ಸಕ್ಷಮ ಪ್ರಾಧಿಕಾರ ಆರಂಭಿಕ ನೇಮಕಾತಿ ಮಾಡಿರದಿದ್ದರೆ ದಿನಗೂಲಿ ನೌಕರ ಕಾಯಂಗೊಳಿಸುವಂತೆ ಕೋರುವಂತಿಲ್ಲ: ಸುಪ್ರೀಂ

ಕಾಯಂಗೊಳಿಸಲು ಇರುವ ಮತ್ತೊಂದು ಪೂರ್ವ ಷರತ್ತೆಂದರೆ, ಮಂಜೂರುಗೊಂಡ ಹುದ್ದೆಯೊಂದಿರಬೇಕಿದ್ದು, ಆ ಹುದ್ದೆಯಲ್ಲಿ ದಿನಗೂಲಿ ನೌಕರ ಕೆಲಸ ಮಾಡುತ್ತಿರಬೇಕು ಎಂದು ನ್ಯಾಯಾಲಯ ಹೇಳಿದೆ.
Supreme Court of India
Supreme Court of India

ಸಕ್ಷಮ ಪ್ರಾಧಿಕಾರವೊಂದು (ನೇಮಕಾತಿ ಹೊಣೆ ಹೊತ್ತ ಇಲಾಖಾ ಪ್ರಾಧಿಕಾರ) ಆರಂಭದಲ್ಲಿ ತನ್ನ ನೇಮಕಾತಿಯನ್ನು ಮಾಡಿರದಿದ್ದರೆ ಹಾಗೂ ದಿನಗೂಲಿ ನೌಕರ ಕೆಲಸ ಮಾಡಬೇಕಾದ ಮಂಜೂರುಗೊಂಡ ಹುದ್ದೆ ಇರದಿದ್ದರೆ ಆಗ ಅಂತಹ ದಿನಗೂಲಿ ನೌಕರನ ಉದ್ಯೋಗವನ್ನು ಕಾಯಂಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ [ವಿಭೂತಿ ಶಂಕರ್‌ ಪಾಂಡೆ ಮತ್ತು ಮಧ್ಯಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ತನ್ನ ನೌಕರಿ ಕಾಯಂಗೊಳಿಸಲು ಮಧ್ಯಪ್ರದೇಶ ಹೈಕೋರ್ಟ್‌ ನಿರಾಕರಿಸಿದ್ದನ್ನು ಪ್ರಶ್ನಿಸಿ ದಿನಗೂಲಿ ನೌಕರರೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಈ ತೀರ್ಪು ನೀಡಿದೆ.

ಪ್ರಕರಣದ ವಾಸ್ತವಾಂಶಗಳ ಪ್ರಕಾರ, ಅರ್ಜಿದಾರ 1980ರಲ್ಲಿ, ಮಧ್ಯಪ್ರದೇಶದ ಜಲಸಂಪನ್ಮೂಲ ಇಲಾಖೆ ಯೋಜನೆಯಡಿಯಲ್ಲಿ ದಿನಗೂಲಿ ಆಧಾರದ ಮೇಲೆ ಮೇಲ್ವಿಚಾರಕರಾಗಿ ಕೆಲಸಕ್ಕೆ ಸೇರಿದ್ದರು. ತಮ್ಮ ಮೇಲ್ವಿಚಾರಕ/ಸಮಯ ಪಾಲಕರ ಹುದ್ದೆಯನ್ನು ಕಾಯಂಗೊಳಿಸುವಂತೆ ಅವರು ಕೋರಿದ್ದರು, ಆದರೆ ಆ ಸಮಯದಲ್ಲಿ ಈ ಹುದ್ದೆಗೆ ಅಗತ್ಯವಿದ್ದ ಕನಿಷ್ಠ ವಿದ್ಯಾರ್ಹತೆಯನ್ನು ಅವರು ಹೊಂದಿರಲಿಲ್ಲ.

ನಂತರ ಸರ್ಕಾರ ವಿದ್ಯಾರ್ಹತೆಯ ಷರತ್ತನ್ನು ಸಡಿಲಗೊಳಿಸಿದ್ದರಿಂದ ದೀರ್ಘಾವಧಿಯಿಂದ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿರುವ ತಮ್ಮನ್ನು ಕಾಯಂಗೊಳಿಸುವಂತೆ ಮೇಲ್ಮನವಿದಾರ ಕೋರಿದ್ದರು.

ಕನಿಷ್ಠ ವಿದ್ಯಾರ್ಹತೆ ಕಾಯಂಗೊಳಿಸಲು ಅಡ್ಡಿಯಾಗದು ಎಂಬುದನ್ನು ಒಪ್ಪಬಹುದಾದರೂ ಪ್ರಕರಣದ ದಿನಗೂಲಿ ನೌಕರ ಯಾವುದೇ ಹುದ್ದೆಗೆ ನೇಮಕಗೊಂಡಿಲ್ಲ ಎಂಬ ಆಧಾರದಲ್ಲಿ ಆತನ ಮನವಿಯನ್ನು ಮತ್ತೆ ತಿರಸ್ಕರಿಸಲಾಯಿತು.   

