ನ್ಯಾಯಾಲಯದ ತೀರ್ಪುಗಳನ್ನು ಸರ್ಕಾರ ವರ್ಷಗಟ್ಟಲೆ ಜಾರಿಗೆ ತರುವುದಿಲ್ಲ: ಸಿಜೆಐ ಎನ್ ವಿ ರಮಣ

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಮುಖ್ಯಮಂತ್ರಿಗಳು ಮತ್ತು ದೇಶದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಮಾವೇಶದಲ್ಲಿ ಸಿಜೆಐ ಮಾತನಾಡಿದರು.
ನ್ಯಾಯಾಲಯದ ತೀರ್ಪುಗಳನ್ನು ಸರ್ಕಾರ ವರ್ಷಗಟ್ಟಲೆ ಜಾರಿಗೆ ತರುವುದಿಲ್ಲ: ಸಿಜೆಐ ಎನ್ ವಿ ರಮಣ
CJI NV Ramana

ನ್ಯಾಯಾಲಯದ ತೀರ್ಪುಗಳನ್ನು ಸಾಮಾನ್ಯವಾಗಿ ಸರ್ಕಾರಗಳು ವರ್ಷಗಟ್ಟಲೆ ಅನುಷ್ಠಾನಗೊಳಿಸದೇ ಇರುವುದರಿಂದ, ಅದು ನ್ಯಾಯಾಂಗ ನಿಂದನೆಗೆ ಕಾರಣವಾಗುತ್ತದೆ. ಇದರಿಂದ ನ್ಯಾಯಾಲಯಗಳಲ್ಲಿ ಹೊರೆಯಾಗಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ತಿಳಿಸಿದರು.

ಶನಿವಾರ ನವದೆಹಲಿಯಲ್ಲಿ ನಡೆದ ಮುಖ್ಯಮಂತ್ರಿಗಳು ಮತ್ತು ದೇಶದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರ್ಕಾರ ಬಹುದೊಡ್ಡ ದಾವೆದಾರನಾಗಿದ್ದು ಶೇ.56ರಷ್ಟು ಪ್ರಕರಣಗಳಲ್ಲಿ ಅದು ವ್ಯಾಜ್ಯಕಾರನಾಗಿದೆ ಎಂದು ಸಿಜೆಐ ಹೇಳಿದರು. ವ್ಯಕ್ತಿಗಳನ್ನು ಬಂಧಿಸುವಾಗ ಮತ್ತು ಪ್ರಕರಣಗಳ ತನಿಖೆ ನಡೆಸುವಾಗ ನ್ಯಾಯಸಮ್ಮತತೆಯ ಕೊರತೆ ಇರುವುದನ್ನು ಅವರು ಎತ್ತಿ ತೋರಿಸಿದರು.

ಕಾನೂನು ಮತ್ತು ಸಂವಿಧಾನಕ್ಕೆ ಬದ್ಧವಾಗಿರುವುದು ಉತ್ತಮ ಆಡಳಿತದ ಕೀಲಿಕೈ. ಪೊಲೀಸ್ ತನಿಖೆಗಳು ನ್ಯಾಯಯುತವಾಗಿ ನಡೆದರೆ ಮತ್ತು ಅಕ್ರಮ ಬಂಧನ ಮತ್ತು ಕಸ್ಟಡಿ ಚಿತ್ರಹಿಂಸೆ ಕೊನೆಗೊಂಡರೆ, ಪ್ರಕರಣಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗುತ್ತದೆ ಎಂದರು.

ಆದರೂ ಇದನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ. ತೀರ್ಪುಗಳನ್ನು ಜಾರಿಗೊಳಿಸುವ ಭರದಲ್ಲಿ ಕಾರ್ಯಾಂಗ ಕಾನೂನು ಇಲಾಖೆಯ ಅಭಿಪ್ರಾಯ ಕೇಳುವುದಿಲ್ಲ ಎಂದು ಹೇಳಿದರು.

ಸ್ಪೆಷಲ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳು, ಸರ್ಕಾರಿ ಪ್ಲೀಡರ್‌ಗಳ ಕೊರತೆಯನ್ನು ಪ್ರಸ್ತಾಪಿಸಿದ ಸಿಜೆಐ, ಆ ಹುದ್ದೆಗಳ ಭರ್ತಿಗಾಗಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಸ್ವಾಗತ ಕೋರಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಭಾಗವಹಿಸಿದ್ದರು.

Related Stories

No stories found.