ದಲಿತರ ಮೇಲಿನ ಹಲ್ಲೆ ಪ್ರಕರಣ: ಹತ್ತು ಆರೋಪಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್‌

ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮಾಡಲಾದ ಆರೋಪಗಳಿಗೆ ವಿವಿಧ ಹಂತದ (ತಿಂಗಳಲ್ಲಿ) ಶಿಕ್ಷೆ ವಿಧಿಸಿ ಒಟ್ಟು 85 ಸಾವಿರ ರೂಪಾಯಿಗಳ ದಂಡ ವಿಧಿಸಿ ಆದೇಶಿಸಿದ ಹೈಕೋರ್ಟ್‌.
High Court of Karnataka
High Court of Karnataka
Published on

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ದುಂಡ ಗ್ರಾಮದಲ್ಲಿ ದಲಿತರ ಮೇಲಿನ ಹಲ್ಲೆ ಪ್ರಕರಣ ಸಂಬಂಧ 10 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಆರೋಪಿಗಳನ್ನು ಖುಲಾಸೆಗೊಳಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಕರಣದ ಸಂತ್ರಸ್ಥೆಯಾಗಿರುವ ಲಕ್ಷ್ಮಮ್ಮ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ಕೆ ಎಂ ಖಾಜಿ ಅವರ ನೇತೃತ್ವದ ಏಕಸದಸ್ಯ ಪೀಠ ಆದೇಶ ಮಾಡಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡ (ದೌರ್ಜನ್ಯ ತಡೆ) ಕಾಯಿದೆ ಅಡಿಯಲ್ಲಿ ಎಲ್ಲ ಆರೋಪಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ಮೂರು ಸಾವಿರ ರೂಪಾಯಿಗಳ ದಂಡ ವಿಧಿಸಿ ಆದೇಶಿಸಿದೆ. ಜೊತೆಗೆ, ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮಾಡಲಾದ ಆರೋಪಗಳಿಗೆ ವಿವಿಧ ಹಂತದ (ತಿಂಗಳಲ್ಲಿ) ಶಿಕ್ಷೆ ವಿಧಿಸಿ ಒಟ್ಟು 85 ಸಾವಿರ ರೂಪಾಯಿಗಳ ದಂಡ ವಿಧಿಸಿ ಆದೇಶಿಸಿದೆ.

ವಿಚಾರಣಾಧೀನ ನ್ಯಾಯಾಲಯ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಸಾಕ್ಷ್ಯಾಧಾರಗಳು ಅನುಮಾನಾಸ್ಪದ ಎಂದು ಹೇಳಿ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಆದರೆ, ಪ್ರತ್ಯಕ್ಷ್ಯದರ್ಶಿಗಳ ಸಾಕ್ಷ್ಯಗಳನ್ನು ಪರಿಶೀಲನೆ ನಡೆಸಿಲ್ಲ. ಆ ಮೂಲಕ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಆದರೆ, ಪ್ರಕರಣದ 8ನೇ ಆರೋಪಿ ಶಿವಲಿಂಗಯ್ಯ ಎಂಬುವರು ಅರ್ಜಿ ವಿಚಾರಣೆ ನಡುವೆ ಮೃತಪಟ್ಟಿರುವುದರಿಂದ ಅವರ ವಿರುದ್ಧದ ಪ್ರಕರಣ ಹಿಂಪಡೆಯಲಾಗಿದೆ ಎಂದು ವಿವರಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಸಿವಿಲ್ ಪ್ರಕರಣವೊಂದಕ್ಕೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಸುದೀಪ್ ಎಂಬುವರ ವಿರುದ್ಧ ಮೇಲ್ಮನವಿದಾರೆ ಲಕ್ಷಮ್ಮ ದೂರು ನೀಡುವುದಕ್ಕೆ ಪೊಲೀಸ್ ಠಾಣೆಗೆ ಹೋಗಿದ್ದರು. ಇದರಿಂದ ಸಿಟ್ಟಾಗಿದ್ದ ಗ್ರಾಮದ ಸವರ್ಣಿಯರು 2008ರ ಆಗಸ್ಟ್ 14ರಂದು ದುಂಡ ಗ್ರಾಮ ಹರಿಜನ ಕಾಲೊನಿಗೆ ನುಗ್ಗಿ ತಮ್ಮ ಜಾತಿಯನ್ನು ಪ್ರಸ್ತಾಪಿಸಿ ನಿಂದನೆ ಮಾಡಿದ್ದರು. ಜೊತೆಗೆ, ದೊಣ್ಣೆಗಳು ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿ ರಸ್ತಸ್ರಾವವಾಗುವರೆಗೆ ಗಾಯಗೊಳಿಸಿದ್ದರು.

ಈ ಸಂಬಂಧ ದೂರು ದಾಖಲಾಗಿದ್ದು, ದೂರಿನ ಸಂಬಂಧ ದಂಡಿನಶಿವರ ಪೊಲೀಸರು ತನಿಖೆ ನಡೆಸಿ 11 ಮಂದಿ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ತುಮಕೂರಿನ ವಿಚಾರಣಾಧೀನ ನ್ಯಾಯಾಲಯ 2011ರ ಜೂನ್ 23 ರಂದು ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ತಿಳಿಸಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಾಸಿಕ್ಯೂಷನ್ ಪ್ರಶ್ನೆ ಮಾಡಿರಲಿಲ್ಲ. ಆದರೆ, ಸಂತ್ರಸ್ಥೆಯಾಗಿದ್ದ ಲಕ್ಷ್ಮಮ್ಮ ಮೇಲ್ಮನವಿ ಸಲ್ಲಿಸಿದ್ದರು.

Kannada Bar & Bench
kannada.barandbench.com