.jpeg?w=480&auto=format%2Ccompress&fit=max)
“ಬೆನ್ನುಹುರಿ ಶಸ್ತ್ರಚಿಕಿತ್ಸೆಗೆ ಒಳಗಾಗದಿದ್ದರೆ ನಾಳೆಯೇ ದರ್ಶನ್ ಸಾಯುತ್ತಾರೆ, ನಾಳೆ ಬೆಳಗ್ಗೆ ಲಕ್ವ ಹೊಡೆಯುತ್ತದೆ ಎಂದು ಹೇಳಿ ನ್ಯಾಯಾಲಯದ ದಾರಿ ತಪ್ಪಿಸಲಾಗಿದ್ದು, ಕೋರ್ಟ್ ತೋರಿದ ಸಹಾನುಭೂತಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಐದು ವಾರಗಳು ಕಳೆದರೂ ಯಾವುದೇ ಚಿಕಿತ್ಸೆಯನ್ನು ದರ್ಶನ್ ಪಡೆದಿಲ್ಲ. ಹೀಗಾಗಿ, ಅವರಿಗೆ ಮಂಜೂರು ಮಾಡಿರುವ ಮಧ್ಯಂತರ ಜಾಮೀನು ರದ್ದುಪಡಿಸಬೇಕು” ಎಂದು ರಾಜ್ಯ ಸರ್ಕಾರವು ಶುಕ್ರವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಬಲವಾಗಿ ವಾದಿಸಿತು.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ, ಆರ್ ನಾಗರಾಜು, ಎಂ ಲಕ್ಷ್ಮಣ್, ಅನು ಕುಮಾರ್ ಅಲಿಯಾಸ್ ಅನು, ಜಗದೀಶ್ ಅಲಿಯಾಸ್ ಜಗ್ಗ, ಪ್ರದೋಶ್ ಎಸ್. ರಾವ್ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಇಂದೂ ಮುಂದುವರಿಸಿತು.
ರಾಜ್ಯ ಸರ್ಕಾರದ ಪರವಾಗಿ ವಾದ ಆರಂಭಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ಅವರು “ದರ್ಶನ್‌ಗೆ ಬೆನ್ನುಹುರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅನುಮತಿಸದಿದ್ದರೆ ಅವರು ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯವು 13ರಂದು ಮಧ್ಯಂತರ ಜಾಮೀನು ನೀಡಿತ್ತು. ನ್ಯಾಯಾಲಯ ತೋರಿದ ಅನುಕಂಪವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ನಾಳೆಯೇ ದರ್ಶನ್ ಸಾಯುತ್ತಾರೆ, ನಾಳೆ ಬೆಳಗ್ಗೆ ಲಕ್ವ ಹೊಡೆಯುತ್ತದೆ ಎಂದು ಹೇಳುವ ಮೂಲಕ ನ್ಯಾಯಾಲಯದ ದಾರಿ ತಪ್ಪಿಸಲಾಗಿದೆ. ಆದರೆ, ಇಂದಿಗೂ ಯಾವುದೇ ಚಿಕಿತ್ಸೆಯನ್ನು ದರ್ಶನ್ ಪಡೆದಿಲ್ಲ” ಎಂದು ಆಕ್ಷೇಪಿಸಿದರು.
ಮುಂದುವರೆದು, “ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಕಡೆಯಿಂದ ನವೆಂಬರ್ 6 ಮತ್ತ 21ರಂದು ಎರಡು ವೈದ್ಯಕೀಯ ವರದಿಗಳನ್ನು ನೀಡಲಾಗಿದೆ. ಜಾಮೀನಿನ ಮೇಲೆ ದರ್ಶನ್ ಬಂದ ವಾರದಲ್ಲಿ ಮೊದಲ ವರದಿ ನೀಡಲಾಗಿದೆ. ನವೆಂಬರ್ 6ರ ವರದಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸುವವರೆಗೆ ದರ್ಶನ್ ಅವರು ಮಧ್ಯಂತರ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೆಲ್ಲವೂ ತಾತ್ಕಾಲಿಕ ಕ್ರಮವಾಗಿದ್ದು, ಶಸ್ತ್ರಚಿಕಿತ್ಸೆ ಬಾಕಿ ಇದೆ. ಇದಕ್ಕಾಗಿ ಅವರನ್ನು ಅಣಿಗೊಳಿಸಲಾಗುತ್ತಿದೆ ಎಂದು ವೈದ್ಯಕೀಯ ವರದಿಯಲ್ಲಿ ಹೇಳಲಾಗಿದೆ" ಎಂದರು.
