ವ್ಯಭಿಚಾರ ನಿರಪರಾಧೀಕರಣವನ್ನು ಸೇನೆಗೆ ಅನ್ವಯಿಸಲಾಗದು ಎಂದ ಕೇಂದ್ರ; ಸಾಂವಿಧಾನಿಕ ಪೀಠಕ್ಕೆ ವಿಷಯದ ವರ್ಗಾವಣೆ
Armed Forces, Supreme CourtImage for representational purposes

ವ್ಯಭಿಚಾರ ನಿರಪರಾಧೀಕರಣವನ್ನು ಸೇನೆಗೆ ಅನ್ವಯಿಸಲಾಗದು ಎಂದ ಕೇಂದ್ರ; ಸಾಂವಿಧಾನಿಕ ಪೀಠಕ್ಕೆ ವಿಷಯದ ವರ್ಗಾವಣೆ

ವ್ಯಭಿಚಾರವನ್ನು ಕ್ರಿಮಿನಲ್‌ ಅಪರಾಧ ಎಂದು ಹೇಳಲಾಗುತ್ತಿದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 497 ಅನ್ನು 2018ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿತ್ತು.

ಸರ್ವೋಚ್ಚ ನ್ಯಾಯಾಲಯವು 2018ರಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 497ರ ಅಡಿ ವ್ಯಭಿಚಾರವನ್ನು ನಿರಪರಾಧೀಕರಣಗೊಳಿಸಿ ನೀಡಿದ್ದ ತೀರ್ಪನ್ನು ಸೇನಾ ಪಡೆಗಳಿಗೆ ಅನ್ವಯಿಸಬಾರದು ಎಂದು ಕೇಂದ್ರ ಸರ್ಕಾರ ಕೋರಿದ್ದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಬುಧವಾರ ನೋಟಿಸ್‌ ಜಾರಿಗೊಳಿಸಿದೆ.

ನ್ಯಾಯಮೂರ್ತಿಗಳಾದ ರೋಹಿಂಟನ್ ಎಫ್‌ ನಾರಿಮನ್‌ , ನವೀನ್‌ ಸಿನ್ಹಾ ಮತ್ತು ಕೆ ಎಂ ಜೋಸೆಫ್‌ ಅವರಿದ್ದ ತ್ರಿಸದಸ್ಯ ಪೀಠವು ಮನವಿಯ ವಿಚಾರಣೆ ನಡೆಸಿತು. ಬೇರೊಬ್ಬ ಅಧಿಕಾರಿಯ ಪತ್ನಿಯ ಜೊತೆ ಅಕ್ರಮ ಲೈಂಗಿಕ ಸಂಬಂಧ ಹೊಂದುವ ಮೂಲಕ ದುರ್ನಡತೆ ತೋರುವ ಸೇನಾ ಪಡೆಯ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಬಹುದು ಎಂದು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು ಈ ವೇಳೆ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ನಾರಿಮನ್‌ ಅವರು ಈ ವಿಷಯವನ್ನು ಮುಖ್ಯ ನ್ಯಾಯಮೂರ್ತಿಯವರು ನಿರ್ಧರಿಸಲಿರುವ ಐವರು ನ್ಯಾಯಮೂರ್ತಿಗಳ ಪೀಠದ ಮುಂದೆ ಇರಿಸಲಾಗುವುದು ಎಂದು ಹೇಳಿದರು.

ಸೇನೆಯಲ್ಲಿ, 'ಸಹೋದರ ಅಧಿಕಾರಿ ಪತ್ನಿಯ ಪ್ರೀತಿ ವಾತ್ಸಲ್ಯವನ್ನು ಕದಿಯುವುದು' - ವ್ಯಭಿಚಾರದ ಬಗೆಗಿನ ಸೌಮ್ಯೋಕ್ತಿ - ಗಂಭೀರ ಅಪರಾಧವಾಗಿದ್ದು ಹೇಡಿತನಕ್ಕೂ ಕೀಳಿನದ್ದಾಗಿದೆ. ಸೇನಾ ನಿಯಮಗಳ ಪ್ರಕಾರ ಇದಕ್ಕೆ ಮರಣದಂಡನೆ ವಿಧಿಸಲು ಸಹ ಅವಕಾಶವಿದೆ.

