ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌ಗೆ ಜಾಮೀನು ನೀಡುವಾಗ ಹೈಕೋರ್ಟ್ ವಿವೇಚನೆ ಬಳಸಿಲ್ಲ ಎಂದ‌ ಸುಪ್ರೀಂ ಕೋರ್ಟ್‌

ವಿಚಾರಣೆಯ ಒಂದು ಹಂತದಲ್ಲಿ ಪೀಠವು ಆರೋಪಿಗಳಿಗೆ ಜಾಮೀನು ನೀಡಲು ಹೈಕೋರ್ಟ್‌ ಶತಾಯಗತಾಯ ಪ್ರಯತ್ನಿಸಿದೆ ಎನ್ನುವ ಇಂಗಿತ ವ್ಯಕ್ತಪಡಿಸಿತು.
Darshan
Darshan
Published on

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅವರಿಗೆ ಜಾಮೀನು ನೀಡುವ ವೇಳೆ ಕರ್ನಾಟಕ ಹೈಕೋರ್ಟ್‌ ಸೂಕ್ತ ವಿವೇಚನೆಯನ್ನು ಬಳಸಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಆಕ್ಷೇಪಿಸಿದೆ.

ನಟ ದರ್ಶನ್‌ ಅವರಿಗೆ ಹೈಕೋರ್ಟ್‌ ಜಾಮೀನು ನೀಡಿರುವ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿತು. ನ್ಯಾ. ಜೆ ಬಿ ಪರ್ದೀವಾಲಾ ಅವರ ಪೀಠವು ಪ್ರಕರಣವನ್ನು ಆಲಿಸಿತು.

ರಾಜ್ಯ ಸರ್ಕಾರದ ಮೇಲ್ಮನವಿಯ ಹಿನ್ನೆಲೆಯಲ್ಲಿ ದರ್ಶನ್‌ ಪರ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರನ್ನು ಈ ವಿಚಾರವಾಗಿ ನೀವು ಏನು ಹೇಳುತ್ತೀರಿ? ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಮುಂದುವರೆದು, "ಪ್ರಾಮಾಣಿಕವಾಗಿ ಹೇಳಬೇಕೆಂದರೆ ಹೈಕೋರ್ಟ್‌ ಸೂಕ್ತ ರೀತಿಯಲ್ಲಿ ತನ್ನ ವಿವೇಚನೆಯನ್ನು ಬಳಸಿಲ್ಲ" ಎಂದು ನ್ಯಾಯಮೂರ್ತಿ ಪರ್ದಿವಾಲಾ ಅವರು ಮೌಖಿಕವಾಗಿ ಹೇಳಿದರು.

ಈ ವೇಳೆ ಪ್ರತಿಕ್ರಿಯಿಸಿದ ಸಿಬಲ್‌ ಅವರು, ಹೈಕೋರ್ಟ್‌ ಏನು ಮಾಡಿದೆ ಎನ್ನುವುದಿರಲಿ, ದಯಮಾಡಿ ಸಾಕ್ಷ್ಯವನ್ನೊಮ್ಮೆ ಗಮನಿಸಿ, ಸೆಕ್ಷನ್‌ 161 ಮತ್ತು 164ರ ಅಡಿ ದಾಖಲಿಸಿರುವ ಹೇಳಿಕೆಗಳನ್ನು ಗಮನಿಸಿ ಎಂದು ನ್ಯಾಯಾಲಯದ ಗಮನ ಸೆಳೆಯುವ ಪ್ರಯತ್ನ ಮಾಡಿದರು.

ಈ ಸಂದರ್ಭದಲ್ಲಿ ನ್ಯಾ. ಪರ್ದಿವಾಲಾ ಅವರು, ನಾನು ನಿಮಗೆ ಏನೋ ತೋರಿಸಬೇಕೆಂದಿದ್ದೆ. ಆದರೆ, ಗುರುತು ಮಾಡಿಕೊಂಡಿದ್ದು ಗೋಚರಿಸುತ್ತಿಲ್ಲ... ನಿಮ್ಮ ವಾದವನ್ನು ಮಂಗಳವಾರ ಆಲಿಸಲಿದ್ದೇವೆ. ವಾದವನ್ನು ಸಿದ್ಧಪಡಿಸಿಕೊಂಡಿರಿ. ನಾವು ಏಕೆ ಮಧ್ಯಪ್ರವೇಶಿಸಬಾರದು ಎನ್ನುವ ನಿಮ್ಮ ವಾದವನ್ನು ಅಂದು ಆಲಿಸಲಿದ್ದೇವೆ ಎಂದು ಹೇಳಿದರು.

ಈ ವೇಳೆ ಸಿಬಲ್‌ ಅವರು, ಆಗಲಿ ಎಂದು ಸಹಮತ ಸೂಚಿಸಿದರು. ಅಲ್ಲದೆ, ನೀವು ಏನೋ ಹೇಳಲು ಗುರುತು ಮಾಡಿಕೊಂಡಿದ್ದಾಗಿ ಹೇಳಿದಿರಿ. ಏನದು? ಎಂದು ಪೀಠವನ್ನು ಕೇಳಿದರು. ಆಗ ನ್ಯಾಯಮೂರ್ತಿಗಳು, ಆರೋಪಿಗಳಿಗೆ ಜಾಮೀನು ನೀಡಲು ನ್ಯಾಯಾಲಯವು ಹೇಗೆಲ್ಲಾ ಶತಾಯಗತಾಯ ಪ್ರಯತ್ನಿಸಿದೆ ಎನ್ನುವ ವಿಚಾರ ಅದು ಎಂದು ನಗೆಯಾಡಿದರು.

ಅಂತಿಮವಾಗಿ ಪೀಠವು, ಪ್ರಕರಣವನ್ನು ಜುಲೈ 22ರಂದು ಅಂತಿಮ ವಿಲೇವಾರಿಗೆ ಪಟ್ಟಿ ಮಾಡಿತು.

Kannada Bar & Bench
kannada.barandbench.com