ಅಲ್ಲದೆ, "ನವೆಂಬರ್ 21ರ ವರದಿಯಲ್ಲಿ ದರ್ಶನ್ ರಕ್ತದೊತ್ತಡದಲ್ಲಿ ವ್ಯತ್ಯಯವಾಗುತ್ತಿರುವುದರಿಂದ ಅವರನ್ನು ಶಸ್ತ್ರಚಿಕಿತ್ಸೆಗೆ ಅಣಿಗೊಳಿಸಲಾಗುತ್ತಿದೆ. ಶಸ್ತ್ರಚಿಕಿತ್ಸೆಯಾದ ಬಳಿಕ ಅವರು ಎಷ್ಟುದಿನಗಳಲ್ಲಿ ಚೇತರಿಸಿಕೊಳ್ಳಬಹುದು ಎಂಬುದನ್ನು ಆನಂತರ ಅಂದಾಜಿಸಲಾಗುವುದು ಎಂದು ವೈದ್ಯರು ತಿಳಿಸಿದ್ದರು. ಇದಕ್ಕೆ ಪೂರಕವಾಗಿ ರಕ್ತದೊತ್ತಡದಲ್ಲಿನ ಏರುಪೇರಿಗೆ ಸಂಬಂಧಿಸಿದ ವರದಿಗಳನ್ನು ಅಡಕಗೊಳಿಸಲಾಗಿದೆ. ನವೆಂಬರ್ 15ರ ನಂತರ ದರ್ಶನ್ ಬಿಪಿ 141, 142, 130…ಆಗಿದೆ. ಬಿಪಿ ವ್ಯತ್ಯಾಸವಾಗುತ್ತಿರುವುದರಿಂದ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಇದನ್ನು ಖಾತರಿಪಡಿಸಲು ನಾವು ಸಹ ತಜ್ಞ ವೈದ್ಯರನ್ನು ಸಂಪರ್ಕಿಸಿದ್ದೇವೆ. ಶಸ್ತ್ರಚಿಕಿತ್ಸೆ ಅಗತ್ಯವಾಗಿರುವಾಗ ಅತಿ ರಕ್ತದೊತ್ತಡದಿಂದ ಬಳಲುತ್ತಿರುವ ರೋಗಿಗೆ 5 ಎಂಜಿಯ 2 ರೂಪಾಯಿ 22 ಪೈಸೆಯ ಆಮ್ಲಾನ್ ಮಾತ್ರೆ ನೀಡಲಾಗುತ್ತದಂತೆ. ಇದನ್ನು ನೀಡಿದರೆ ಒಂದು ದಿನ ಅಥವಾ ಹೆಚ್ಚೆಂದರೆ ಎರಡು ದಿನಗಳಲ್ಲಿ ಬಿಪಿ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಿದ್ದಾರೆ” ಎಂದು ವಿವರಿಸಿದರು.
“ಬಿಪಿ ಇರುವ ರೋಗಿಗೆ ಒಂದೊಮ್ಮೆ ಅಪಘಾತವಾದರೆ ಏನು ಮಾಡಲಾಗುತ್ತದೆ ಎಂದು ಕೇಳಿದ್ದಕ್ಕೆ ಇಂಥ ಸಂದರ್ಭದಲ್ಲಿ ಅನಸ್ತೇಶಿಯಾ ನೀಡಲಾಗುತ್ತದೆ. ಅದು ಎಲ್ಲವನ್ನೂ ನಿಭಾಯಿಸುತ್ತದೆ ಎಂದು ತಜ್ಞರು ನಮಗೆ ತಿಳಿಸಿದ್ದಾರೆ. ಆದರೆ, ದರ್ಶನ್‌ಗೆ ಮಧ್ಯಂತರ ಜಾಮೀನು ನೀಡಿ ಐದು ವಾರಗಳಾದರೂ ವೈದ್ಯರು ಇನ್ನೂ ಅವರನ್ನು ಶಸ್ತ್ರಚಿಕಿತ್ಸೆಗೆ ಅಣಿಗೊಳಿಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ದರ್ಶನ್ ಅವರ ನಡತೆ… ಸಿನಿಮಾದಲ್ಲಿ ಹೇಳುವಂತೆ ತಲೆ ಬಾಚಿಕೊಳ್ಳಿ, ಪೌಡರ್ ಹಾಕಿಕೊಳ್ಳಿ ಎನ್ನುವಂತಿದೆ… ಐದು ವಾರಗಳಿಂದ ವೈದ್ಯರು ಏನು ಮಾಡುತ್ತಿದ್ದಾರೆ? ಹೀಗಾಗಿ, ಮಧ್ಯಂತರ ಜಾಮೀನಿನಲ್ಲಿ ದರ್ಶನ್ ಉಳಿಯಲು ಅರ್ಹರಲ್ಲ. ಅವರು ಶರಣಾಗಬೇಕು. ಆನಂತರ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಬಹುದು. ಮುಂದಿನ ವಾರಕ್ಕೆ ಆರು ವಾರ ಮುಗಿಯಲಿದೆ” ಎಂದರು.
ಆಗ ದರ್ಶನ್ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಅವರು “ಮಧ್ಯಂತರ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ” ಎಂದರು.
ಇದಕ್ಕೆ ಪೀಠವು “ಸುಪ್ರೀಂ ಕೋರ್ಟ್‌ಗೆ ಹಾಕಿದ ಮಾತ್ರಕ್ಕೆ ಅದನ್ನು ಇಲ್ಲಿ ವಾದಿಸಬಾರದು ಎಂದೇನಿಲ್ಲ” ಎಂದಿತು. ಇದಕ್ಕೂ, 14ನೇ ಆರೋಪಿ ಪ್ರದೋಶ್ ಪರವಾಗಿ ವಕೀಲ ಕೆ ದಿವಾಕರ್ ವಾದಿಸಿದರು.
ದಿನದ ಕಲಾಪ ಅಂತ್ಯವಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.