ಸೇನೆಯಲ್ಲಿ ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ಬಲವನ್ನು ಸೆಕ್ಷನ್‌ 497ರಿಂದ ಪಡೆಯಲಾಗಿತ್ತು. ಆದರೆ, ಈಗ ಸೆಕ್ಷನ್‌ 497 ರದ್ದುಗೊಂಡಿದೆ. ಸೇನಾ ಪಡೆಗಳ ಇತರೆ ವಿಭಾಗಗಳಲ್ಲಿ ಇಂಥದ್ದೇ ನಿಬಂಧನೆಗಳಿವೆ. ಇದರಡಿ ಪ್ರಾಸಿಕ್ಯೂಷನ್‌ ನಡೆಸಿದ ಬಳಿಕ ಆರೋಪಿತ ಅಧಿಕಾರಿ ಸೇವೆಯಿಂದ ವಜಾಗೊಳ್ಳಲಿದ್ದಾರೆ.

“ಪತಿಯನ್ನು ಯಜಮಾನನಂತೆ ಕಾಣುವ” ಹತ್ತೊಂಭತ್ತನೇ ಶತಮಾನದ ಕಾನೂನು ಅಸಾಂವಿಧಾನಿಕ ಎಂದಿದ್ದ ಸುಪ್ರೀಂ ಕೋರ್ಟ್‌ ವಿವಾಹೇತರ ಲೈಂಗಿಕ ಸಂಬಂಧವನ್ನು ಅಪರಾಧೀಕರಣಗೊಳಿಸಿದ್ದ ಐಪಿಸಿಯ ಸೆಕ್ಷನ್‌ 497 ಅನ್ನು 2018ರ ಸೆಪ್ಟೆಂಬರ್‌ನಲ್ಲಿ ರದ್ದುಗೊಳಿಸಿತ್ತು.

ಇನ್ನೊಬ್ಬ ವ್ಯಕ್ತಿಯ ಪತ್ನಿಯ ಜೊತೆ ಆತನ ಸಮ್ಮತಿ ಅಥವಾ ಒಪ್ಪಿಗೆ ಪಡೆಯದೇ ಲೈಂಗಿಕ ಸಂಬಂಧ ಹೊಂದುವುದು ಸೆಕ್ಷನ್‌ 497ರ ಅಡಿ ಅಪರಾಧವಾಗಿದೆ. ಈ ನಿಬಂಧನೆಯ ಅಡಿ ಪುರುಷನನ್ನು ಮಾತ್ರ ವಿಚಾರಣೆಗೆ ಒಳಪಡಿಸಲಾಗುತ್ತದೆಯೇ ಹೊರತು ಮಹಿಳೆಯನ್ನಲ್ಲ.

Also Read
ಅಪರಾಧ ಎಸಗಲು ಜಾಮೀನು ಪರವಾನಗಿಯಲ್ಲ: ಕರ್ನಾಟಕ ಹೈಕೋರ್ಟ್‌

“ವಿವಾಹೇತರ ಲೈಂಗಿಕ ಸಂಬಂಧದ ಕಾನೂನು ಮನಬಂದಂತೆ ರೂಪಿಸಲಾಗಿದ್ದು, ಇದು ಮಹಿಳೆಯ ಘನತೆಗೆ ಧಕ್ಕೆ ಉಂಟು ಮಾಡುತ್ತದೆ” ಎಂದು ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ನೇತೃತ್ವದ ಸಾಂವಿಧಾನಿಕ ಪೀಠವು ತೀರ್ಪು ನೀಡಿತ್ತು.

ಅಂದು ನ್ಯಾಯಮೂರ್ತಿ ನಾರಿಮನ್‌ ಅವರು ಸಾಂವಿಧಾನಿಕ ಪೀಠದ ಭಾಗವಾಗಿದ್ದರೂ ಪ್ರತ್ಯೇಕವಾದ ಆದರೆ ಸಹಮತದ ತೀರ್ಪು ಬರೆದಿದ್ದರು. “ಪ್ರಾಚೀನ ಕಾಲದ ನಂಬಿಕೆಗಳಾದ ಪುರುಷ ಅಪರಾಧ ಎಸಗುವವ, ಮಹಿಳೆ ಸಂತ್ರಸ್ತೆ ಎಂಬ ವಿಚಾರಗಳು ದೀರ್ಘವಾಧಿಯಲ್ಲಿ ಸರಿ ಎನಿಸಿಕೊಳ್ಳುವುದಿಲ್ಲ,” ಎಂದು ನ್ಯಾ. ನಾರಿಮನ್‌ ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದರು.

No stories found.
Kannada Bar & Bench
kannada.barandbench.com