ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವು: ಔಷಧ ನಿಯಂತ್ರಕರ ಅಮಾನತು ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‌ ನಿರಾಕರಣೆ

ಸೇವಾ ಅಮಾನತಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ಕೆಎಟಿಯ ಮಧ್ಯಂತರ ಆದೇಶವನ್ನು ಪ್ರಶ್ನಿಸಲಾಗಿದ್ದು, ಮುಖ್ಯ ಅರ್ಜಿ ವಿಲೇವಾರಿಗೆ ಬಾಕಿಯಿದೆ. ಈ ಹಂತದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದಿರುವ ಹೈಕೋರ್ಟ್‌.
Justices Krishna S. Dixit & Umesh M. Adiga
Justices Krishna S. Dixit & Umesh M. Adiga
Published on

ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವಿನ ಪ್ರಕರಣ ಸಂಬಂಧ ಕರ್ತವ್ಯಲೋಪ ಆರೋಪದ ಮೇಲೆ ಹೆಚ್ಚುವರಿ ಔಷಧ ನಿಯಂತ್ರಕ ಡಾ.ಎಸ್‌ ಉಮೇಶ್‌ ಅವರನ್ನು ಸೇವೆಯಿಂದ ವಜಾಗೊಳಿಸಿದ ಸರ್ಕಾರದ ಆದೇಶಕ್ಕೆ ತಡೆ ನೀಡಲು ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರಾಕರಿಸಿದೆ.

ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡದ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯ (ಕೆಎಟಿ) ಮಧ್ಯಂತರ ಆದೇಶ ಪ್ರಶ್ನಿಸಿ ಹೆಚ್ಚುವರಿ ಔಷಧ ನಿಯಂತ್ರಕ ಡಾ.ಎಸ್‌ ಉಮೇಶ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ಉಮೇಶ್‌ ಎಂ.ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ 2024ರ ನವೆಂಬರ್‌ 11ರಿಂದ ಡಿಸೆಂಬರ್‌ 5ರ ನಡುವಿನ ಅಲ್ಪಾವಧಿಯಲ್ಲಿ ಕಳಪೆ ಗುಣಮಟ್ಟದ ಔಷಧ ಸೇವಿಸಿ ಐವರು ಬಾಣಂತಿಯರು ಸಾವನ್ನಪ್ಪಿದ್ದಾರೆ. ಇದು ಅತ್ಯಂತ ಗಂಭೀರ ವಿಚಾರ. ಸ್ವತಃ ಮುಖ್ಯಮಂತ್ರಿಗಳೇ ಈ ವಿಚಾರವನ್ನು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಅವರು ಖುದ್ದಾಗಿ ಭೇಟಿ ನೀಡಿದ್ದಾರೆ. ಅದು ಪ್ರಶಂಸನೀಯವಾಗಿದೆ. ಇನ್ನೂ ಮೃತಪಟ್ಟವರು ಬಾಣಂತಿಯರು ಸೇವಿಸಿದ ಔಷಧಗಳ ಬಗ್ಗೆ ವೈದ್ಯಕೀಯ ತಜ್ಞರ ವಿಶೇಷ ಸಮಿತಿ ಪರೀಕ್ಷೆ ನಡೆಸುತ್ತಿದೆ. ಆಳವಾಗಿ ಪರೀಕ್ಷೆ ನಡೆಸುವುದು ಅಗತ್ಯವಾಗಿದೆ ಎಂದು ಪೀಠ ಹೇಳಿದೆ.

