[ಗಲ್ಲು ಶಿಕ್ಷೆ] ವಿಚಾರಣಾ ಹಂತದಲ್ಲೇ ಶಿಕ್ಷೆ ವಿಧಿಸುವ ಬಗ್ಗೆ ಸಂಯಮದಿಂದ ವರ್ತಿಸುವುದು ತುರ್ತು ಅಗತ್ಯ: ಸುಪ್ರೀಂ
ಪ್ರಕರಣದ ವಾಸ್ತವಂಶಗಳೊಂದಿಗೆ ಸಾರ್ವಜನಿಕ ಅಭಿಪ್ರಾಯ ಸರಿದೂಗಿಸುವಾಗ ನ್ಯಾಯಾಲಯಗಳು ಸಂಯಮ ತೋರಬೇಕು ಎಂದಿರುವ ಸುಪ್ರೀಂಕೋರ್ಟ್, ಮೂವರು ಆರೋಪಿಗಳಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಕನಿಷ್ಠ 25 ವರ್ಷಗಳ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತು.
ಬಚ್ಚನ್ ಸಿಂಗ್ ಪ್ರಕರಣವನ್ನು ಅವಲಂಬಿಸಿದ ನ್ಯಾಯಮೂರ್ತಿಗಳಾದ ಯು ಯು ಲಲಿತ್, ಎಸ್ ರವೀಂದ್ರ ಭಟ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ಅಂತಹ ಪ್ರಕರಣಗಳ ಶಿಕ್ಷೆ ತಗ್ಗಿಸುವ ಸಂದರ್ಭಗಳನ್ನು ಪರಿಶೀಲಿಸುವಾಗ ಕ್ರೂರ ಅಪರಾಧಗಳ ವಿಚಾರಣೆ ವೇಳೆ ಕೂಡ ಉದಾರವಾಗಿ ಮತ್ತು ವಿಶಾಲವಾಗಿ ನಡೆದುಕೊಳ್ಳಬೇಕು ಎಂದು ಒತ್ತಿ ಹೇಳಿದರು.
ಅಪರಾಧದ ಕ್ರೌರ್ಯಕ್ಕೆ ಪ್ರತೀಕಾರದ ಪ್ರತಿಕ್ರಿಯೆ ನೀಡುವುದನ್ನು ತಪ್ಪಿಸಲು ವಿಚಾರಣೆಯ ಹಂತದಲ್ಲಿ ಶಿಕ್ಷೆ ಕಡಿಮೆಗೊಳಿಸುವ ಸಂದರ್ಭಗಳನ್ನು ಪರಿಗಣಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ತುರ್ತು ಅಗತ್ಯವಿದ್ದು ಹೆಚ್ಚಿನ ಪ್ರಕರಣಗಳಲ್ಲಿ ಈ ಪರಿಸ್ಥಿತಿ ಮೇಲ್ಮನವಿ ಹಂತ ತಲುಪುತ್ತಿದೆ ಎಂದು ನ್ಯಾಯಾಲಯ ಹೇಳಿತು.
ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ನೀಡಿದ ಪೀಠ ಕ್ರೂರ ಅಪರಾಧದ ಬಗ್ಗೆ ಹೊರಹೊಮ್ಮುವ ಸಾರ್ವಜನಿಕ ಅಭಿಪ್ರಾಯ, ಅಪರಾಧ ಅಥವಾ ಅಪರಾಧಿಗಳಿಗೆ ಸಂಬಂಧಿಸಿದ ವಸ್ತುನಿಷ್ಠ ಸನ್ನಿವೇಶವಾಗಿರದು ಎಂದು ಹೇಳಿದೆ.
ದರೋಡೆ ವೇಳೆ ಮೂವರು ಮಹಿಳೆಯರನ್ನು ಕೊಲೆ ಮಾಡಿದ ಪ್ರಕರಣವೊಂದರಲ್ಲಿ ಪ್ರಕರಣದ ಮೇಲ್ಮನವಿದಾರರಿಗೆ ಮಧ್ಯಪ್ರದೇಶದ ಸೆಷನ್ಸ್ ನ್ಯಾಯಾಲಯವೊಂದು ಗಲ್ಲು ಶಿಕ್ಷೆ ವಿಧಿಸಿತ್ತು. ಇದನ್ನು ಎತ್ತಿ ಹಿಡಿದು ಹೈಕೋರ್ಟ್ 2014ರ ನೀಡಿದ ತೀರ್ಪನ್ನು ಮೇಲ್ಮನವಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ತೀರ್ಪಿನಲ್ಲಿ ಮನೋಜ್, ರಾಹುಲ್ ಹಾಗೂ ನೇಹಾ ಎಂಬ ಆರೋಪಿಗಳಿಗೆ ನೀಡಿದ ಮರಣದಂಡನೆ ಅನಗತ್ಯ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ಅವರಿಗೆ ನೀಡಿದ್ದ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಬದಲಿಸಿತು.