ಸ್ಮಶಾನವಲ್ಲದ ಜಾಗದಲ್ಲಿ ಮೃತದೇಹ ಹೂಳಲು ಅನುಮತಿ ಇದೆಯೇ? ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸಿದ ಮದ್ರಾಸ್ ಹೈಕೋರ್ಟ್

ತಮಿಳುನಾಡು ಪಂಚಾಯತ್ ಕಾಯಿದೆ- 1994 ಅಥವಾ 1999ರ ತಮಿಳುನಾಡು ಗ್ರಾಮ ಪಂಚಾಯತ್ ನಿಯಮಾವಳಿಯಲ್ಲಿ ಸಾಮಾನ್ಯ ನಿಷೇಧಗಳಿಲ್ಲ ಎಂದು ವಿಭಾಗೀಯ ಪೀಠಕ್ಕೆ ತಿಳಿಸಲಾಯಿತು.
Madras High Court
Madras High Court
Published on

ತಮಿಳುನಾಡು ಗ್ರಾಮ ಪಂಚಾಯತ್‌ಗಳ (ಸ್ಮಶಾನ ಮತ್ತು ಸುಡುಗಾಡುಗಳ) ನಿಯಮಾವಳಿ 1999ರ ದೃಷ್ಟಿಯಿಂದ  ಗೊತ್ತುಪಡಿಸಿದ ಸಮಾಧಿ ಸ್ಥಳಗಳನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಮೃತಪಟ್ಟವರನ್ನು ಹೂಳಬಹುದೇ ಎಂಬುದಕ್ಕೆ ಸಂಬಂಧಿಸಿದ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.

ಬೇರೆ ವ್ಯಕ್ತಿಯ ಖಾಸಗಿ ಜಮೀನಿನಲ್ಲಿ ಹೂಳಲಾಗಿದ್ದ ತನ್ನ ಮೃತ ಪತಿಯ ಕಳೇಬರವನ್ನು ಅಲ್ಲಿಂದ ಗೊತ್ತುಪಡಿಸಿದ ಸ್ಮಶಾನದ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದ್ದ ಆದೇಶವನ್ನು ಪ್ರಶ್ನಿಸಿ ಜಗದೀಶ್ವರಿ ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌ ವಿ ಗಂಗಾಪುರವಾಲಾ ಮತ್ತು ನ್ಯಾಯಮೂರ್ತಿ ಪಿ ಡಿ ಆದಿಕೇಶವಲು ಅವರಿದ್ದ ವಿಭಾಗೀಯ ಪೀಠ ಪ್ರಕರಣ ವರ್ಗಾಯಿಸುವ ನಿರ್ಧಾರ ತೆಗೆದುಕೊಂಡಿತು.

ಈ ವರ್ಷದ ಏಪ್ರಿಲ್ 24ರಂದು ಮದ್ರಾಸ್ ಹೈಕೋರ್ಟ್‌ ನ್ಯಾಯಮೂರ್ತಿ ಎಂ ದಂಡಪಾಣಿ ಅವರಿದ್ದ ಏಕಸದಸ್ಯ ಪೀಠ ಈ ಉದ್ದೇಶಕ್ಕಾಗಿ ಗೊತ್ತುಪಡಿಸದ ಸ್ಥಳದಲ್ಲಿ ಮೃತದೇಹವನ್ನು ಹೂಳುವ ಕಾರ್ಯವನ್ನು ಅನುಮತಿಸಲಾಗುವುದಿಲ್ಲ ಎಂದು ತೀರ್ಪು ನೀಡಿತ್ತು. ಹಾಗಾಗಿ ಜಗದೀಶ್ವರಿ ಅವರ ಮೃತ ಪತಿಯ ಶವವನ್ನು ಹೊರತೆಗೆದು ನಿಗದಿತ ಸ್ಮಶಾನ ಸ್ಥಳದಲ್ಲಿ ಹೂಳುವಂತೆ ಏಕಸದಸ್ಯ ಪೀಠ ಸೂಚಿಸಿತ್ತು.

