ಮಾವಿನ ತೋಪುಗಳ 1 ಲಕ್ಷ 30 ಸಾವಿರ ಮರ ಕಡಿತ: ಅಧಿಕಾರಿಗಳ ಖುದ್ದು ಹಾಜರಾತಿಗೆ ಹೈಕೋರ್ಟ್‌ ನಿರ್ದೇಶನ

"ಅರಣ್ಯ ಭೂಮಿ ಒತ್ತುವರಿಯಾಗಿದ್ದರೆ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕಿತ್ತು. ಅದು ಬಿಟ್ಟು ಪ್ರಕರಣವು ವಿಚಾರಣೆಗೆ ಬಾಕಿಯಿರುವ ಸಂದರ್ಭದಲ್ಲಿ ಅನುಮತಿ ಪಡೆಯದೇ ಸಾವಿರಾರು ಮರಗಳನ್ನು ಏಕೆ ಕತ್ತರಿಸಲಾಗಿದೆ?" ಎಂದು ಖಾರವಾಗಿ ಪ್ರಶ್ನಿಸಿದ ಪೀಠ.
High Court of Karnataka
High Court of Karnataka

ನ್ಯಾಯಾಲಯದ ತಡೆಯಾಜ್ಞೆಯ ಹೊರತಾಗಿಯೂ ಅರಣ್ಯ ಒತ್ತುವರಿ ಆರೋಪದಡಿ ಕೋಲಾರದ ಶ್ರೀನಿವಾಸಪುರ ತಾಲ್ಲೂಕಿನ ಉಪ್ಪಾರಪಲ್ಲಿ ಸೇರಿದಂತೆ ಹಲವು ಗ್ರಾಮಗಳ ಮಾವಿನ ತೋಪಿನಲ್ಲಿ ಸುಮಾರು 1 ಲಕ್ಷ 30 ಸಾವಿರ ಮರ ಕತ್ತರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌, ಮರಗಳ ಕಡಿಯಲು ಕಾರಣವಾದ ಅಧಿಕಾರಿಗಳ ಖುದ್ದು ಹಾಜರಾತಿಗೆ ಆದೇಶಿಸಿದೆ.

ಉಪ್ಪಾರಪಲ್ಲಿಯ ಗುಲ್ಜಾರ್‌ ಪಾಷ ಮತ್ತಿತರರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ ಎಸ್‌ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರನ್ನೂ ಒಳಗೊಂಡು ರೈತರ ಮಾವಿನ ತೋಪುಗಳಲ್ಲಿರುವ ಮರಗಳನ್ನು ಕತ್ತರಿಸದಂತೆ ಹೈಕೋರ್ಟ್‌ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಮಾಡಿತ್ತು. ಆದರೆ, ಅರಣ್ಯ ಪ್ರದೇಶ ಒತ್ತುವರಿ ಆರೋಪದಡಿ ಅರಣ್ಯಾಧಿಕಾರಿಗಳು ಮರಗಳನ್ನು ಕಡಿದಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ರಾಜ್ಯ ಸರ್ಕಾರದ ಪರ ವಕೀಲರು, ಅರಣ್ಯ ಒತ್ತುವರಿ ಹಿನ್ನೆಲೆಯಲ್ಲಿ 1,300 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

ಇದರಿಂದ ಅಸಮಾಧಾನಗೊಂಡ ಪೀಠವು ಅರಣ್ಯ ಭೂಮಿ ಒತ್ತುವರಿಯಾಗಿದ್ದರೆ, ಅದನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಬೇಕಿತ್ತು. ಅದು ಬಿಟ್ಟು ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿರುವ ಸಂದರ್ಭದಲ್ಲಿ ಅನುಮತಿ ಪಡೆಯದೇ ಸಾವಿರಾರು ಮರಗಳನ್ನು ಏಕೆ ಕತ್ತರಿಸಲಾಗಿದೆ? ಎಂದು ಖಾರವಾಗಿ ಪ್ರಶ್ನಿಸಿತು.

ಅಲ್ಲದೇ, ಮರಗಳನ್ನು ಕತ್ತರಿಸಲು ಕಾರಣವಾಗಿರುವ ಅಧಿಕಾರಿಗಳು ಮುಂದಿನ ವಿಚಾರಣೆಗೆ ಖುದ್ದು ಹಾಜರಿರಬೇಕು ಎಂದು ತಾಕೀತು ಮಾಡಿ ವಿಚಾರಣೆಯನ್ನು ಮುಂದೂಡಿತು.

ಅರಣ್ಯಾಧಿಕಾರಿಗಳು ಹೈಕೋರ್ಟ್‌ ಆದೇಶ ಉಲ್ಲಂಘಿಸಿ ಶ್ರೀನಿವಾಸಪುರ ತಾಲ್ಲೂಕಿನ ಪಾಳ್ಯ, ಯಲವಳ್ಳಿ, ಕೇತಗಾನಹಳ್ಳಿ, ಚಿಂತೆ ಕುಂಟೆ, ನಾರಮಾಕಲ ಹಳ್ಳಿ, ಉಪ್ಪಾರಪಲ್ಲಿ, ಕೋಟಬಲ್ಲಹಳ್ಳಿ, ಇಲದೋಣಿ, ಲಕ್ಷ್ಮೀಪುರ, ಪಾತಪಲ್ಲಿ, ದ್ವಾರಸಂದ್ರ, ಆಲಂಬಗಿರಿ, ಸುಣ್ಣಕಲ್ಲು, ಜಿಂಕಲವಾರಿಹಳ್ಳಿ ಸೇರಿದಂತೆ ಇನ್ನೂ ಹಲವು ಕಡೆ  85 ಸಾವಿರ ಮಾವಿನ ಮರಗಳ ಸಹಿತ ಒಟ್ಟು 1 ಲಕ್ಷ 30 ಸಾವಿರಕ್ಕೂ ಅಧಿಕ ಮರಗಳನ್ನು ಕತ್ತರಿಸಿದ್ದಾರೆ. ಅರಣ್ಯ ಭೂಮಿ ಒತ್ತುವರಿಯಾಗಿಲ್ಲ. ಆ ಭೂಮಿಗೆ ಸಂಬಂಧಿಸಿದಂತೆ ಅರ್ಜಿದಾರರು ಸೇರಿದಂತೆ ಇತರೆ ರೈತರು ಸಾಗುವಳಿ ಚೀಟಿ ಹೊಂದಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Kannada Bar & Bench
kannada.barandbench.com