ಇನ್ನೊಂದೆಡೆ ಸೇವಾ ಅಮಾನತಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ಕೆಎಟಿಯ ಮಧ್ಯಂತರ ಆದೇಶವನ್ನು ಪ್ರಶ್ನಿಸಿದ ಅರ್ಜಿ ಇದಾಗಿದೆ. ಮುಖ್ಯ ಅರ್ಜಿ ವಿಲೇವಾರಿಗೆ ಬಾಕಿಯಿದ್ದು, ಈ ಹಂತದಲ್ಲಿ ಹೈಕೋರ್ಟ್‌ ಮಧ್ಯಪ್ರವೇಶಿಸುವುದಿಲ್ಲ. ಅರ್ಜಿಯನ್ನು ವಜಾಗೊಳಿಸಲಾಗುತ್ತಿದ್ದು, ಕೆಎಟಿ ಅರ್ಜಿದಾರರ ಮುಖ್ಯ ಅರ್ಜಿಯನ್ನು ಶೀಘ್ರ ವಿಚಾರಣೆ ನಡೆಸಿ ವಿಲೇವಾರಿ ಮಾಡಬೇಕು ಎಂದು ಪೀಠ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ 2024ರ ನವೆಂಬರ್‌ 22ರಿಂದ ಡಿಸೆಂಬರ್‌ 5ರ ನಡುವೆ ಐವರು ಬಾಣಂತಿಯರು ಸಾವನ್ನಪ್ಪಿದ್ದರು. ಕಳಪೆ ಗುಣಮಟ್ಟದ ಔಷಧ ಪೂರೈಸಿದ ಮೆಸರ್ಸ್‌ ಪಶ್ಚಿಮ ಬಂಗಾಳ ಫಾರ್ಮಾಸ್ಯೂಟಿಕಲ್‌ ಲಿಮಿಟೆಡ್‌ ಕಂಪನಿ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿಫಲವಾದ ಆರೋಪದ ಮೇಲೆ ಡಾ.ಎಸ್‌ ಉಮೇಶ್‌ ಅವರನ್ನು ಸೇವೆಯಿಂದ ಅಮಾನತುಪಡಿಸಿ 2024ರ ಡಿಸೆಂಬರ್‌ 2ರಂದು ಸರ್ಕಾರ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಉಮೇಶ್‌ ಕೆಎಟಿಗೆ ಅರ್ಜಿ ಸಲ್ಲಿಸಿ, ಸರ್ಕಾರದ ಅಮಾನತು ಆದೇಶಕ್ಕೆ ತಡೆ ನೀಡಲು ಮಧ್ಯಂತರ ಮನವಿ ಮಾಡಿದ್ದರು. ಕೆಎಟಿಯು ಆ ಮನವಿಯನ್ನು 2024ರ ಡಿಸೆಂಬರ್‌ 5ರಂದು ತಿರಸ್ಕರಿಸಿತ್ತು.

ಇದರಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಉಮೇಶ್‌ ಅವರು ಕಳಪೆ ಗುಣಮಟ್ಟದ ಔಷಧ ಪೂರೈಸಿದ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿಫಲವಾದ ಆರೋಪದ ಮೇಲೆ ತನ್ನನ್ನು ಅಮಾನತುಪಡಿಸಲಾಗಿದೆ. ಆದರೆ, ಬಾಣಂತಿಯರ ಸಾವಿಗೆ ತಾನೇ ಕಾರಣ ಎಂಬುದಾಗಿ ಹೇಳುವ ಯಾವುದೇ ದಾಖಲೆ ಇಲ್ಲ. ಇಲಾಖೆಯಲ್ಲಿ ಸಿಬ್ಬಂದಿ ಕೊರೆತೆಯಿದ್ದರೂ ತಾನು ಕರ್ತವ್ಯ ನಿಭಾಯಿಯಿಸಿದ್ದು, ಎಲ್ಲಾ ಅಗತ್ಯ ಕ್ರಮ ಜರುಗಿಸಿದ್ದೇನೆ. ತನ್ನನ್ನು ಸೇವೆಯಿಂದ ಅಮಾನತುಪಡಿಸುವ ಅಗತ್ಯವೇ ಇರಲಿಲ್ಲ. ಆದ್ದರಿಂದ, ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು. ಆ ಮನವಿಯನ್ನು ಪುರಸ್ಕರಿಸದಂತೆ ಸರ್ಕಾರದ ಪರ ವಕೀಲರು ಕೋರಿದ್ದರು. 

Kannada Bar & Bench
kannada.barandbench.com