
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಲು ರೈತರು ತಮ್ಮ ಉತ್ಪನ್ನಗಳನ್ನು ತರುವ ಮೊದಲು ಎಷ್ಟು ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕಾಗಬಹುದು ಎಂದು ತೀರ್ಮಾನಿಸಲು ಬೆಳೆಗಳನ್ನು ಬೆಳೆಯುವ ಸ್ವರೂಪ ಹಾಗೂ ಆಹಾರ ಧಾನ್ಯಗಳ ಇಳುವರಿಯ ಪ್ರಮಾಣದ ಕುರಿತು ಆಯಾ ಜಿಲ್ಲಾಧಿಕಾರಿಗಳು ವೈಜ್ಞಾನಿಕ ಅಧ್ಯಯನ ನಡೆಸಬೇಕು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ. ಹಲವು ಕಾರಣಗಳಿಗಾಗಿ ವರ್ಷಪೂರ್ತಿ ಖರೀದಿ ಕೇಂದ್ರ ತೆರೆಯುವುದು ಅಸಾಧ್ಯ ಎಂದು ನ್ಯಾಯಾಲಯ ಹೇಳಿದೆ.
ಕನಿಷ್ಠ ಬೆಂಬಲ ಯೋಜನೆಯಡಿ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಈಗಾಗಲೇ ಸ್ಥಾಪಿಸಲಾಗಿರುವ ಖರೀದಿ ಕೇಂದ್ರಗಳನ್ನು ವರ್ಷದ 365 ದಿನಗಳ ಕಾಲ ಶಾಶ್ವತವಾಗಿ ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡಲು ಹಾಗೂ ಪ್ರತಿ ಜಿಲ್ಲೆಯ ಬೇಡಿಕೆಗೆ ತಕ್ಕಂತೆ ಹೆಚ್ಚುವರಿ ಖರೀದಿ ಕೇಂದ್ರ ಸ್ಥಾಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಕರ್ನಾಟಕ ರೈತ ಸೇನೆಯ ಅಧ್ಯಕ್ಷ ವೀರೇಶ್ ಸೊಬರದಮಠ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ಇತ್ಯರ್ಥಪಡಿಸಿದೆ.
“ಖರೀದಿ ಕೇಂದ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದಿರುವುದರಿಂದ ಬೇಡಿಕೆ ಈಡೇರಿಸಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಅಗತ್ಯ ಸಂಖ್ಯೆಯಲ್ಲಿ ಹೆಚ್ಚುವರಿ ಖರೀದಿ ಕೇಂದ್ರ ಸ್ಥಾಪಿಸಿ ಅದನ್ನು ಕಾರ್ಯನಿರ್ವಹಿಸುವಂತೆ ಮಾಡಬೇಕು. ಸಾಂಪ್ರದಾಯಿಕ ಕೊಯ್ಲು ಋತುಮಾನದ ನಂತರವೂ ಬೆಳೆಗಳನ್ನು ಬೆಳೆಯುವ ಈಗಿನ ಸಂದರ್ಭದ ಹಿನ್ನೆಲೆಯಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಸಮರ್ಪಕವಾಗಿ ಮಾರಾಟ ಮಾಡಲು ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರವು ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ ಒಂದು ಹೆಚ್ಚುವರಿ ಖರೀದಿ ಕೇಂದ್ರ ತೆರೆಯಬೇಕು. ಆ ಖರೀದಿಗಳು ಕೇಂದ್ರ ಸರ್ಕಾರದ ನಿಗದಿಪಡಿಸಿದ ಅವಧಿಗಿಂತ 2 ತಿಂಗಳು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.
“ನಿರ್ದಿಷ್ಟ ಪ್ರದೇಶದ ಭೌಗೋಳಿಕ ಸ್ಥಿತಿಗತಿ ಹಾಗೂ ಅಲ್ಲಿ ಉತ್ಪಾದಿಸಲಾಗುವ ಆಹಾರ ಧಾನ್ಯಗಳ ಪ್ರಮಾಣ ಗಮನದಲ್ಲಿಟ್ಟುಕೊಂಡು ಹಾಗೂ ಕನಿಷ್ಠ ಬೆಂಬಲ ಯೋಜನೆಯ ಉದ್ದೇಶಗಳನ್ನು ಸಮರ್ಪಕವಾಗಿ ಸಾಧಿಸಲು ಖರೀದಿ ಕೇಂದ್ರಗಳಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ ಅವಧಿಯ ಹೊರತಾಗಿ ಹೆಚ್ಚುವರಿ ಅವಧಿಗೆ ಖರೀದಿ ಕೇಂದ್ರ ತೆರೆದಿಡಲು ರಾಜ್ಯ ಸರ್ಕಾರ ಅಧಿಕಾರ ಹೊಂದಿರುತ್ತದೆ” ಎಂದು ನ್ಯಾಯಾಲಯ ಆದೇಶಿಸಿದೆ.
ಕೃಷಿಯೇತರ ಅವಧಿಯಲ್ಲಿ ಖರೀದಿ ಕೇಂದ್ರಗಳು ಸಿಗದಿರುವುದು ರೈತರಿಗೆ ಸಮಸ್ಯೆ ಉಂಟು ಮಾಡಿದೆ ಎಂಬ ಅರ್ಜಿದಾರರ ವಾದವನ್ನು ತಿರಸ್ಕರಿಸಬೇಕಿದೆ. ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ರೈತರು ಬೆಳೆ ಬೆಳೆಯದಿರುವಾಗ ಅವುಗಳನ್ನು ತೆರಯುವುದು ಉದ್ದೇಶಕ್ಕೆ ವಿರುದ್ಧ ಮತ್ತು ಅತಾರ್ಕಿಕವಾಗಿದೆ ಎಂದು ನ್ಯಾಯಾಲಯ.
ಕೇಂದ್ರ ಸರ್ಕಾರದ ಪರ ವಕೀಲ ಬಿ ಪ್ರಮೋದ್, ರಾಜ್ಯ ಸರ್ಕಾರದ ಪರ ನಿಲೋಫರ್ ಅಕ್ಬರ್, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಪರವಾಗಿ ಬಿ ಎನ್ ಜಗದೀಶ್ ಮತ್ತು ಅರ್ಜಿದಾರರ ಪರ ಗೌತಮ್ ಶ್ರೀಧರ್ ಭಾರದ್ವಾಜ್ ವಾದಿಸಿದ್ದರು.