ವರ್ಗೀಕರಣಕ್ಕೆ ಆರ್ಥಿಕ ಸ್ಥಿತಿ ಆಧಾರವಾದರೆ ಶೇ.10 ಇಡಬ್ಲ್ಯೂಎಸ್ ಮೀಸಲಾತಿ ಅನುಮತಿಸಬಹುದೇ ಎಂದು ಪ್ರಶ್ನಿಸಿದ ಸುಪ್ರೀಂ

ಒಬ್ಬ ವ್ಯಕ್ತಿಯು ಆರ್ಥಿಕವಾಗಿ ಹಿಂದುಳಿದಿದ್ದರೆ, ಅವರಿಗೆ ಆರ್ಥಿಕ ನೆರವು ನೀಡಬಹುದು ಆದರೆ ಈ ಆಧಾರದ ಮೇಲೆ ಅವರಿಗೆ ಮೀಸಲಾತಿ ನೀಡುವುದು ಭಾರತದ ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ ಎಂದು ಅರ್ಜಿದಾರರು ವಾದಿಸಿದರು.
ವರ್ಗೀಕರಣಕ್ಕೆ ಆರ್ಥಿಕ ಸ್ಥಿತಿ ಆಧಾರವಾದರೆ ಶೇ.10 ಇಡಬ್ಲ್ಯೂಎಸ್ ಮೀಸಲಾತಿ ಅನುಮತಿಸಬಹುದೇ ಎಂದು ಪ್ರಶ್ನಿಸಿದ ಸುಪ್ರೀಂ

ಆರ್ಥಿಕ ಆಧಾರ ಎಂಬುದು ವರ್ಗೀಕರಣಕ್ಕೆ ಮಾನ್ಯತೆ ಪಡೆದ ಆಧಾರವಾಗಿದ್ದರೆ ಇಡಬ್ಲ್ಯೂಎಸ್‌ ಮೀಸಲಾತಿ ಸಾಂವಿಧಾನಿಕತೆಯ ಪರೀಕ್ಷೆಯಲ್ಲಿ ಉತ್ತೀರ್ಣವಾಗುತ್ತದೆಯೇ ಎಂದು ಸುಪ್ರೀಂ ಕೋರ್ಟ್‌ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯೂಎಸ್‌) ಶೇ 10ರಷ್ಟು ಮೀಸಲಾತಿ ನೀಡುವ ಸಂವಿಧಾನದ 103ನೇ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಯ ಎರಡನೇ ದಿನವಾದ ಬುಧವಾರ ಪ್ರಶ್ನಿಸಿತು [ಜನ್‌ಹಿತ್‌ ಅಭಿಯಾನ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಭಾರತದ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್ ರವೀಂದ್ರ ಭಟ್, ಬೇಲಾ ಎಂ ತ್ರಿವೇದಿ ಮತ್ತು ಜೆಬಿ ಪರ್ದಿವಾಲಾ ಅವರಿದ್ದ ಐವರು ಸದಸ್ಯರ ಸಾಂವಿಧಾನಿಕ ಪೀಠದೆದುರು ವಾದ ಮಂಡಿಸಿದ ಕರ್ನಾಟಕದ ಮಾಜಿ ಅಡ್ವೊಕೇಟ್ ಜನರಲ್ ಮತ್ತು ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್ ಅವರು ನಿಷೇಧದ ತಾರತಮ್ಯದ ಆಧಾರವು ಜಾತಿ, ಪಂಥ, ಲಿಂಗ ಹಾಗೂ ಧರ್ಮವನ್ನು ಆಧರಿಸಬೇಕೇ ವಿನಾ ಆರ್ಥಿಕ ದೌರ್ಬಲ್ಯವನ್ನಲ್ಲ ಎಂದರು.

