ಇತ್ತೀಚೆಗೆ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠವು ಮಗಳೊಬ್ಬಳು ತನ್ನ ತಂದೆಗೆ ಪದೇ ಪದೇ ಹಣದ ಬೇಡಿಕೆ ಇಡುವುದು ಆತನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧ ಆಗದು ಎಂದು ತೀರ್ಪು ನೀಡಿದೆ [ಲತಾ ಪ್ರಮೋದ್ ಡಾಂಗ್ರೆ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ತನ್ನ ತಂದೆಯ ಎರಡನೇ ಹೆಂಡತಿ ಮಗಳಾದ ಅರ್ಜಿದಾರೆ ಹಣಕ್ಕಾಗಿ ಪದೇ ಪದೇ ಬೇಡಿಕೆ ಇಟ್ಟು ತಂದೆಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ದಾಖಲಾಗಿದ್ದ ಎಫ್‌ಐಆರ್‌ನ್ನು ನ್ಯಾಯಮೂರ್ತಿಗಳಾದ ಮನೀಶ್ ಪಿತಾಳೆ ಮತ್ತು ಗೋವಿಂದ್ ಸನಪ್ ಅವರಿದ್ದ ಪೀಠ ರದ್ದುಗೊಳಿಸಿತು.
ಮಗಳು ತನ್ನ ತಾಯಿಗೋಸ್ಕರ ಪದೇ ಪದೇ ಹಣದ ಬೇಡಿಕೆಗಳನ್ನು ಇರಿಸಿದರೆ ಅದು ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ (ಆತ್ಮಹತ್ಯೆಗೆ ಪ್ರಚೋದನೆ) ಅಪರಾಧವಾಗದು ಎಂದು ನ್ಯಾಯಾಲಯ ಹೇಳಿತು.
“ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರೆ ಕೃಷಿ ಭೂಮಿಯಲ್ಲಿ ಪಾಲು ಅಥವಾ ತಂದೆಯಿಂದ ಹಣಕಾಸಿನ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂಬುದು ಗಮನಾರ್ಹ. ಮೇಲ್ನೋಟಕ್ಕೆ ಇಂತಹ ಪುನರಾವರ್ತಿತ ಬೇಡಿಕೆಗಳು ಅಥವಾ ಬೇಡಿಕೆಗಳ ಹೆಚ್ಚಳ ತಂದೆಯ ಆತ್ಮಹತ್ಯೆಗೆ ಕಾರಣವಾಗುವುದಿಲ್ಲ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ” ಎಂಬುದಾಗಿ ಪೀಠ ವಿವರಿಸಿತು.
“(ಹಣಕ್ಕಾಗಿ ಇಟ್ಟ) ಬೇಡಿಕೆ ಸ್ವತಃ ಅಸಮಂಜಸವಾಗಿರಬಹುದು ಅಥವಾ ತಂದೆ ಅದನ್ನು ಈಡೇರಿಸಲು ಸಾಧ್ಯವಾಗದೇ ಇರಬಹುದು. ಆದರೆ ಆರೋಪಿ ಮಗಳಾಗಿದ್ದು ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ತನ್ನ ತಾಯಿಯ ಮೂಲಕ ಉದ್ದೇಶಪೂರ್ವಕವಾಗಿ ಮೃತರ ಆತ್ಮಹತ್ಯೆಗೆ ಪ್ರಚೋದನೆಯನ್ನು ನೀಡಿದ್ದರೇ ಎಂಬುದನ್ನು ಸ್ವಲ್ಪ ಗಮನಿಸಬೇಕಾಗುತ್ತದೆ. ಮೃತನಿಗೆ ಇಬ್ಬರು ಹೆಂಡತಿಯರು ಮತ್ತು ಆ ಇಬ್ಬರೂ ಹೆಂಡತಿಯರಿಂದ ಮಕ್ಕಳಿದ್ದರು ಎಂಬುದನ್ನು ಸುತ್ತಲಿನ ಸಂದರ್ಭಗಳು ಕೂಡ ಹೇಳುತ್ತಿದ್ದು ಇದು ಮೃತ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವುದರಿಂದಾಗಿ ಅರ್ಜಿದಾರರಿಗೆ ಯಾವುದೇ ವಿಶೇಷ ಲಾಭ ದೊರೆಯುತ್ತದೆ ಎಂದು ಹೇಳಲಾಗದು” ಎಂಬುದಾಗಿ ಪೀಠ ಅಭಿಪ್ರಾಯಪಟ್ಟಿದೆ.
