ಬೆಂಗಳೂರಿನ ನಾಗವಾರದ ಹೆಣ್ಣೂರು ಕ್ರಾಸ್ ಬಳಿ ಇತ್ತೀಚೆಗೆ ಮೆಟ್ರೊ ಪಿಲ್ಲರ್ ನಿರ್ಮಾಣಕ್ಕಾಗಿ ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಕುಸಿದು ಬಿದ್ದು ತಾಯಿ ಮತ್ತು ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆಕ್ಷೇಪಣೆ ಸಲ್ಲಿಸಲು ಬೆಂಗಳೂರು ಮೆಟ್ರೊ ರೈಲು ಅಭಿವೃದ್ಧಿ ನಿಗಮಕ್ಕೆ (ಬಿಎಂಆರ್‌ಸಿಎಲ್) ಮಂಗಳವಾರ ಕರ್ನಾಟಕ ಹೈಕೋರ್ಟ್ ಎರಡು ವಾರಗಳ ಕಾಲಾವಕಾಶ ನೀಡಿದೆ.
ಮೆಟ್ರೊ ಪಿಲ್ಲರ್ ಕುಸಿತ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಗುಂಡಿ ಬಿದ್ದಿರುವ ವಿಚಾರದ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ಪರಿಗಣಿಸಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ ಮತ್ತು ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಇದೇ ಸಂದರ್ಭದಲ್ಲಿ ಪೀಠವು ರಾಜ್ಯ ಸರ್ಕಾರ, ಬಿಬಿಎಂಪಿ ಮತ್ತು ಮೆಟ್ರೊ ಕಾಮಗಾರಿ ಗುತ್ತಿಗೆ ಪಡೆದಿರುವ ನಾಗರ್ಜುನ್ ಕನ್‌ಸ್ಟ್ರಕ್ಷನ್ ಕಂಪೆನಿ ಲಿಮಿಟೆಡ್‌ಗೆ ನೋಟಿಸ್ ಜಾರಿ ಮಾಡಿತು.
ರಸ್ತೆಗಳ ಪರಿಸ್ಥಿತಿಯು ವಿಸ್ತೃತ ನೆಲೆಯಲ್ಲಿ ಆತಂಕ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಇಂಥ ಕಾಮಗಾರಿ ನಡೆಸುವಾಗ ಯಾವ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ? ಟೆಂಡರ್ ದಾಖಲೆ ಅಥವಾ ಗುತ್ತಿಗೆಕಾರರಿನಲ್ಲಿ ಸುರಕ್ಷತಾ ಕ್ರಮಗಳು ಉಲ್ಲೇಖವಾಗಿದೆಯೇ? ಒಂದೊಮ್ಮೆ ಸುರಕ್ಷತಾ ಕ್ರಮಗಳು ಟೆಂಡರ್ ದಾಖಲೆ/ಗುತ್ತಿಗೆ ಕರಾರಿನಲ್ಲಿ ಉಲ್ಲೇಖವಾಗಿರದಿದ್ದರೆ, ಸರ್ಕಾರದ ಆದೇಶ ಅಥವಾ ಅಧಿಸೂಚನೆಯ ರೂಪದಲ್ಲಿ ಸುರಕ್ಷತಾ ಕ್ರಮಕೈಗೊಳ್ಳಲು ಸೂಚಿಸಲಾಗಿದೆಯೇ? ಒಂದೊಮ್ಮೆ ಸುರಕ್ಷತಾ ಕ್ರಮ ಉಲ್ಲೇಖಿಸಿದ್ದರೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಮೇಲಿಂದ ಮೇಲೆ ಅವುಗಳನ್ನು ಪರಿಶೀಲಿಸಲು ಯಾವ ವ್ಯವಸ್ಥೆ ಮಾಡಲಾಗಿದೆ? ಸುರಕ್ಷತಾ ಕ್ರಮ ನಿರ್ವಹಿಸಲು ಹೊಣೆಗಾರಿಕೆ ನಿಗದಿ ಮಾಡಲಾಗಿದೆಯೇ? ಎನ್ನುವ ಪ್ರಶ್ನೆಗಳನ್ನು ನ್ಯಾಯಾಲಯ ಎತ್ತಿದೆ.
ಗುತ್ತಿಗೆ ನಡೆಸುತ್ತಿರುವ ಸಂಸ್ಥೆ ಅಥವಾ ಕಾಮಗಾರಿಯ ಮೇಲುಸ್ತುವಾರಿ ನಿಭಾಯಿಸುತ್ತಿರುವ ಅಧಿಕಾರಿಗಳ ಜವಾಬ್ದಾರಿಯ ಕುರಿತಾದ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಹೀಗಾಗಿ, ಮೇಲೆ ಉಲ್ಲೇಖಿಸಿದ ವಿಚಾರಗಳ ಕುರಿತು ಸಂಜ್ಞೇಯ ಪರಿಗಣಿಸಬೇಕಿದೆ. ಈ ನೆಲೆಯಲ್ಲಿ ರಿಜಿಸ್ಟ್ರಾರ್ ಜನರಲ್ ಅವರಿಗೆ ಪ್ರಕರಣ ದಾಖಲಿಸಲು ಆದೇಶಿಸಲಾಗಿದೆ ಎಂದು ಪೀಠವು ಹೇಳಿತ್ತು.