ತಮಿಳುನಾಡು ಪಂಚಾಯತ್ ಕಾಯಿದೆ- 1994 ಅಥವಾ 1999ರ ತಮಿಳುನಾಡು ಗ್ರಾಮ ಪಂಚಾಯತ್ ನಿಯಮಾವಳಿ ಪ್ರಕಾರ ಪರವಾನಗಿ ಪಡೆದ ಅಥವಾ ಗೊತ್ತುಪಡಿಸಿದ ಸ್ಮಶಾನವನ್ನು ಹೊರತುಪಡಿಸಿ ಯಾವುದೇ ಸ್ಥಳದಲ್ಲಿ ಮೃತರನ್ನು ಹೂಳಲು ಯಾವುದೇ ನಿಷೇಧ ಇಲ್ಲ ಎಂದು ಜಗದೀಶ್ವರಿ ಪರ ವಕೀಲ ಎನ್‌ ಜಿ ಆರ್ ಪ್ರಸಾದ್ ವಿಭಾಗೀಯ ಪೀಠಕ್ಕೆ ತಿಳಿಸಿದರು.

ಆದರೆ ಈ ವಾದಕ್ಕೆ ಪ್ರಕರಣದ ಮೂಲ ಅರ್ಜಿದಾರರಾದ ಬಿ ಬಿ ನಾಯ್ಡು ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿ ರಾಘವಾಚಾರಿ ಆಕ್ಷೇಪ ವ್ಯಕ್ತಪಡಿಸಿದರು. 1999 ರ ನಿಯಮಾವಳಿಯ 7 ನೇ ನಿಯಮವನ್ನು ನಿಯಮ 5ರೊಂದಿಗೆ ಸಹವಾಚನ ಮಾಡಿದಾಗ ಪರವಾನಗಿ ಪಡೆದ ಅಥವಾ ಗೊತ್ತುಪಡಿಸಿದ ಸ್ಮಶಾನದಲ್ಲಿ ಮಾತ್ರ ಶವಸಂಸ್ಕಾರ ಮಾಡಬಹುದು ಎಂಬುದು ಅರಿವಿಗೆ ಬರುತ್ತದೆ ಎಂದರು. ಈ ನಿಲುವಿಗೆ ಬೆಂಬಲವಾಗಿ, ಮದ್ರಾಸ್ ಹೈಕೋರ್ಟ್‌ ಮತ್ತು ಕೇರಳ ಹೈಕೋರ್ಟ್‌ ವಿವಿಧ ಪ್ರಕರಣಗಳಲ್ಲಿ ಉಲ್ಲೇಖಿಸಿದ್ದ ಕಾನೂನುಗಳನ್ನು ಅವರು ವಿಭಾಗೀಯ ಪೀಠದಲ್ಲಿ ಪ್ರಸ್ತಾಪಿಸಿದರು.

ಪಿ ಮುತ್ತುಸಾಮಿ ಪ್ರಕರಣದಲ್ಲಿ ವಿಭಾಗೀಯ ಪೀಠ ನಿಯಮ 7 ಅನ್ನು ವ್ಯಾಪಕವಾಗಿ ಚರ್ಚಿಸಿ ವ್ಯಾಖ್ಯಾನಿಸಿದ್ದರೂ  1999ರ ನಿಯಮಾವಳಿ 5 ಮತ್ತು 4ನ್ನು  ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ ಎಂದು ಸಿ ಜೆ ಗಂಗಾಪುರವಾಲಾ ಅವರ ನೇತೃತ್ವದ ಪೀಠ ಗಮನಿಸಿತು. ಮುತ್ತುಸಾಮಿ ಪ್ರಕರಣದಲ್ಲಿ ಮಾಡಲಾದ ವ್ಯಾಖ್ಯಾನವನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದಿತು. ವೈರುಧ್ಯವಾದ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಅಂತಿಮವಾಗಿ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಅವಶ್ಯಕತೆ ಇದೆ ಎಂದು ನ್ಯಾಯಾಲಯ ತೀರ್ಮಾನಿಸಿತು.

Kannada Bar & Bench
kannada.barandbench.com