚಾರದಲ್ಲಿ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳು ದೂರ ಇರಬೇಕು ಎಂದು ಹೇಳಿರುವ ಪೀಠ ವಯೋಮಿತಿ ಹೆಚ್ಚಳದಿಂದ ಸಂವಿಧಾನದ 14 ಮತ್ತು 16 ನೇ ವಿಧಿಗಳ ವಿಧಿಗಳ ಉಲ್ಲಂಘನೆಯಾಗುವುದಿಲ್ಲ ಎಂಬ ಎಎಜಿ ವಾದವನ್ನು ಪುರಸ್ಕರಿಸಿತು.
ಇದೇ ವೇಳೆ ನ್ಯಾಯಾಲಯ, "ಈಗಾಗಲೇ ಸೇವೆಯಲ್ಲಿ ನಿರತರಾದವರಿಗೆ ಮತ್ತು ಶ್ಲಾಘನೀಯ ಕೆಲಸ ಮಾಡುತ್ತಿರುವ ವೈದ್ಯರಿಗೆ ಅವಕಾಶ ಒದಗಿಸಬೇಕು ಎಂದು ಸರ್ಕಾರ ಭಾವಿಸಿರಬಹುದು. ಆದರೆ ಅದು ತಾರತಮ್ಯ ಅಥವಾ ಅತಾರ್ಕಿಕತೆಯಿಂದ ಕೂಡಿರಬಾರದು" ಎಂದು ಎಚ್ಚರಿಸಿತು. ಈ ಅವಲೋಕನಗಳೊಂದಿಗೆ ಸರ್ಕಾರ ಜಾರಿಗೊಳಿಸಿದ ನಿಯಮದ ಸಿಂಧುತ್ವ ಎತ್ತಿ ಹಿಡಿದು ಅರ್ಜಿಯನ್ನು ವಜಾಗೊಳಿಸಿತು.