ಪತ್ನಿ ಪರ ವಕೀಲೆಯ ವಿರುದ್ಧ ದೂರುದಾರನಿಂದ ಕ್ರಿಮಿನಲ್‌ ಪ್ರಕರಣ: ಇದು ಅಪಾಯಕಾರಿ ಪ್ರವೃತ್ತಿ ಎಂದ ಹೈಕೋರ್ಟ್‌

ವಕೀಲರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುವುದಕ್ಕೂ ಮುನ್ನ ಆರೋಪದ ಕುರಿತು ತನಿಖೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ.
Lawyers
Lawyers
Published on

ನ್ಯಾಯಾಲಯಗಳಲ್ಲಿನ ಪ್ರಕರಣಗಳಲ್ಲಿ ಪ್ರತಿವಾದಿಯ ಪರ ವಕೀಲರು ಹಿಂದೆ ಸರಿಯುವಂತೆ ಮಾಡಲು ದಾವೆದಾರರು ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತಿರುವುದು ಅಪಾಯಕಾರಿ ಪ್ರವೃತ್ತಿ ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ.

ಪ್ರತಿವಾದಿಗಳ ಪರ ವಕೀಲರ ವಿರುದ್ಧ ಅಸಾಧ್ಯವಾದ ಆರೋಪಗಳನ್ನು ಮಾಡುತ್ತಿರುವ ಹಲವಾರು ಪ್ರಕರಣಗಳು ತಮ್ಮ ಗಮನಕ್ಕೆ ಇವೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಹೇಳಿದ್ದು, ಈ ಪ್ರವೃತ್ತಿಗೆ ಅವಕಾಶ ಮಾಡಿಕೊಟ್ಟರೆ ಕಾನೂನು ವೃತ್ತಿಯ ಮೇಲೆ ಗಂಭೀರ ಪರಿಣಾಮ ಉಂಟು ಮಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

“ಆರೋಪಿಗಳನ್ನು ಪ್ರತಿನಿಧಿಸುತ್ತಾರೆ ಎಂಬ ಏಕೈಕ ಕಾರಣಕ್ಕಾಗಿ ದೂರುದಾರರು ವಕೀಲರನ್ನು ಅಪರಾಧ ಪ್ರಕರಣಗಳಲ್ಲಿ ಸಿಲುಕಿಸುತ್ತಿದ್ದಾರೆ. ಇಂಥ ಹಲವಾರು ಪ್ರಕರಣಗಳು ಈ ನ್ಯಾಯಾಲಯದ ಮುಂದೆ ಬಂದಿದ್ದು, ಅಂಥ ಪ್ರಕರಣಗಳಲ್ಲಿ ವಕೀಲರನ್ನು ಎಳೆದು ತರಲು ಯಾವುದೇ ಸಕಾರಣವಿಲ್ಲ. ಈ ಪ್ರವೃತ್ತಿ ಬೆಳೆಯಲು ಬಿಟ್ಟರೆ ಪ್ರತಿವಾದಿಯ ಪ್ರತಿಯೊಬ್ಬ ವಕೀಲರನ್ನು ತನಿಖಾ ಬಲೆಗೆ ಬೀಳಿಸಲಿದ್ದು, ಇದು ವಕೀಲ ವೃತ್ತಿಯ ಮೇಲೆ ಗಂಭೀರ ಪರಿಣಾಮ ಉಂಟು ಮಾಡಲಿದೆ” ಎಂದು ನ್ಯಾಯಾಲಯ ಹೇಳಿದೆ.

“ಪ್ರತಿವಾದಿ ವಿರುದ್ಧ ದೂರುದಾರರು ಪ್ರತೀಕಾರ ತೀರಿಸಿಕೊಳ್ಳುವುದಕ್ಕಾಗಿ ಆರೋಪ ಮಾಡುತ್ತಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು, ವಕೀಲರ ವಿರುದ್ದ ಅಪರಾಧ ಪ್ರಕರಣ ದಾಖಲಿಸುವುದಕ್ಕೂ ಮುನ್ನ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂಲಭೂತವಾಗಿ ತನಿಖೆ ನಡೆಸಬೇಕು” ಎಂದು ನ್ಯಾಯಾಲಯ ಹೇಳಿದೆ.

ವೈವಾಹಿಕ ಪ್ರಕರಣವೊಂರ ವಿಭಾಗ ದಾವೆಗೆ ಸಂಬಂಧಿಸಿದಂತೆ ಪತ್ನಿ ಪ್ರತಿನಿಧಿಸಿದ್ದ ವಕೀಲೆ ಯಾಸ್ಮೀನ್‌ ಸಲೇಹಾ ಅವರ ವಿರುದ್ಧ ಪತಿ ದಾಖಲಿಸಿದ್ದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯವು ಮೇಲಿನಂತೆ ಹೇಳಿದೆ.

“ಹಾಲಿ ಪ್ರಕರಣವು ದೂರುದಾರರ ಅಪಾಯಕಾರಿ ನಡೆ ಮತ್ತು ಸದ್ಯ ಕಂಡುಬರುತ್ತಿರುವ ಪ್ರವೃತ್ತಿಯ ಪ್ರತಿಫಲನದಂತಿದೆ” ಎಂದು ನ್ಯಾಯಾಲಯ ಹೇಳಿದೆ.

ವಕೀಲೆಯು ಆರೋಪಿಯನ್ನು ಪ್ರತಿನಿಧಿಸುತ್ತಿದ್ದಾರೆ ಎಂಬುದನ್ನು ಮೀರಿ ಊಹಾತ್ಮಕ ಆರೋಪಗಳ ಮೇಲೆ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅವರ ವಿರುದ್ದ ಯಾವುದೇ ದಾಖಲೆ ಇಲ್ಲ ಎಂದಿರುವ ನ್ಯಾಯಾಲಯವು ಸಲೇಹಾ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿದೆ.

Kannada Bar & Bench
kannada.barandbench.com