ಟ್ರಾಕ್ಟರ್ ಮೆರವಣಿಗೆ ಹಿಂಸಾಚಾರ: ತಪ್ಪು ಸಮಯದಲ್ಲಿ ತಪ್ಪು ಜಾಗದಲ್ಲಿದ್ದೆ ಎಂದು ದೆಹಲಿ ನ್ಯಾಯಾಲಯಕ್ಕೆ ಸಿಧು‌ ಹೇಳಿಕೆ

ತಾನು ಟ್ರಾಕ್ಟರ್ ಮೆರವಣಿಗೆಗೆ ಕರೆ ನೀಡಿರಲಿಲ್ಲ. ಹಿಂಸಾಚಾರದಲ್ಲಿ ಪಾಲ್ಗೊಂಡ ದಾಖಲೆಯೂ ಇಲ್ಲ. ಸಿಸಿಟಿವಿ ದೃಶ್ಯಾವಳಿ ಸಂಬಂಧಪಟ್ಟವರ ಬಳಿ ಇದೆ. ವಾಸ್ತವವಾಗಿ ಗುಂಪನ್ನು ಸಮಾಧಾನಪಡಿಸಲು ಯತ್ನಿಸಿದ್ದಾಗಿ ಸಿಧು ಹೇಳಿದ್ದಾರೆ.
ಟ್ರಾಕ್ಟರ್ ಮೆರವಣಿಗೆ ಹಿಂಸಾಚಾರ: ತಪ್ಪು ಸಮಯದಲ್ಲಿ ತಪ್ಪು ಜಾಗದಲ್ಲಿದ್ದೆ ಎಂದು ದೆಹಲಿ ನ್ಯಾಯಾಲಯಕ್ಕೆ ಸಿಧು‌ ಹೇಳಿಕೆ

ʼತಪ್ಪು ಸಮಯದಲ್ಲಿ, ತಪ್ಪು ಜಾಗದಲ್ಲಿ ನಾನಿದ್ದೆʼ ಎಂದು ದೆಹಲಿಯ ಕೆಂಪು ಕೋಟೆಯಲ್ಲಿ ಜನವರಿ 26 ರಂದು ನಡೆದ ಹಿಂಸಾಚಾರಕ್ಕೆ ಸಂಚು ರೂಪಿಸಿದ್ದ ಆರೋಪಿ ಪಂಜಾಬಿ ನಟ ದೀಪ್‌ ಸಿಧು ದೆಹಲಿಯ ನ್ಯಾಯಾಲಯವೊಂದಕ್ಕೆ ಬುಧವಾರ ತಿಳಿಸಿದ್ದಾರೆ.

ನಟ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ತೀಸ್‌ ಹಜಾರಿ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ನಿಲೋಫರ್ ಅಬೀದಾ ಪರ್ವೀನ್ ಅವರು ನಡೆಸಿದರು.

ಸಿಧು ಪ್ರಕರಣ ಮಾಧ್ಯಮ ವಿಚಾರಣೆಗೆ ಅತ್ಯುತ್ತಮ ಉದಾಹರಣೆಯಾಗಿದ್ದು ಅವರು ತಮ್ಮ ಮೂಲಭೂತ ಹಕ್ಕು ಚಲಾಯಿಸುತ್ತಿದ್ದ ಶಾಂತಿಯುತ ಪ್ರತಿಭಟನಾಕಾರರಾಗಿದ್ದರು ಎಂದು ಸಿಧು ಪರ ವಕೀಲ ಅಭಿಷೇಕ್‌ ಗುಪ್ತ ವಾದಿಸಿದರು.

ಸಿಧು ತಪ್ಪಾದ ಸಮಯದಲ್ಲಿ ತಪ್ಪಾದ ಜಾಗದಲ್ಲಿದ್ದರು. ಅವರು ಅಪರಾಧಿಯಲ್ಲ. ಅವರು ಉಪಸ್ಥಿತರಿದ್ದರು ಎಂಬ ಮಾತ್ರಕ್ಕೆ ಕಾನೂನುಬಾಹಿರ ಸಭೆಯ ಭಾಗವಾಗುವುದಿಲ್ಲ. ಹಿಂಸಾಚಾರ ಅಥವಾ ಪ್ರಚೋದನೆಯ ಸಾಮಾನ್ಯ ಸಂಗತಿ ಇಬ್ಬರೊಳಗೂ ಇರಬೇಕು ಎಂದು ಗುಪ್ತ ಹೇಳಿದರು.

