ಸೈರಸ್ ಮಿಸ್ತ್ರಿ ಸಾವು: ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ ಪಿಐಎಲ್‌ನಲ್ಲಿ ವಿಜ್ಞಾನಿ ನ್ಯೂಟನ್‌ ಚಲನೆಯ ನಿಯಮದ ಪ್ರಸ್ತಾಪ

ನಿರ್ಲಕ್ಷ್ಯದಿಂದಾದ ಸಾವಿಗೆ ಸಂಬಂಧಿಸಿದಂತೆ ಮಾತ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ಆರೋಪಗಳನ್ನು ದಾಖಲಿಸಬೇಕಿತ್ತು ಎಂಬುದು ಅರ್ಜಿದಾರರ ವಾದ.
Cyrus Mistry
Cyrus Mistry

ಕೆಲ ತಿಂಗಳುಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದ ಟಾಟಾ ಸಮೂಹದ ಮಾಜಿ ಅಧ್ಯಕ್ಷ  ಸೈರಸ್‌ ಮಿಸ್ತ್ರಿ ಅವರ ಸಾವಿನ ಕುರಿತಂತೆ ಕೊಲೆಗೆ ಸಮವಲ್ಲದ ನರಹತ್ಯೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ 304ರ ಅಡಿ ಕ್ರಿಮಿನಲ್‌ ಮೊಕದ್ದಮೆ ಸೇರಿಸದೇ ಇರುವುದನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಲಾಗಿದೆ [ಸಂದೇಶ್ ಶಿವಾಜಿ ಜೇಧೆ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಕಳೆದ ವರ್ಷ ಸೆಪ್ಟೆಂಬರ್‌ 5ರಂದು ಈ ದುರ್ಘಟನೆ ನಡೆದಿತ್ತು. ಮಿಸ್ತ್ರಿ ಪಯಣಿಸುತ್ತಿದ್ದ ಮರ್ಸಿಡಿಸ್‌ ಕಾರು ಅಹಮದಾಬಾದ್‌ನಿಂದ ಮುಂಬೈಗೆ ಸಂಚರಿಸುತ್ತಿದ್ದ ವೇಳೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ಕಾರಿನಲ್ಲಿ ಮಿಸ್ತ್ರಿ, ಸ್ತ್ರೀರೋಗ ತಜ್ಞೆ ಅನಾಹಿತಾ ಪಾಂಡೋಲೆ ಮತ್ತು ಅವರ ಪತಿ ಡೇರಿಯಸ್‌ ಪಾಂಡೋಲೆ ಹಾಗೂ ಡೇರಿಯಸ್‌ ಅವರ ಸಹೋದರ ಜಹಾಂಗೀರ್ ಪಾಂಡೋಲೆ ಇದ್ದರು. ಸೈರಸ್‌ ಮಿಸ್ತ್ರಿ ಮತ್ತು ಜಹಾಂಗೀರ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಅನಾಹಿತಾ ಮತ್ತು ಡೇರಿಯಸ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಾಹನ ಚಲಾಯಿಸುತ್ತಿದ್ದ ಅನಾಹಿತಾ ಅವರು ಪ್ರಕರಣದ ಏಕೈಕ ಆರೋಪಿಯಾಗಿದ್ದಾರೆ.

ಸಂಕ್ಷಿಪ್ತ ವಿಚಾರಣೆಯ ನಂತರ, ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್‌ ವಿ ಗಂಗಾಪುರವಾಲಾ ಹಾಗೂ ನ್ಯಾಯಮೂರ್ತಿ ಸಂದೀಪ್ ಮಾರ್ನೆ ಅವರಿದ್ದ ಪೀಠ ಅರ್ಜಿದಾರರರು ಹೆಚ್ಚಿನ ಸಾಕ್ಷ್ಯ ಸಂಗ್ರಹಿಸಲು ಜನವರಿ 17ರವರೆಗೆ ಸಮಯಾವಕಾಶ ನೀಡಲು ಒಪ್ಪಿಕೊಂಡಿತು.