ತಂದೆ ಸೆಪ್ಟೆಂಬರ್ 14, 2021 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು ಅರ್ಜಿದಾರೆ ಮತ್ತು ತನ್ನ ಎರಡನೇ ಪತ್ನಿ ಹಣಕ್ಕಾಗಿ ಬೇಡಿಕೆ ಇಟ್ಟು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟಿದ್ದರು. ತನ್ನ ಎರಡನೇ ಪತ್ನಿ ಹೆಸರಲ್ಲಿ ಮೃತ ವ್ಯಕ್ತಿ ₹2 ಲಕ್ಷವನ್ನು ಸ್ಥಿರ ಠೇವಣಿಯಾಗಿ ಇರಿಸಲು ಮುಂದಾಗಿದ್ದರು. ಆದರೆ ಅರ್ಜಿದಾರೆಯಾಗಿರುವ ಮಗಳು ₹5 ಲಕ್ಷದಷ್ಟು ಠೇವಣಿ ಇಡಬೇಕು ಎಂದು ಹೇಳಿ ನಂತರ ₹ 15 ಲಕ್ಷ ರೂಪಾಯಿಗೆ ಏರಿಸುವಂತೆ ಕೇಳಿದ್ದರು.
“ಅರ್ಜಿದಾರೆ ಮತ್ತು ಆಕೆಯ ತಾಯಿ ನೀಡಿದ ಕಿರುಕುಳದ ಬಗ್ಗೆ ಡೆತ್ ನೋಟ್‌ನಲ್ಲಿ ಮೃತರು ದುಃಖ ತೋಡಿಕೊಂಡಿದ್ದರೂ ಕೂಡ ಎರಡನೇ ಪತ್ನಿ ಅಂದರೆ ಅರ್ಜಿದಾರೆಯ ತಾಯಿಯು ಹೆಚ್ಚೆಂದರೆ ಅರ್ಜಿದಾರೆಯ ಸೂಚನೆ ಮೇರೆಗೆ ಹಣದ ಬೇಡಿಕೆ ಇಡುತ್ತಿದ್ದಾರೆ ಅಥವಾ ಮೃತರ ಕೃಷಿಭೂಮಿ ಕೇಳುತ್ತಿದ್ದಾರೆ ಎಂಬ ಅಂಶವನ್ನು ಇದು ಬಹಿರಂಗಪಡಿಸುತ್ತದೆ. ಪ್ರಸ್ತುತ ದೂರು ಸಲ್ಲಿಸಿರುವುದು ಮೃತರ ಮೊದಲ ಹೆಂಡತಿಯ ಮಗಳನ್ನು ಮದುವೆಯಾಗಿರುವ ಅಳಿಯ” ಎಂದು ನ್ಯಾಯಾಲಯವು ದಾಖಲಿಸಿತು.
ಅಲ್ಲದೆ ಡೆತ್‌ನೋಟ್ ಬರೆದಿಟ್ಟು ಐದು ದಿನಗಳ ಬಳಿಕ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಮಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ಬರೆದಿಟ್ಟಿರುವುದಕ್ಕೂ ಮೃತರ ಅತಿರೇಕದ ಕ್ರಮಕ್ಕೂ ಯಾವುದೇ ನಿಕಟ ಸಂಬಂಧವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು. ಆ ಮೂಲಕ ಮಗಳ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ನ್ಯಾಯಾಲಯ ರದ್ದುಗೊಳಿಸಿತು.