

ವಾಯುಮಾಲಿನ್ಯ ತಾರಕಕ್ಕೇರುವ ತಿಂಗಳುಗಳಲ್ಲಿ ದೇಶದ ರಾಜಧಾನಿಯಲ್ಲಿ ಹೊರಾಂಗಣ ಕ್ರೀಡಾಕೂಟ ಆಯೋಜಿಸದಂತೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿಯ ಶಿಕ್ಷಣ ಇಲಾಖೆಗೆ ದೆಹಲಿ ಹೈಕೋರ್ಟ್ ಬುಧವಾರ ನೋಟಿಸ್ ನೀಡಿದೆ [ನೈಸಾ ಬೇಡಿ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ]
ಚಳಿಗಾಲದಲ್ಲಿ ಮಾಲಿನ್ಯದ ಮಟ್ಟ ಗರಿಷ್ಠವಾಗಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಕ್ರೀಡಾ ವಾರ್ಷಿಕ ವೇಳಾಪಟ್ಟಿ ಬದಲಿಸವುದನ್ನು ಪರಿಗಣಿಸಬೇಕು ಮತ್ತು ನಾಲ್ಕು ವಾರಗಳಲ್ಲಿ ಪ್ರಕರಣದ ಸಂಬಂಧ ಸರ್ಕಾರ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ನ್ಯಾ. ಸಚಿನ್ ದತ್ತಾ ಅವರಿದ್ದ ಪೀಠ ತಿಳಿಸಿದೆ.
ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿದ್ದು ಸಮಸ್ಯೆಯ ಗಂಭೀರತೆಯನ್ನು ಅದು ಅರಿತಿಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ಶ್ವಾಸಕೋಶಕ್ಕೆ ಹಾನಿಯಾದರೆ ವಿದ್ಯಾರ್ಥಿಗಳನ್ನು ಹೊಣೆ ಮಾಡಲಾಗದು. ನೀವು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದೀರಿ. ಈ ತಿಂಗಳಿನಲ್ಲಿ ಏನು ಸಮಸ್ಯೆ ಇದೆ ಎಂಬುದು ನಿಮಗೆ ಗೊತ್ತಿದೆಯೇ? ಎಂದು ನ್ಯಾಯಾಲಯ ಖಾರವಾಗಿ ಪ್ರಶ್ನಿಸಿತು.
ವಾಯು ಮಾಲಿನ್ಯದ ಕಾರಣಕ್ಕೆ ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ವಂಚಿತರಾಗಬಾರದು ಎಂದು ದೆಹಲಿ ಸರ್ಕಾರದ ಸ್ಥಾಯಿ ವಕೀಲ ಸಮೀರ್ ವಶಿಷ್ಠ್ ಹೇಳಿದಾಗ ನ್ಯಾಯಾಲಯ ಈ ರೀತಿಯಾಗಿ ಪ್ರತಿಕ್ರಿಯಿಸಿತು.
ವಾಯುಮಾಲಿನ್ಯ ಮೇರೆ ಮೀರಿರುವ ತಿಂಗಳುಗಳಲ್ಲಿ ದೆಹಲಿ ಶಾಲೆಗಳಲ್ಲಿ ಕ್ರೀಡಾಕೂಟ ನಡೆಸದಂತೆ ನಿರ್ದೇಶನ ನೀಡಬೇಕೆಂದು ಕೋರಿ ವಿದ್ಯಾರ್ಥಿಗಳ ಗುಂಪೊಂದು ಹೈಕೋರ್ಟ್ ಮೊರೆ ಹೋಗಿತ್ತು.
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಅಪಾಯಕಾರಿಯಾಗಿರುವ ವೇಳೆ ಅಧಿಕಾರಿಗಳು ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸುತ್ತಾರೆ. ಇದರಿಂದ ವಿಷಯುಕ್ತ ಗಾಳಿಯಲ್ಲಿ ಮಕ್ಕಳು ಕಠಿಣ ದೈಹಿಕ ಚಟುವಟಿಕೆ ನಡೆಸುವಂತಾಗಲಿದ್ದು ಇದು ಸಂವಿಧಾನದ 21 ಮತ್ತು 21 ಎ ವಿಧಿಗಳ ಉಲ್ಲಂಘನೆ ಎಂದು ವಿದ್ಯಾರ್ಥಿಗಳ ಪರ ವಕೀಲರು ವಾದಿಸಿದ್ದರು. ಅರ್ಜಿ ಸಲ್ಲಿಸಿದ್ದ ಪೋಷಕರ ಪರವಾಗಿ ಹಿರಿಯ ವಕೀಲೆ ಶೆಯ್ಲ್ ತೆಹ್ರಾನ್ ಮತ್ತವರ ತಂಡ ವಾದ ಮಂಡಿಸಿತು.
ಹಿರಿಯ ವಕೀಲೆ ಶೆಯ್ಲ್ ತೆಹ್ರಾನ್ ಅವರು "ನನ್ನ ಸಲಹೆ ಎಂದರೆ, ಏಪ್ರಿಲ್ ತಿಂಗಳಿನಲ್ಲಿ ಅವರು ಕ್ರೀಡಾ ಚಟುವಟಿಕೆ ನಡೆಸಬಹುದು. ಕ್ರೀಡೆಗಳ ವಿಚಾರದಲ್ಲಿ ಆ ತಿಂಗಳು ಏನೂ ಚಟುವಟಿಕೆ ಇರುವುದಿಲ್ಲ. ನಾವು ಸಾಮಾನ್ಯವಾಗಿ ಸೇವಿಸುವ ಗಾಳಿಗಿಂತಲೂ ಆ ತಿಂಗಳಿನಲ್ಲಿ ಗಾಳಿ ಉತ್ತಮವಾಗಿರುತ್ತದೆ" ಎಂದು ಅವರು ವಿವರಿಸಿದರು. ಜನವರಿ 13, 2026ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ದೆಹಲಿ ಸರ್ಕಾರದ ಶಿಕ್ಷಣ ಇಲಾಖೆಯನ್ನು ಸ್ಥಾಯಿ ವಕೀಲ ಸಮೀರ್ ವಸಿಷ್ಟ್ ಪ್ರತಿನಿಧಿಸಿದ್ದರು.