"ಆರ್ಥಿಕ ಸಂಪನ್ಮೂಲದಿಂದ ವಂಚಿತರಾಗುವ ಉಲ್ಲೇಖ ಎಲ್ಲಿದೆ? ಇದು ತಾರತಮ್ಯಕ್ಕೆ ಆಧಾರವಾಗದು. ಆರ್ಥಿಕ ಮಾನದಂಡಗಳನ್ನು ಸಂವಿಧಾನದ 15 (1)ನೇ ವಿಧಿಯಲ್ಲಿ ಇರಿಸಿ ನಂತರ 15 (6)ನೇ ವಿಧಿ ಮೂಲಕ ಅದಕ್ಕೆ ಸಂಬಂಧ ಕಲ್ಪಿಸುವುದನ್ನು ಅನುಮತಿಸಲಾಗದು" ಎಂದು ಪ್ರೊ. ರವಿವರ್ಮಕುಮಾರ್ ವಾದಿಸಿದರು.

ಆಗ ನ್ಯಾ. ಭಟ್‌ “ವರ್ಗೀಕರಣ ಮಾಡಲು ಆರ್ಥಿಕ ಆಧಾರವು ಅಂಗೀಕೃತ ಆಧಾರವಾಗಿದೆ. ಇದನ್ನು ಸಂವಿಧಾನದ 15 ಮತ್ತು 16ನೇ ವಿಧಿಯಡಿಯಲ್ಲಿ ಅದನ್ನು ಉಲ್ಲೇಖಿಸದೆ ಇರುವುದು ಬಹುಶಃ ಇದಕ್ಕೆ ಅನುಮತಿ ನೀಡಲಾಗಿದೆ ಎಂದು ಅರ್ಥೈಸುತ್ತದೆ” ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರ್, "ಅನುಮತಿ ಏನು ಎಂಬುದನ್ನು ಈಗಾಗಲೇ ಉಲ್ಲೇಖಿಸಲಾಗಿದೆ" ಎಂದು ಉತ್ತರಿಸಿದರು.

Also Read
ಇಡಬ್ಲ್ಯೂಎಸ್ ಕೋಟಾ ಎಂಬುದು ಹಿಂಬಾಗಿಲಿನಿಂದ ಮೀಸಲಾತಿ ನಾಶ ಮಾಡುವ ಯತ್ನ: ʼಸುಪ್ರೀಂʼನಲ್ಲಿ ಮೋಹನ್ ಗೋಪಾಲ್ ವಾದ

ಪ್ರೊ,. ರವಿವರ್ಮ ಕುಮಾರ್‌ ಅವರ ವಾದ ಸರಣಿ

  • …ಇದು ತಪ್ಪು ನಿಬಂಧನೆ. ಇದು ಪರಿಹಾರವಲ್ಲ. ಕ್ಷಯ ರೋಗಿಯನ್ನು ಚಿಕಿತ್ಸೆಗೆ ಹೆರಿಗೆ ವಾರ್ಡ್‌ಗೆ ಕರೆದೊಯ್ಯಲಾಗುತ್ತದೆಯೇ? ಬಡವರಿದ್ದರೆ ಅವರಿಗೆ ಹಣ ನೀಡಿ, ಶುಲ್ಕ ಪಾವತಿಸಲು ಹಾಗೂ ಹಾಸ್ಟೆಲ್‌ಗಳಿಗಾಗಿ ಸಹಾಯ ಮಾಡಿ. ಸಮಾನತೆಯ ಸಂಹಿತೆ ಆರ್ಥಿಕ ಅಂಶಗಳನ್ನು ಗಮನಿಸಲು ಅವಕಾಶ ಮಾಡಿಕೊಟ್ಟಿದೆ. ಅವರಿಗೆ ಉಚಿತ ಹಾಸ್ಟೆಲ್, ಉಚಿತ ಊಟ ಹಾಗೂ ವಸತಿ ನೀಡಿ. ಆದರೆ ಐತಿಹಾಸಿಕವಾಗಿ ಔದ್ಯೋಗಿಕ ಅಥವಾ ಸಾಂಸ್ಥಿಕ ಸ್ಥಾನಗಳಿಂದ ದೂರು ಇರಿಸಿದವರಿಗೆ ನೀಡಲಾಗುವ ಕೋಟಾವನ್ನು ಇವರಿಗೇಕೆ ನೀಡುತ್ತೀರಿ?