“ನಾನು ಶಾಂತಿಯುತ ಪ್ರತಿಭಟನಾಕಾರನಾಗಿ ಅಲ್ಲಿಗೆ ಹೋಗಿದ್ದೆ. ಪಶ್ಚಾತ್ತಾಪದಲ್ಲಿ ತಪ್ಪೆಸಗಿದೆ ಆದರೆ ಅದು ಅಪರಾಧವೇ? ಎಂದು ಸಿಧು ನ್ಯಾಯಾಲಯವನ್ನು ಪ್ರಶ್ನಿಸಿದರು. ತಾನು ಟ್ರಾಕ್ಟರ್‌ ಮೆರವಣಿಗೆಗೆ ಕರೆ ನೀಡಿರಲಿಲ್ಲ. ಹಿಂಸಾಚಾರದಲ್ಲಿ ಪಾಲ್ಗೊಂಡ ದಾಖಲೆಯೂ ಇಲ್ಲ. ಸಿಸಿಟಿವಿ ದೃಶ್ಯಾವಳಿ ಸಂಬಂಧಪಟ್ಟವರ ಬಳಿ ಇದೆ. ವಾಸ್ತವವಾಗಿ ಗುಂಪನ್ನು ಸಮಾಧಾನಪಡಿಸಲು ಯತ್ನಿಸಿದ್ದಾಗಿ ಅವರು ಹೇಳಿದ್ದಾರೆ.

ಸಿಧು ಧ್ವಜವನ್ನು ಹಾರಿಸಿಲ್ಲ. ಧ್ವಜ ಹಾರಿಸುವುದು ಅಪರಾಧವೇ ಎಂಬುದು ಕೂಡ ಚರ್ಚಾಸ್ಪದ ವಿಷಯವಾಗಿದೆ. ಅವರು ಧ್ವಜವನ್ನೂ ಹಾರಿಸಿಲ್ಲ ಅಥವಾ ಹಾರಿಸಲು ಯಾರನ್ನೂ ಕೇಳಲಿಲ್ಲ. ನಿಶಾನ್‌ ಸಾಹೀಬ್‌ ಧ್ವಜವನ್ನು ಗುರುದ್ವಾರಗಳಲ್ಲಿ ಹಾರಿಸಲಾಗುತ್ತದೆ. ಘೋಷಣೆಗಳು ಧಾರ್ಮಿಕ ಸ್ವರೂಪದ್ದಾಗಿದ್ದು ಹಿಂಸೆಯನ್ನು ಪ್ರಚೋದಿಸುತ್ತಿಲ್ಲ ಎಂದು ಗುಪ್ತಾ ವಾದಿಸಿದರು.

ಇದಕ್ಕೆ ಪ್ರತಿಯಾಗಿ ಪ್ರಾಸಿಕ್ಯೂಷನ್‌, ಸಿಧು ಅವರು ಭಾರತಕ್ಕೆ ಅಪಖ್ಯಾತಿ ತರುವ ಸಂಚಿನ ಭಾಗವಾಗಿದ್ದರು ಎಂದು ವಾದಿಸಿತು. ಕೆಂಪು ಕೋಟೆ ಅತಿ ಭದ್ರತೆ ಇರುವ ಪ್ರದೇಶ. ಮೂಲಭೂತ ಹಕ್ಕಿನ ಹೆಸರಿನಲ್ಲಿ ನೀವು ಏನನ್ನು ಬೇಕಾದರೂ ಮಾಡಬಹುದೇ? ಎಂದು ಪ್ರಶ್ನಿಸಿತು.

ಜಾಮೀನು ಅರ್ಜಿಯ ವಿಚಾರಣೆ ಏಪ್ರಿಲ್ 12 ರಂದು ಮುಂದುವರಿಯಲಿದೆ. ಎರಡೂ ಪಕ್ಷಗಳು ತಾವು ಅವಲಂಬಿಸಿರುವ ವೀಡಿಯೊಗಳ ಪ್ರತಿ ಒದಗಿಸುವಂತೆ ನ್ಯಾಯಾಲಯ ಸೂಚಿಸಿದೆ. ಕೆಂಪುಕೋಟೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಧು ಅವರನ್ನು ಫೆಬ್ರವರಿ 9ರಂದು ಬಂಧಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com