ನಿರ್ಲಕ್ಷ್ಯದಿಂದಾದ ಸಾವಿಗೆ ಸಂಬಂಧಿಸಿದಂತೆ (ಸೆಕ್ಷನ್ 304 ಎ) ಮಾತ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚು ಆರೋಪಗಳನ್ನು ದಾಖಲಿಸಬೇಕಿತ್ತು ಎಂದು ಅರ್ಜಿದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅರ್ಜಿದಾರರ ವಾದವೇನು?

  • ಮಿಸ್ತ್ರಿ ಅವರನ್ನು ಕರೆದೊಯ್ಯುತ್ತಿದ್ದ ವಾಹನದ ಚಾಲಕ ಸೇರಿದಂತೆ ಇತರರು ಮದ್ಯದ ಅಮಲಿನಲ್ಲಿದ್ದರು ಎಂಬುದಕ್ಕೆ ತಮ್ಮ ಬಳಿ ಸಾಕ್ಷ್ಯವಿದೆ.

  • ಅಪಘಾತ ನಡೆದ ಹಿಂದಿನ ರಾತ್ರಿ ಕೆಫೆಯೊಂದರಲ್ಲಿ ಅನಾಹಿತಾ ಮತ್ತು ಮಿಸ್ತ್ರಿ ಮದ್ಯ ಸೇವಿಸಿದ ಸಿಸಿಟಿವಿ ದೃಶ್ಯಗಳು ಲಭ್ಯ ಇವೆ.

  • (ಭೌತವಿಜ್ಞಾನಿ ನ್ಯೂಟನ್‌ನ ಚಲನೆಯ ನಿಯಮವನ್ನು ಪ್ರಸ್ತಾಪಿಸುತ್ತಾ) ಅನಾಹಿತಾ ಕೇವಲ ಶೇ 10ರಷ್ಟು ಮಾತ್ರ ಬ್ರೇಕ್‌ ಪವರ್‌ ಬಳಸಿದ್ದರು. ಆದರೆ ಅತಿವೇಗವಾಗಿ ವಾಹನ ಚಲಿಸಿ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಅದನ್ನು ಇನ್ನಷ್ಟು ಸಮರ್ಥವಾಗಿ ಬಳಸಬಹುದಿತ್ತು. 3.5 ರಿಂದ 0 ಸೆಕೆಂಡ್‌ಗಳಲ್ಲಿ ಕಾರು 0.088gಯಷ್ಟು ನಿಧಾನವಾಗಿದೆ. ಆಕೆ ಬಳಸಿರಬಹುದಾದ ಬ್ರೇಕ್‌ನ ಶಕ್ತಿ ಶೇ 10ರಷ್ಟು ಇದೆ.

  • ಅಪಘಾತಕ್ಕೀಡಾದ ಮರ್ಸಿಡಿಸ್ ಕಾರಿಗೆ ಆಂಟಿ-ಲಾಕ್ ಬ್ರೇಕಿಂಗ್ ವ್ಯವಸ್ಥೆ ಅಳವಡಿಸಲಾಗಿದ್ದು ಅದು ಬ್ರೇಕ್‌ ಹಾಕುವಾಗ ವಾಹನವನ್ನು ಸರಿಯಾಗಿ ಚಲಾಯಿಸಲು ಅವಕಾಶ ಮಾಡಿಕೊಡಬಲ್ಲದು.