  • ರಾಜ್ಯ ಅನುದಾನಿತ ಸಂಸ್ಥೆಗೆ ಪರಿಗಣಿಸುವ ಹಕ್ಕು ಮೂಲಭೂತ ಹಕ್ಕಾಗಿದ್ದು ಶೇ.50ರಷ್ಟು ಮುಕ್ತ ವರ್ಗಕ್ಕೆ ಲಭ್ಯವಿದ್ದ ಈ ಹಕ್ಕು ಈಗ 103ನೇ ತಿದ್ದುಪಡಿಯಿಂದಾಗಿ ಕುಗ್ಗಿದೆ.

ಅರ್ಜಿದಾರರ ಪರ ಮತ್ತೊಬ್ಬ ಹಿರಿಯ ವಕೀಲ ಪಿ ವಿಲ್ಸನ್‌ ವಾದ  

  • ಕೇವಲ ಆರ್ಥಿಕತೆ ಪರಿಗಣಿಸಿ ಒದಗಿಸುವ ಮೀಸಲಾತಿ ಸಂವಿಧಾನದ ಮೂಲ ರಚನೆಯ ಉಲ್ಲಂಘನೆ.

  • ಇದು ಸಂವಿಧಾನದ ಅಸ್ಮಿತೆಯನ್ನು ನಾಶ ಮಾಡುತ್ತದೆ. ಸಂಸತ್ತು 368 ನೇ ವಿಧಿಗೆ ವಿವೇಚನಾರಹಿತ ಬಹುಮತ ನೀಡುವ ಮೂಲಕ ನಿಷೇಧಿತ ಪ್ರದೇಶಕ್ಕೆ ಕಾಲಿಟ್ಟು ಹಕ್ಕುಗಳನ್ನು ದಮನ ಮಾಡಿದೆ.

  • ಜಾತಿ ಇರುವಿಕೆಯನ್ನು ಸಾಬೀತು ಪಡಿಸಲು ನಾನು ಏಕಲವ್ಯ ಮತ್ತು ಮಹಾಭಾರತವನ್ನು ಉಲ್ಲೇಖಿಸಲು ಬಯಸುವುದಿಲ್ಲ. ಭಾರತದ ರಾಷ್ಟ್ರಪತಿಯನ್ನು ದೇವಸ್ಥಾನದಿಂದ ದೂರವಿಡಲಾಯಿತು ಮತ್ತು ರಾಷ್ಟ್ರದ ಪ್ರಥಮ ಮಹಿಳೆಗೆ ಕೂಡ ದೇವಸ್ಥಾನದಲ್ಲಿ ಅನುಮತಿ ನೀಡಲಿಲ್ಲ. ಹಾಗಾಗಿ ಜಾತಿ ಇನ್ನೂ ಚಲಾವಣೆಯಲ್ಲಿದೆ. ಚಾರಿತ್ರಿಕವಾಗಿ ಉಂಟಾಗಿರುವ ಅನ್ಯಾಯಕ್ಕೆ ಮೀಸಲಾತಿಯೊಂದೇ ಪರಿಹಾರ. ರಾಚನಿಕ ಅಡೆತಡೆಗಳನ್ನು ನೋಡಬೇಕಿದ್ದು ಅವುಗಳನ್ನು ತಲೆ ತಲಾಂತರದಿಂದ ಮುಖ್ಯವಾಹಿನಿಯಿಂದ ದೂರ ಇಡಲಾಗಿದೆ.

  • ಮೀಸಲಾತಿಯು ಬಡತನ ನಿರ್ಮೂಲನೆ ಕಾರ್ಯಕ್ರಮವಲ್ಲ, ಮತ್ತು ಇಡಬ್ಲ್ಯೂಎಸ್‌ ಕೋಟಾ ಮೂಲಭೂತವಾಗಿ ಹಣಕಾಸು ಬೆಂಬಲದ ಅಗತ್ಯವಿರುವವರಿಗಾಗಿ ರೂಪುಗೊಂಡಿದ್ದು ಚಾರಿತ್ರಿಕ ಅನ್ಯಾಯಕ್ಕೆ ತುತ್ತಾದವರಿಗೆ ಅಲ್ಲ.

Related Stories

No stories found.
Kannada Bar & Bench
kannada.barandbench.com