Also Read
ಅಗ್ನಿವೀರರದು ಸೈನಿಕರ ಕೆಳಗಿನ ಶ್ರೇಣಿ, ಅವರ ಸೇವೆ ಸೇನಾಪಡೆಯ ಖಾಯಂ ಸೇವೆಯ ಭಾಗವಲ್ಲ: ನ್ಯಾಯಾಲಯಕ್ಕೆ ಕೇಂದ್ರದ ವಿವರಣೆ

ಮೇಲ್ಮನವಿದಾರರ ನೇಮಕಾತಿ ಸಕ್ಷಮ ಪ್ರಾಧಿಕಾರದಿಂದ ನಡೆದಿಲ್ಲ ಮತ್ತು ಅರ್ಜಿದಾರರನ್ನು ಸಕ್ರಮಗೊಳಿಸುವಂತೆ ಕೋರಿದಾಗ ಯಾವುದೇ ಹುದ್ದೆ ಲಭ್ಯ ಇರಲಿಲ್ಲ ಎಂದು ಕಾಯಮಾತಿಗಾಗಿ ಅರ್ಜಿದಾರ ಮಾಡಿದ್ದ ಮನವಿ ತಿರಸ್ಕರಿಸುವಾಗ ಸಂಬಂಧಪಟ್ಟ ಪ್ರಾಧಿಕಾರ ಹೇಳಿತ್ತು.

1990ರಲ್ಲಿ ಅಥವಾ ಅದಕ್ಕೂ ಮೊದಲೇ ದಿನಗೂಲಿಗಳಾಗಿದ್ದ ತನಗಿಂತ ಕಿರಿಯ ವ್ಯಕ್ತಿಗಳನ್ನು ಕಾಯಂಗೊಳಿಸಲಾಗಿದ್ದರೂ ತನ್ನನ್ನು ಕಾಯಂಗೊಳಿಸಿಲ್ಲ ಎಂಬ ಅಂಶ ಆಧರಿಸಿ ನಂತರ ಅರ್ಜಿದಾರರು, ತಮ್ಮ ಕಾಯಮಾತಿಗೆ ಒತ್ತಾಯಿಸಿದ್ದರು.  

ಅವರ ಪ್ರತಿಪಾದನೆಯನ್ನು ಮನ್ನಿಸಿದ್ದ ಏಕಸದಸ್ಯ ಪೀಠ ಅರ್ಜಿದಾರರಿಗಿಂತಲೂ ಕಿರಿಯರನ್ನು ಕಾಯಂಗೊಳಿಸಿದ ದಿನದಿಂದಲೇ ಮೇಲ್ಮನವಿದಾರರನ್ನೂ ಕಾಯಂಗೊಳಿಸಲು ನಿರ್ದೇಶಿಸಿತ್ತು. ಆದರೆ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶ ರದ್ದುಗೊಳಿಸಿದ್ದರಿಂದ ಮೇಲ್ಮನವಿದಾರರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದರು.

ಕರ್ನಾಟಕ ಸರ್ಕಾರ ಕಾರ್ಯದರ್ಶಿ ಮತ್ತು ಉಮಾದೇವಿ ಇನ್ನಿತರರ ನಡುವಣ ಪ್ರಕರಣದ (2006) ತೀರ್ಪಿನಂತೆ ಉದ್ಯೋಗ ಕಾಯಂಗೊಳಿಸಲು ಆರಂಭಿಕ ನೇಮಕಾತಿಯನ್ನು ಸಕ್ಷಮ ಪ್ರಾಧಿಕಾರ ಮಾಡಿರಬೇಕು ಮತ್ತು ದಿನಗೂಲಿ ನೌಕರ ಕೆಲಸ ಮಾಡಬೇಕಾದ ಮಂಜೂರುಗೊಂಡ ಹುದ್ದೆ ಇರಬೇಕು ಎಂದು ಸುಪ್ರೀಂ ಕೋರ್ಟ್‌ ವಿವರಿಸಿತು. ಹೀಗಾಗಿ ಕಾಯಂಗೊಳಿಸುವ ಕೋರಿಕೆಯನ್ನು ತಿರಸ್ಕರಿಸಿದ್ದ ಸಂಬಂಧಪಟ್ಟ ಪ್ರಾಧಿಕಾರದ ಕ್ರಮ ಮತ್ತು ಹೈಕೋರ್ಟ್‌ ವಿಭಾಗೀಯ ಪೀಠದ ತೀರ್ಪು ಸಮಂಜಸವಾಗಿದೆ ಎಂದ ಸುಪ್ರೀಂ ಕೋರ್ಟ್‌ ಮೇಲ್ಮನವಿದಾರರ ಅರ್ಜಿಯನ್ನು ವಜಾಗೊಳಿಸಿತು.

Related Stories

No stories found.
Kannada Bar & Bench
kannada.barandbench.com