  • ಆದರೆ ಪಾನಮತ್ತರಾಗಿದ್ದ ವಿಶ್ರಾಂತಿ ಇಲ್ಲದ ಅನಾಹಿತಾ ಅಹಮಾದಾಬಾದ್‌ನಿಂದ ಮುಂಬೈ ತನಕ ಕಾರು ಚಲಾಯಿಸುತ್ತಿದ್ದರು. ಅವರಿಗೆ ಕಾರು ಚಲಾಯಿಸುವಷ್ಟು ಸ್ಥಿರತೆ ಇರಲಿಲ್ಲ. ಆದ್ದರಿಂದ ಬ್ರೇಕ್‌ ಹಾಕಲು ವಿಫಲರಾದರು… ಸೂಕ್ತ ರೀತಿಯಲ್ಲಿ ಬ್ರೇಕ್‌ ಹಾಕಿದ್ದರೆ ಅಪಘಾತದ ಪರಿಣಾಮ ಇಷ್ಟು ತೀವ್ರವಾಗಿ ಇರುತ್ತಿರಲಿಲ್ಲ.

  • ಡೇರಿಯಸ್‌ ಅವರು ವಾಹನದ ಮಾಲೀಕರಾಗಿದ್ದು  ಐಪಿಸಿ ಸೆಕ್ಷನ್ 304ರ ಅಡಿ ಅವರ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಏಕೆಂದರೆ ಅನಾಹಿತಾ ಅವರಿಗೆ ಕುಡಿತದ ಅಭ್ಯಾಸ ಇದ್ದರೂ ಹಿಂದಿನ ದಿನ ಮದ್ಯಪಾನ ಮಾಡಿದ್ದರೂ ಡೇರಿಯಸ್‌ ತಮ್ಮ ಪತ್ನಿಯ ವಾಹನ ಚಲಯಿಸುವುದನ್ನು ತಡೆಯಲಿಲ್ಲ.

ಪ್ರತಿವಾದಿಗಳ ಆಕ್ಷೇಪ

ಆದರೆ ಅನಾಹಿತಾ ಪಾಂಡೋಲೆ ಅವರ ಪತಿ ಡೇರಿಯಸ್‌ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ರಫೀಕ್‌ ದಾದಾ ಅವರು ʼಈ ಅಪಪ್ರಚಾರ ಇಲ್ಲಿಗೇ ಕೊನೆಗೊಳ್ಳಬೇಕು ಮತ್ತು (ಆರೋಪ ನಿಗದಿ ಕುರಿತಾದ ನ್ಯಾಯವ್ಯಾಪ್ತಿಗೆ ಸಂಬಂಧಿಸಿದಂತೆ) ಅರ್ಜಿದಾರರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿ ಎಂದರು. ಅನಾಹಿತಾ ಪರ ಹಾಜರಾದ ಹಿರಿಯ ವಕೀಲ ಅಬಾದ್ ಪೊಂಡಾ ಕೂಡ ಅರ್ಜಿದಾರರ ವಾದಕ್ಕೆ ಆಕ್ಷೇಪಿಸಿದರು. ಆಕೆ ಮದ್ಯಪಾನ ಮಾಡಿದ್ದರು ಎಂಬುದು ಕಪೋಲಕಲ್ಪಿತ ಹೇಳಿಕೆಯಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಪರೀಕ್ಷೆಗಳು ನಡೆದಿವೆ ಎಂದರು. ಆಗ ಮುಖ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅರುಣಾ ಪೈ ಅವರು ಮದ್ಯಪಾನಕ್ಕೆ ಸಂಬಂಧಿಸಿದ ಪರೀಕ್ಷೆಗಳಲ್ಲಿ ಋಣಾತ್ಮಕ ಫಲಿತಾಂಶ ದೊರೆತಿದೆ ಎಂದರು.

ತಮ್ಮ ವಾದವನ್ನು ಸಾಬೀತುಪಡಿಸಲು ಸಮಯಾವಕಾಶ ಬೇಕು ಎಂದು ಅರ್ಜಿದಾರರು ಕೇಳಿದಾಗ ಮೊದಲು ಅದಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದ ನ್ಯಾಯಾಲಯ ಕಡೆಗೆ ಕಾಲಾವಕಾಶ ನೀಡಿ ಅರ್ಜಿಯನ್ನು ಜ.17ಕ್ಕೆ ವಿಚಾರಣೆಗೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com