ಆರೋಗ್ಯ ಸೇತು ಅಪ್ಲಿಕೇಶನ್ ಅನ್ನು ಸ್ವಯಂಪ್ರೇರಿತವಾಗಿ ಡೌನ್‌ಲೋಡ್ ಮಾಡಿಕೊಂಡಿರುವ ಬಳಕೆದಾರರ ದತ್ತಾಂಶವನ್ನು ಬಳಸಲಾಗುತ್ತಿದೆಯೇ ಅಥವಾ ಸಂಗ್ರಹಿಸಿಡಲಾಗಿದೆಯೇ ಎಂದು ಕೇಂದ್ರ ಸರ್ಕಾರವನ್ನು ಕರ್ನಾಟಕ ಹೈಕೋರ್ಟ್ ಪ್ರಶ್ನಿಸಿದೆ.
ಕೋವಿಡ್ ಪತ್ತೆಗೆ ಬಳಸಲಾಗುತ್ತಿರುವ ಆರೋಗ್ಯ ಸೇತು ಟ್ರ್ಯಾಕಿಂಗ್ ಅಪ್ಲಿಕೇಶನ್ ಡೌನ್‌ಲೋಡ್ ಮತ್ತು ಬಳಕೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಅಶೋಕ್ ಎಸ್ ಕಿಣಗಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಪ್ರಶ್ನೆ ಎತ್ತಿದೆ.
ಬಳಕೆದಾರರು ಸ್ವಯಂಪ್ರೇರಿತವಾಗಿ ಆರೋಗ್ಯ ಸೇತು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿದ್ದರೂ ಯಾವುದೇ ತೆರನಾದ ದತ್ತಾಂಶವನ್ನು ಸಂಗ್ರಹಿಸಬಾರದು. “ಇಂಥ ದತ್ತಾಂಶ ಪ್ರಕ್ರಿಯೆಯಲ್ಲಿ ಕಾನೂನು ಗೈರಾಗಿರುವುದರಿಂದ ಸದರಿ ದತ್ತಾಂಶದ ಬಳಕೆಯು ಮಾನ್ಯವಲ್ಲ” ಎಂದು ಹಿರಿಯ ವಕೀಲ ಕಾಲಿನ್ ಗೋನ್ಸಾಲ್ವೆಸ್ ಹೇಳಿದರು.
“ಸ್ವಯಂಪ್ರೇರಿತವಾಗಿ ಆರೋಗ್ಯ ಸೇತು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿರುವವರ ದತ್ತಾಂಶವನ್ನು ರಾಜ್ಯ ಸರ್ಕಾರ ಬಳಕೆ ಮಾಡಿಕೊಳ್ಳುತ್ತಿದೆಯೇ?” ಎಂದು ಹೈಕೋರ್ಟ್ ಪ್ರಶ್ನಿಸಿತು.
“ಆರೋಗ್ಯ ಸೇತು ಅಪ್ಲಿಕೇಶನ್ ಅನ್ನು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವುದರಿಂದ ಜನರ ದತ್ತಾಂಶ ಸಂಗ್ರಹಿಸಿ ಕೇಂದ್ರ ಸರ್ಕಾರ ಅದನ್ನು ಬಳಸುತ್ತಿದೆಯೇ? ಈ ಪ್ರಶ್ನೆಗೆ ಉತ್ತರ ಹೌದಾದರೆ, ಯಾವ ಕಾರಣಕ್ಕಾಗಿ ಮತ್ತು ಯಾವ ಕಾನೂನಿನ ಅಡಿ ಅದನ್ನು ಬಳಸಲಾಗುತ್ತಿದೆ?” ಎಂದು ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಲು ಕಾಲಾವಕಾಶ ನೀಡುವಂತೆ ಕೇಂದ್ರ ಸರ್ಕಾರದ ಪರ ವಕೀಲ ಎಂ ಎನ್ ಕುಮಾರ್ ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ನ್ಯಾಯಾಲಯವು “ಆರೋಗ್ಯ ಸೇತು ಅಪ್ಲಿಕೇಶನ್ ಅನ್ನು ಜನರು ಡೌನ್‌ಲೋಡ್ ಮಾಡಿಕೊಂಡರೂ ಅವರ ವೈಯಕ್ತಿಕ ದತ್ತಾಂಶವನ್ನು ಸಂಗ್ರಹಿಸಿ ಸರ್ಕಾರ ಅಥವಾ ಸರ್ಕಾರದ ಯಾವುದೇ ಸಂಸ್ಥೆಗಳು ಬಳಕೆ ಮಾಡುವುದಿಲ್ಲ” ಎಂಬ ಸಾಮಾನ್ಯ ಹೇಳಿಕೆ ನೀಡುವಂತೆ ಸಲಹೆ ಮಾಡಿತು.
ಪ್ರತಿಕ್ರಿಯೆ ಸಲ್ಲಿಸಲು ಅಕ್ಟೋಬರ್ 3ರ ವರೆಗೆ ಕೇಂದ್ರ ಸರ್ಕಾರಕ್ಕೆ ಕಾಲಾವಕಾಶ ನೀಡಿರುವ ನ್ಯಾಯಾಲಯವು ಅಕ್ಟೋಬರ್ 5ಕ್ಕೆ ವಿಚಾರಣೆ ಮುಂದೂಡಿದೆ.