ದೇಶ ವಿರೋಧಿ ಚಟುವಟಿಕೆ ಆರೋಪ: ಟಿಐಎಸ್ಎಸ್ ವಿರುದ್ಧ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ದಲಿತ ಪಿಎಚ್‌ಡಿ ಅಧ್ಯಯನಾರ್ಥಿ

ಪ್ರಕರಣದ ಸಂಬಂಧ ಅಫಿಡವಿಟ್ ಸಲ್ಲಿಸುವಂತೆ ವಿಶ್ವವಿದ್ಯಾಲಯಕ್ಕೆ ಸೂಚಿಸಿರುವ ಹೈಕೋರ್ಟ್ ವಿಚಾರಣೆಯನ್ನು ಮೇ 21ಕ್ಕೆ ಮುಂದೂಡಿದೆ.
Bombay High Court
Bombay High Court

ಪುನರಾವರ್ತಿತ ದುರ್ನಡತೆ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆ' ಆರೋಪ ಮಾಡಿ ತಮ್ಮನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಿರುವ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ (TISS) ನ ಕ್ರಮ ಪ್ರಶ್ನಿಸಿ ದಲಿತ ಸಮುದಾಯಕ್ಕೆ ಸೇರಿದ ಪಿಎಚ್ ಡಿ ಅಧ್ಯಯನಾರ್ಥಿ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಸ್ಕೂಲ್ ಆಫ್ ಡೆವಲಪ್‌ಮೆಂಟ್ ಸ್ಟಡೀಸ್‌ನ ಪಿಎಚ್‌ಡಿ ವಿದ್ಯಾರ್ಥಿ ರಾಮದಾಸ್ ಕೆ ಎಸ್ ಅವರು ತಮ್ಮ ಅಮಾನತು ರದ್ದುಗೊಳಿಸುವಂತೆ ಕೋರಿ ಮೇ 4 ರಂದು ರಿಟ್ ಅರ್ಜಿ ಸಲ್ಲಿಸಿದ್ದರು. ರಾಮದಾಸ್ ಅವರು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಸದಸ್ಯರಾಗಿದ್ದಾರೆ.

ಮೇ 10 ರಂದು ಅರ್ಜಿ ಆಲಿಸಿದ ನ್ಯಾಯಮೂರ್ತಿಗಳಾದ ಎ ಎಸ್ ಚಂದೂರ್‌ಕರ್‌ ಮತ್ತು ಜಿತೇಂದ್ರ ಜೈನ್ ಅವರಿದ್ದ ವಿಭಾಗೀಯ ಪೀಠ ವಿಶ್ವವಿದ್ಯಾಲಯದ ಸಬಲೀಕರಣ ಸಮಿತಿಯನ್ನು ಸಂಪರ್ಕಿಸಿ ಪರಿಹಾರ ಪಡೆಯುವಂತೆ ಅರ್ಜಿದಾರರಿಗೆ ಸೂಚಿಸಿತಾದರೂ ಅವರ ಪರ ವಕೀಲರಾದ ಲಾರಾ ಜೆಸಾನಿ ಅವರು ವಿದ್ಯಾರ್ಥಿ ಕೈಪಿಡಿ 2023-2024 ಅನ್ನು ಉಲ್ಲೇಖಿಸಿ ಟಿಐಎಸ್‌ಎಸ್‌ ಕ್ರಮಕ್ಕೆ ಆಕ್ಷೇಪಿಸಿದರು.

ಅರ್ಜಿದಾರರಿಗೆ ಲಭ್ಯವಿರುವ ಪರ್ಯಾಯ ಪರಿಹಾರವನ್ನು ಸೂಚಿಸುವುದಕ್ಕಾಗಿ ಕಿರು ಅಫಿಡವಿಟ್ ಸಲ್ಲಿಸುವಂತೆ  ಟಿಐಎಸ್‌ಎಸ್‌ಗೆ ಸೂಚಿಸಿದ ನ್ಯಾಯಾಲಯ ವಿಚಾರಣೆಯನ್ನು ಮೇ 21ಕ್ಕೆ ಮುಂದೂಡಿತು.

ತಮ್ಮ ವಿವರಣೆಯನ್ನು ಪರಿಗಣಿಸದೆ ತಮ್ಮ ವಿರುದ್ಧ ಪುನರಾವರ್ತಿತ ದುಷ್ಕೃತ್ಯದ ತನಿಖೆ ನಡೆಸುತ್ತಿರುವ ಅಧಿಕಾರ ಸಮಿತಿ ವರದಿ ನೀಡಿತ್ತು. ಈ ವರದಿ ಆಧರಿಸಿ ತಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಪ್ರಗತಿಶೀಲ ವಿದ್ಯಾರ್ಥಿಗಳ ವೇದಿಕೆ (PSF)-TISS ಬ್ಯಾನರ್ ಅಡಿಯಲ್ಲಿ ಜನವರಿ 2024 ರಲ್ಲಿ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿದ್ದಕ್ಕೆ ಆಕ್ಷೇಪಿಸಿ ಟಿಐಎಸ್‌ಎಸ್‌ ಆದೇಶ ನೀಡಿತ್ತು. ರಾಮದಾಸ್‌ ಚಟುವಟಿಕೆ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಇಲ್ಲ/ ಅಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳಿಗೆ ಅನುಮತಿ ಇಲ್ಲ ಎಂದಿತ್ತು.

ರಾಮದಾಸ್ ಅವರು ಸಂವಿಧಾನ ಮತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಮಾರ್ಗಸೂಚಿಗಳನ್ನು ಅವಲಂಬಿಸಿ ಅಮಾನತು ಆದೇಶವನ್ನು ಪ್ರಶ್ನಿಸಿದರು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವಿದ್ಯಾರ್ಥಿಗಳು ಸಂಘಗಳನ್ನು ರಚಿಸಲು ಮತ್ತು ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರು. ತಾವು ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದು ತಮ್ಮ ವಿರುದ್ಧ ಟಿಐಎಸ್‌ಎಸ್‌ ಸುಳ್ಳು ಕಥನಗಳನ್ನು ಸೃಷ್ಟಿಸಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ತಾವು ಟಿಐಎಸ್‌ಎಸ್‌ ಕ್ಯಾಂಪಸ್‌ ಪ್ರವೇಶಿಸಲು, ಅಧ್ಯಯನ ಮುಂದುವರೆಸಲು ಹಾಗೂ ತಮಗೆ ನೀಡಲಾಗುತ್ತಿದ್ದ ಮಾಸಿಕ ವಿದ್ಯಾರ್ಥಿ ವೇತನ ಮತ್ತು ಫೆಲೋಶಿಪ್‌ ಸೇರಿದಂತೆ ವಿವಿಧ ಅರ್ಹತೆಗಳನ್ನು ಮತ್ತೆ ಒದಗಿಸಬೇಕು ಎಂದು ಅವರು ನ್ಯಾಯಾಲಯವನ್ನು ಪ್ರಾರ್ಥಿಸಿದ್ದಾರೆ.

Kannada Bar & Bench
kannada.barandbench.com